ಕೋಲಾರ: ಕೆಎಸ್‌ಆರ್‌ಟಿಸಿ (KSRTC) ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬಸ್ ಇಳಿಯುವಾಗ ಆತುರದಲ್ಲಿ ತಮ್ಮ ವಸ್ತುಗಳನ್ನು ಬ್ಯಾಗ್‌ಗಳನ್ನು ಬಿಟ್ಟು ಹೋದ ಘಟನೆಗಳು ನಡೆಯುತ್ತಲೇ ಇರುತ್ತದೆ. ಹೀಗೆ ಬಿಟ್ಟು ಹೋದ ಪ್ರಯಾಣಿಕರ ಬ್ಯಾಗ್‌ಗಳನ್ನು ಪುನಃ ತಲುಪಿಸುವ ಕೆಲಸವನ್ನು ನಿರ್ವಾಹಕರು, ಚಾಲಕರು ಅನೇಕ ಬಾರಿ ಮಾಡಿದ್ದಾರೆ. ಇಂತಹದ್ದೇ ಪ್ರಾಮಾಣಿಕ ಕೆಲಸವನ್ನು ಕೆಎಸ್‌ಆರ್‌ಟಿಸಿ ಕೋಲಾರ ಘಟಕದ ನಿರ್ವಾಹಕರು ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶುಕ್ರವಾರ ಕೋಲಾರ ಡಿಪೋದಿಂದ ಹೊರಟ KA 27 F 1507 ನಂಬರ್ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ್ ಅನ್ನು ಮರೆತು ಹೋಗಿದ್ದರು. ಇದನ್ನು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಗಮನಿಸಿ ಬ್ಯಾಗ್ ತೆರೆದು ನೋಡಿದಾಗ 3.42 ಲಕ್ಷ ರೂ. ಹಾಗೂ ಪ್ರಯಾಣಿಕನ ದಾಖಲಾತಿಗಳು ಇದ್ದವು.
ಕಂಡಕ್ಟರ್ ಶಿವಾನಂದ ಹಾಗೂ ಚಾಲಕ ಸಂಜಯ್ ಕೂಡಲೆ ಸಹಾಯಕ ಸಂಚಾರ ನಿರೀಕ್ಷಕ ಗಿರಿಗೌಡರಿಗೆ ಮಾಹಿತಿ ರವಾನಿಸಿದರು. ಬ್ಯಾಗ್ ವಾರಸುದಾರ ಸೈಯದ್ ಪಾಷಾ ಎಂದು ಬ್ಯಾಗ್‌ನಲ್ಲಿದ್ದ ದಾಖಲೆಗಳಿಂದ ತಿಳೀದುಬಂದಿತು.
ಅದರಲ್ಲಿದ್ದ ಸಂಫರ್ಕ ಸಂಖ್ಯೆಯನ್ನು ಬಳಸಿ ದೂರವಾಣಿ ಕರೆ ಮಾಡಲಾಯಿತು. ಕೊನೆಗೆ ಸೈಯದ್ ಪಾಷಾ ಅವರನ್ನು ಕರೆಸಿಕೊಂಡು ಬ್ಯಾಗನ್ನು ಹಸ್ತಾಂತರ ಮಾಡಲಾಯಿತು. ಸಿಬ್ಬಂದಿಯ ಪ್ರಾಮಾಣಿಕ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಶನಿವಾರ KSRTCಯ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ; ಇಲ್ಲಿವೆ ಎರಡು ಉದಾಹರಣೆ!