ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ (Kukke Subramanya), ಸುಳ್ಯ ಭಾಗದಲ್ಲಿ ಕುಮಾರಧಾರ ನದಿಯು ತುಂಬಿ ಹರಿಯುತ್ತಿದೆ. ಈ ನಡುವೆ ಸೇತುವೆ ದಾಟುತ್ತಿದ್ದಾಗ ಹೊಳೆಯಲ್ಲಿ ಏಕಾಏಕಿ ನೀರು ಉಕ್ಕಿ ಹರಿದ ಹಿನ್ನೆಲೆಯಲ್ಲಿ ಮಹೀಂದ್ರಾ ಪಿಕ್‌ಅಪ್ ವಾಹನ ಕೊಚ್ಚಿಕೊಂಡು ಹೋಗಿದ್ದು, ಚಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಸುಬ್ರಹ್ಮಣ್ಯ ಸಮೀಪದ ಕಲ್ಮಕಾರಿನಲ್ಲಿ ನದಿ ನೀರಿನ ಹೆಚ್ಚಳವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಬಳಿ ಹೊಳೆಗೆ ನಿರ್ಮಿಸಲಾದ ಸೇತುವೆ ಮೇಲೆ ಶುಕ್ರವಾರ ತೆಂಗಿನಕಾಯಿ ಲೋಡ್ ಮಾಡಿಕೊಂಡು ಪಿಕಪ್‌ಅಪ್ ವಾಹನ ಹೋಗುತ್ತಿತ್ತು,. ಈ ವೇಳೆ ಏಕಾಏಕಿ ನೀರು ಉಕ್ಕಿ ಹರಿದಿದೆ. ನೀರಿನ ರಭಸಕ್ಕೆ ಪಿಕ್ ಅಪ್ ವಾಹನ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ತಕ್ಷಣ ಸ್ಥಳೀಯರು ಧಾವಿಸಿ ಚಾಲಕನನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ | Self Harming : ವೆಗಾ ಸಿಟಿ ಮಾಲ್ ಮೇಲಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ
ಸ್ಕೂಟರ್ ಪಲ್ಟಿಯಾಗಿ ದಂಪತಿ ನರಳಾಟ; ನೆರವಿಗೆ ಧಾವಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ: ಸವಾರನ ನಿಯಂತ್ರಣ ತಪ್ಪಿದ ಸ್ಕೂಟರ್ ಅಪಘಾತಕ್ಕೀಡಾಗಿದ್ದು, ನಡು ರಸ್ತೆಯಲ್ಲಿ ದಂಪತಿ (Road Accident) ಗೋಳಾಡಿದ್ದಾರೆ. ಶಿವಮೊಗ್ಗದ ಸಾಗರ ತಾಲೂಕಿನ ಆನಂದಪುರ ಸಮೀಪದ ಹೊಸಗುಂದ ಬಳಿ ಘಟನೆ ನಡೆದಿದೆ. ಸ್ಕೂಟರ್ ಪಲ್ಟಿಯಾದ ಹಿನ್ನೆಲೆಯಲ್ಲಿ ದಂಪತಿ ರಸ್ತೆ ಬದಿ ಬಿದ್ದು ನರಳಾಡುತ್ತಿದ್ದರು. ಇದೇ ಮಾರ್ಗದಲ್ಲಿ ಆನಂದಪುರ ಕಡೆಗೆ ಆಗಮಿಸುತ್ತಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ನೆರವಿಗೆ ಧಾವಿಸಿದ್ದಾರೆ.
ಅಪಘಾತದಿಂದ ಒದ್ದಾಡುತ್ತಿದ್ದ ಗಾಯಾಳು ದಂಪತಿಯನ್ನು ಕೂಡಲೇ ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅದೃಷ್ಟವಶಾತ್ ಶಾಸಕರ ಸಮಯ ಪ್ರಜ್ಞೆಯಿಂದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಸನದಲ್ಲಿ ಕುಡುಕ ಚಾಲಕನಿಗೆ ಧರ್ಮದೇಟು
ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿದ ಚಾಲಕನೊಬ್ಬ ಸಾರಿಗೆ ಬಸ್‌ಗೆ ಅಡ್ಡ ಹಾಕಿದ್ದಾನೆ. ಬಳಿಕ ಬಸ್‌ವೊಳಗೆ ಹೋಗಿ ಬಸ್ ಡೈವರ್‌ಗೆ ಅವಾಜ್ ಹಾಕಿದ್ದಾನೆ. ಇದರಿಂದ ಸಿಟ್ಟಾದ ಚಾಲಕ ಹಾಗೂ ಪ್ರಯಾಣಿಕರು ಕುಡುಕನಿಗೆ ಧರ್ಮದೇಟು ನೀಡಿದ್ದಾರೆ.
ಹಾಸನ: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದಲ್ಲದೇ, ಕುಡುಕನೊಬ್ಬ ಸಾರಿಗೆ ಬಸ್‌ಗೆ ಅಡ್ಡಲಾಗಿ ಕಾರು ನಿಲ್ಲಿಸಿ ಅವಾಜ್ ಹಾಕಿದ್ದಾನೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಭೈರಾಪುರ ಬಳಿ ಘಟನೆ ನಡೆದಿದೆ. ಬಸ್‌ವೊಳಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಕುಡುಕನಿಗೆ ಜನರು ಧರ್ಮದೇಟು ನೀಡಿದ್ದಾರೆ.
ಇದನ್ನೂ ಓದಿ | Viral Video: ತನ್ನಿಂದಲೇ ಅತ್ಯಾಚಾರಕ್ಕೊಳಗಾಗಿದ್ದ ಯುವತಿಯ ಅಪಹರಣಕ್ಕೆ ಯತ್ನ; ಕತ್ತಿ ಝಳಪಿಸಿ ಕಿಡಿಗೇಡಿಯ ಅಟ್ಟಹಾಸ-ವಿಡಿಯೋ ಇದೆ
ಸಾರಿಗೆ ಬಸ್ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿತ್ತು. ಕಂಠಪೂರ್ತಿ ಕುಡಿದು ಹಾಸನದ ಕಡೆಗೆ ಬರುತ್ತಿದ್ದ ಕಾರು ಚಾಲಕ, ಅದೇ ಮತ್ತಿನಲ್ಲಿ ಎದುರಿಗೆ ಬಂದ ಬಸ್‌ಗೆ ಅಡ್ಡಹಾಕಿದ್ದಾನೆ. ಮಾತ್ರವಲ್ಲ ಬಸ್ಸಿನಲ್ಲಿ ಇದ್ದವರಿಗೆ ಅವಾಜ್ ಹಾಕಿ ನಿಂದಿಸಿದ್ದಾನೆ. ಈತನ ಹುಚ್ಚಾಟಕ್ಕೆ ಸಿಟ್ಟಾದ ಪ್ರಯಾಣಿಕರು, ಚಾಲಕನೊಟ್ಟಿಗೆ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.