ಬೆಂಗಳೂರು: ರಾಜ್ಯದಲ್ಲಿ ಜಾರಿಗೆ ಬಂದಿರುವ ಮಹಿಳೆಯರ ಉಚಿತ ಪ್ರಯಾಣದ (Free Bus service) ಶಕ್ತಿ ಯೋಜನೆ (Shakti scheme) ರಾಜ್ಯ ಸರ್ಕಾರಿ ರಸ್ತೆ ಸಾರಿಗೆ ಸಂಸ್ಥೆಗೆ (KSRTC) ಹೊಸ ಶಕ್ತಿಯನ್ನು ತುಂಬಿದೆ. ಇದರಿಂದ ಉತ್ತೇಜಿತವಾಗಿರುವ ಸರ್ಕಾರ ಸಂಸ್ಥೆಯ ಸೇವೆಯನ್ನು ಇನ್ನಷ್ಟು ವ್ಯವಸ್ಥಿತಗೊಳಿಸಲು ನಿರ್ಧರಿಸಿದೆ. ಇದರ ಭಾಗವಾಗಿ ಕೆಎಸ್‌ಆರ್‌ಟಿಸಿಗೆ ಹೊಸದಾಗಿ 4000 ಬಸ್ ಖರೀದಿಸಲು ಮತ್ತು 13000 ಚಾಲಕರು, ಕಂಡಕ್ಟರ್‌ಗಳು (Drivers and conductors) ಮತ್ತು ಮೆಕ್ಯಾನಿಕ್‌ಗಳನ್ನು ನೇಮಿಸಿಕೊಳ್ಳಲು (KSRTC Recruitment) ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಗುರುವಾರ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ಶಕ್ತಿ ಯೋಜನೆಯಿಂದಾಗಿ ಕೆಎಸ್‌ಆರ್‌ಟಿಸಿಯ ಆದಾಯ ಹೆಚ್ಚಾಗಿದೆ. ಹೀಗಾಗಿ ಸೇವೆಯನ್ನು ಇನ್ನಷ್ಟು ಚೆನ್ನಾಗಿ ನೀಡಲು ನಿರ್ಧರಿಸಲಾಗಿದೆ ಎಂದರು.
ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಗೆ ಮುಂದಿನ 9 ತಿಂಗಳಲ್ಲಿ 2900 ಕೋಟಿ ರೂ. ಬೇಕಾಗುತ್ತದೆ. ಸರ್ಕಾರ ಇದನ್ನು ಒದಗಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ನಾವು ಕೆಎಸ್‌ಆರ್‌ಟಿಸಿಗೆ ಹೊಸದಾಗಿ 4000 ಬಸ್‌ಗಳನ್ನು ಖರೀದಿ ಮಾಡಲು ನಿರ್ಧರಿಸಿದ್ದೇವೆ. ಶಕ್ತಿ ಯೋಜನೆಯಡಿ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಬಸ್ ಹತ್ತುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪುರುಷರ ಪ್ರಯಾಣಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪಗಳನ್ನು ನಿವಾರಿಸುವ ಉದ್ದೇಶದಿಂದ ಬಸ್‌ಗಳ ಖರೀದಿ ಮಾಡಲಾಗುತ್ತಿದೆ. ಮಹಿಳೆಯರ ಓಡಾಟದಿಂದ ವಿದ್ಯಾರ್ಥಿಗಳು ಮತ್ತು ಪುರುಷರ ಓಡಾಟಕ್ಕೆ ತೊಂದರೆಯಾಗಬಾರದು ಎಂಬ ಕಳಕಳಿಯನ್ನು ಸರಕಾರ ಹೊಂದಿದೆ. ಇದರ ಜತೆಗೆ ನಾವು 13,000 ಹೊಸ ಚಾಲಕರು, ಕಂಡಕ್ಟರ್‌ಗಳು ಮತ್ತು ಮೆಕ್ಯಾನಿಕ್‌ಗಳನ್ನು ನೇಮಕ ಮಾಡಿಕೊಳ್ಳಲಿದ್ದೇವೆ ಎಂದೂ ಸಿದ್ದರಾಮಯ್ಯ ಪ್ರಕಟಿಸಿದರು.
ಜೂನ್ 11ರಿಂದ ಆರಂಭವಾದ ಶಕ್ತಿ ಯೋಜನೆಯಡಿ ಒಂದು ತಿಂಗಳು ಒಂದು ದಿನ ಅಂದರೆ ಜುಲೈ 12ರವರೆಗೆ ಒಟ್ಟು 18 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಇದರಿಂದ ದೊಡ್ಡ ಮಟ್ಟದ ಪ್ರಯೋಜನ ಆಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕಂಡಿಷನ್ ಪ್ರಶ್ನಿಸಿದ ಬಿಜೆಪಿ ನಾಯಕರಿಗೆ ತರಾಟೆ
ಗ್ಯಾರಂಟಿ ಸ್ಕೀಮ್‌ಗಳಿಗೆ ಸರ್ಕಾರ ಕಂಡಿಷನ್‌ಗಳನ್ನು ಹಾಕುತ್ತಿದೆ, ಈ ಮೂಲಕ ಮೋಸ ಮಾಡುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಗಳಿಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅವರು, ನಾವು ದೊಡ್ಡ ಮಟ್ಟದಲ್ಲಿ ಯಾವುದೇ ಕಂಡಿಷನ್‌ಗಳನ್ನು ಹಾಕಿಲ್ಲ. ಯಾವ ರಾಜಕೀಯ ಪಕ್ಷವೂ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಷರತ್ತುಗಳನ್ನು ಪ್ರಕಟಿಸುವುದಿಲ್ಲ ಎಂದು ಹೇಳಿದರು.
ಯಾರು ಏನೇ ಅಪಪ್ರಚಾರ ಮಾಡಿದರೂ ಶಕ್ತಿ ಯೋಜನೆ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಮಹಿಳೆಯರು ಸಂತುಷ್ಟರಾಗಿದ್ದಾರೆ. 18 ಕೋಟಿ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದರೆ ಅವರ ಸಬಲೀಕರಣ ಮಾಡಿದಂತಾಗಲಿಲ್ಲವೇ? ಅವರ ಹಣ ಉಳಿತಾಯವಾಗಲಿಲ್ಲವೇ ಈಗ ಮಹಿಳೆಯರು ಯಾವುದೇ ಸಮಸ್ಯೆ ಇಲ್ಲದೆ ದೇವಸ್ಥಾನಗಳಿಗೆ ತಮ್ಮ ತವರು ಮನೆಗೆ ಹೋಗಿ ಬರುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡರು ಸಿದ್ದರಾಮಯ್ಯ.
ಇದನ್ನೂ ಓದಿ:
ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಪ್ರಶಂಸೆ
ಸರ್ಕಾರದ ಶಕ್ತಿ ಯೋಜನೆಯನ್ನು ಪ್ರಶಂಸಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇದರಿಂದ ಮಹಿಳೆಯರಿಗೆ ಒಳ್ಳೆಯದಾಗಿದೆ ಎಂದು ಹೇಳಿರುವ ಹೆಗ್ಗಡೆಯವರು, ಧರ್ಮಸ್ಥಳಕ್ಕೆ ಬರುವ ಕೆಲವು ಮಹಿಳಾ ಭಕ್ತರು ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡಿಸುತ್ತಿದ್ದಾರೆ ಎಂದೂ ಉಲ್ಲೇಖಿಸಿದ್ದಾರೆ.