ಧಾರವಾಡ: ಪಿಎಸ್‌ಐ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನಾನು ನ್ಯಾಯ ಕೊಡಲು ಸಾಧ್ಯವಿಲ್ಲ. ನಮ್ಮ ಪಕ್ಷ ಅಧಿಕಾರದಲ್ಲಿಲ್ಲ. ಬಿಜೆಪಿ ಸರ್ಕಾರ ಈಗಾಗಲೇ ಪರೀಕ್ಷೆ ರದ್ದು ಮಾಡಿದೆ. ಮನವಿ ಕೊಡಲು ಬರುವವರು ಮುತ್ತಿಗೆ ಹಾಕುವ ರೀತಿಯಲ್ಲಿ ನುಗ್ಗಿದ್ದಾರೆ, ಪೊಲೀಸರು ಸರಿಯಾದ ಭದ್ರತೆ ಒದಗಿಸಿಲ್ಲ ಎಂದು ಮಾಜಿ ಸಿಎಂ HD ಕುಮಾರಸ್ವಾಮಿ ಕಿಡಿ ಕಾರಿದರು.
ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕಾಗಿ ಜಿಲ್ಲೆಗೆ ಭೇಟಿ ನೀಡಿದ್ದಾಗ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದ ನಗರದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಶನಿವಾರ ಕುಮಾರಸ್ವಾಮಿ ತೆರಳಿದ್ದರು. ಆಗ ಮಾಜಿ ಸಿಎಂ ಕಾರಿಗೆ ಪಿಎಸ್‌ಐ ಅಭ್ಯರ್ಥಿಗಳು ಮುತ್ತಿಗೆ ಹಾಕಿ ತಮಗೆ ನ್ಯಾಯ ಕೊಡಿಸಿ ಎಂಬ ಪಟ್ಟು ಹಿಡಿದಿದ್ದರು. ಈ ವೇಳೆ ಒಬ್ಬ ಗನ್‌ಮ್ಯಾನ್ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದ್ದು, ಅಲ್ಲಿಂದ ಹೊರಡುವಾಗ ಮೋದಿ, ಮೋದಿ ಎಂದು ಘೋಷಣೆ ಕೂಗಿರುವುದಾಗಿ ಎಚ್‌ಡಿಕೆ ಆರೋಪಿಸಿದ್ದಾರೆ.
ಅವರು ಮನವಿ ಮಾಡಲು ಬಂದವರಲ್ಲ, ರೌಡಿಸಂ ಮಾಡಲು ಜಿಲ್ಲೆಗೆ ಬಂದಿದ್ದಾರೆ. ಯಾರೋ ಉದ್ದೇಶಪೂರ್ವಕವಾಗಿ ಅವರನ್ನು ಕಳುಹಿಸಿದ್ದಾರೆ. ಇದನ್ನು ನಾನು ಬಹಳ ದಿನದಿಂದ ನೋಡಿದ್ದೇನೆ. ಗೃಹಸಚಿವರು ಸರಿಯಾಗಿ ಭದ್ರತೆ ವ್ಯವಸ್ಥೆ ಮಾಡಬೇಕು. ಮೋದಿ ಮೋದಿ ಅಂತ ಘೋಷಣೆ ಹಾಕುವವರು ಪ್ರಧಾನಿ ಬಳಿಯೇ ಹೋಗಿ ಕೇಳಲಿ ಎಂದು ಹೇಳಿದರು.
ಇದನ್ನೂ ಓದಿ | ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ ಅಲ್ಲ ಎಂದ ಎಚ್.ಡಿ. ಕುಮಾರಸ್ವಾಮಿ
ಸಿದ್ದರಾಮಯ್ಯ ತಮ್ಮ ಮೇಲೆಯೇ ಚಪ್ಪಡಿ ಎಳೆದುಕೊಂಡಿದ್ದಾರೆ!
ರಾಜ್ಯಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿಲ್ಲ, ಬದಲಾಗಿ ತಮ್ಮ ಮೇಲೆ ಚಪ್ಪಡಿ ಎಳೆದುಕೊಂಡಿದ್ದಾರೆ ಎಂದು ರಾಜ್ಯಸಭೆ ಚುನಾವಣೆ ಬಗ್ಗೆ ಹುಬ್ಬಳ್ಳಿಯಲ್ಲಿ HD ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಸದಸ್ಯರ ಸಂಖ್ಯಾಬಲದ ಮೇಲೆ ಬಿಜೆಪಿ ಇಬ್ಬರು, ಕಾಂಗ್ರೆಸ್‌ನ ಒಬ್ಬ ಸದಸ್ಯ ಗೆಲ್ಲುತ್ತಾರೆ. ಆದರೆ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ, ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿರುವ ವಿಚಾರ.
ಆದರೂ ಬಿಜೆಪಿಯ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಹಾಗೂ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು, ತಮ್ಮ ಪಕ್ಷದಿಂದ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸಿದ್ದಾರೆ. ತೋರಿಕೆಗಾಗಿ ತಾವು ಅಲ್ಪಸಂಖ್ಯಾತರ ಪರ ಎಂಬುವುದನ್ನು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಪಕ್ಷದ 32 ಅಭ್ಯರ್ಥಿಗಳ ಮತವೂ ಜೆಡಿಎಸ್ ಅಭ್ಯರ್ಥಿಗೆ ಸಿಗಲಿದೆ. ಅಡ್ಡ ಮತದಾನ ಅಷ್ಟು ಸುಲಭವಲ್ಲ. 2016ರಲ್ಲಿ ಅಡ್ಡ ಮತದಾನ ಹಾಕಿದ ಏಳು ಜನರಲ್ಲಿ ನಾಲ್ವರ ಸ್ಥಿತಿ ಏನಾಯಿತು ಎಂಬುವುದು ಎಲ್ಲರಿಗೂ ತಿಳಿದ ವಿಚಾರ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಬಹುಕಾಲದ ಸ್ನೇಹಿತರು. ಆದರೆ ಚುನಾವಣೆ ಬಗ್ಗೆ ಖರ್ಗೆ ಅವರ ಬಳಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿದರು.
ಜಾಮಿಯಾ ಮಸೀದಿಯಲ್ಲಿ ದೇವಸ್ಥಾನ ಇರುವುದು ನಿಜ
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಳಿ ದೇವಸ್ಥಾನ ಇರುವುದು ನಿಜ. ದೇವಸ್ಥಾನ ಉಳಿಯಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಲ್ಲಿನ ದೇವಸ್ಥಾನ ಉಳಿಸಬೇಕು ಎಂದು ಕೆಲವರು ಹೊರಟಿದ್ದಾರೆ. ಆದರೆ ಭಾರತೀಯ ಪುರಾತತ್ವ ಇಲಾಖೆಯ ಕಠಿಣ ನಿಯಮಗಳಿಂದ ಅಲ್ಲಿನ ಜನ ಮನೆ ಕಟ್ಟಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಈ ನಡುವೆ ಹೋರಾಟಗಾರರ ಉದ್ದೇಶವೇ ಬೇರೆ ಇದೆ. ಇತಿಹಾಸವನ್ನು ಕೆಣಕಲು ಹೊರಟಿದ್ದಾರೆ ಎಂಬುವುದು ಗೊತ್ತು. ನಮ್ಮ ಉದ್ದೇಶ ಎಲ್ಲ ಧರ್ಮಗಳು ಉಳಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಶ್ರೀರಂಗಪಟ್ಟಣ ಚಲೋ | ಬನ್ನಿ ಮಂಟಪದ ಬಳಿ ಹೈಟೆನ್ಷನ್