Site icon Vistara News

Karnataka Politics: ಮಾತು ಬದಲಿಸುವ ಎಚ್‌ಡಿಕೆ ಕಂಡು ಗೋಸುಂಬೆಯೇ ನಾಚಿಕೊಳ್ಳುತ್ತದೆ: ಕಾಂಗ್ರೆಸ್‌ ಕಿಡಿ

HD Kumaraswamy

ಬೆಂಗಳೂರು: ಮೊದಲು ಮೈತ್ರಿ ಸರ್ಕಾರವನ್ನು ಉರುಳಿಸಿದ್ದು ಯಡಿಯೂರಪ್ಪನವರು ಎಂದಿರಿ, ನಂತರ ಮೈತ್ರಿ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯನವರು ಎಂದಿರಿ, ಈಗ ಡಿ.ಕೆ. ಶಿವಕುಮಾರ್ ಅವರು ಮೈತ್ರಿ ಸರ್ಕಾರ (Karnataka Politics) ಬೀಳಿಸಿದರು ಎನ್ನುತ್ತಿದ್ದೀರಿ. ಮಾತು ಬದಲಿಸುವ ನಿಮ್ಮ ನಾಲಿಗೆಯನ್ನು ಕಂಡು ಬಣ್ಣ ಬದಲಿಸುವ ಗೋಸುಂಬೆಯೂ ನಾಚಿಕೊಳ್ಳುತ್ತದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಗ್ಗೆ ರಾಜ್ಯ ಕಾಂಗ್ರೆಸ್‌ ಕಿಡಿಕಾರಿದೆ.

ಮೈತ್ರಿ ಸರ್ಕಾರ ಉರುಳಲು ಡಿಕೆಶಿ ಕಾರಣ ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್‌, ಜೆಡಿಎಸ್ ಪಕ್ಷವನ್ನು ಬಿಜೆಪಿಯ ಕಾಲ ಬುಡದಲ್ಲಿ ನೈವೇದ್ಯಕ್ಕೆ ಇಟ್ಟು ನೀವು ಹಾಗೂ ನಿಮ್ಮ ಫ್ಯಾಮಿಲಿ ಬಿಜೆಪಿಯ ಜೀತ ಮಾಡಿಕೊಂಡಿರುವ ಕಾಲ ಶೀಘ್ರದಲ್ಲಿ ಬರಲಿದೆ. ಅಂದು ಶಾಸಕರನ್ನು ಅಪಹರಿಸಿ ಸ್ಪೆಷಲ್ ಫ್ಲೈಟ್ ಹತ್ತಿಸಿ ಕಳಿಸಿದವರೊಂದಿಗೆ ಇಂದು ಕುಳಿತು ನಾಲಿಗೆ ಹೊರಳಿಸುತ್ತಿರುವ ನಿಮಗೆ ಕನಿಷ್ಠ ಲಜ್ಜೆ ಎಂಬುದಿಲ್ಲದಾಗಿದ್ದು ದುರಂತ ಎಂದು ಹೇಳಿದೆ.

ಒಕ್ಕಲಿಗ ಸಮುದಾಯ ಡಿ.ಕೆ‌. ಶಿವಕುಮಾರ್ ಅವರ ಬೆನ್ನಿಗೆ ನಿಂತಿರುವುದನ್ನು ಕುಮಾರಸ್ವಾಮಿ ಅವರಿಗೆ ಸಹಿಸಲಾಗುತ್ತಿಲ್ಲ. ಜಾತ್ಯತೀತ ಸಿದ್ಧಾಂತಕ್ಕೆ ಬೆಂಕಿ ಇಟ್ಟಾದರೂ ಸರಿ, ಅಲ್ಪಸಂಖ್ಯಾತ ಮತದಾರರಿಗೆ ದ್ರೋಹ ಬಗೆದಾದರೂ ಸರಿ ಎಂದು ಬಿಜೆಪಿ ಜತೆ ಸಖ್ಯ ಬೆಳೆಸಿ ಷಡ್ಯಂತ್ರ ರೂಪಿಸಲು ತಯಾರಾಗಿದ್ದಾರೆ. ಕುಮಾರಸ್ವಾಮಿಯವರೇ, ನಿಮ್ಮ ಯಾವ ಷಡ್ಯಂತ್ರಗಳೂ ಫಲ ಕೊಡುವುದಿಲ್ಲ ಎಂದು ಕಾಂಗ್ರೆಸ್‌ ತಿಳಿಸಿದೆ.

ಇದನ್ನೂ ಓದಿ | MLA Muniratna : ನನ್ನ ಕ್ಷೇತ್ರದ ಅನುದಾನ ವಾಪಸ್‌ಗಾಗಿ ಡಿಕೆಶಿ ಕಾಲು ಹಿಡಿಯುತ್ತೇನೆ: ಮುನಿರತ್ನ

ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರ ಅಭಿಪ್ರಾಯವನ್ನೂ ಕೇಳದೆ, ಜೆಡಿಎಸ್ ಶಾಸಕರ, ನಾಯಕರಲ್ಲಿ ಚರ್ಚೆಯನ್ನೂ ಮಾಡದೆ ಏಕಾಏಕಿ ಜಾತ್ಯತೀತತೆಯನ್ನು ತೊರೆದು ಕೋಮುವಾದಿಗಳ ಜತೆ ಮೈತ್ರಿ ಮಾಡಿಕೊಂಡಿರುವ ಎಚ್‌ಡಿಕೆಯವರೇ, ಅಮಿತ್ ಶಾ ನಿಮ್ಮನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಹಾಕಿರುವ ಷರತ್ತುಗಳೇನು? ತಿಹಾರ್ ಜೈಲಿನ ಪ್ರಸ್ತಾಪದ ಹಿಂದಿರುವ ಷಡ್ಯಂತ್ರವೇನು? ಡಿ.ಕೆ ಶಿವಕುಮಾರ್ ಅವರ ಬಗ್ಗೆ ಟೀಕೆಯ ಹಿಂದಿರುವುದು ಅವರ ಮೇಲಿನ ಭಯವೇ ಅಥವಾ ಬಿಜೆಪಿ ಒತ್ತಡವೇ ಎಂದು ಪ್ರಶ್ನಿಸಿದೆ.

ಡಿಕೆಶಿ ಅವರ ಬಗ್ಗೆ ಪುಂಖಾನುಪುಂಖವಾಗಿ ಟೀಕೆ ಮಾಡುತ್ತಿರುವ ಮಾಜಿ ಸಿಎಂ, ಈಗ ಆಡುತ್ತಿರುವ ಮಾತುಗಳು ನಾಲ್ಕು ವರ್ಷಗಳ ಹಿಂದೆ ತಮಗೆ ನೆನಪಿರಲಿಲ್ಲವೇ? ಸಿಎಂ ಕುರ್ಚಿ ಬೇಕಿದ್ದಾಗ ಡಿ.ಕೆ.ಶಿವಕುಮಾರ್ ಒಳ್ಳೆಯವರು, ಬಿಜೆಪಿ ಜತೆ ಸೇರಿದಾಗ ಏಕಾಏಕಿ ಡಿ.ಕೆ. ಶಿವಕುಮಾರ್ ಕೆಟ್ಟವರಾಗಿಬಿಟ್ಟರೇ? ಅಂದು ಸಿಎಂ ಕುರ್ಚಿಗಾಗಿ ಡಿ.ಕೆ. ಶಿವಕುಮಾರ್ ಅವರ ಕೈ ಹಿಡಿದು ಪೋಸ್ ಕೊಟ್ಟಾಗ ತಾವು ಈಗ ಆಡುತ್ತಿರುವ ಮಾತುಗಳು ನೆನಪಿರಲಿಲ್ಲವೇ ಎಂದು ಕುಟುಕಿದೆ.

ಇದನ್ನೂ ಓದಿ | Karnataka Politics: ಕಾಂಗ್ರೆಸ್‌ನಲ್ಲಿ ಶೀಘ್ರವೇ ಭಿನ್ನಾಭಿಪ್ರಾಯ ಸ್ಫೋಟವಾಗಲಿದೆ ಎಂದ ಬೊಮ್ಮಾಯಿ

ಕುಮಾರಸ್ವಾಮಿಯವರ ಕಣ್ಣುಗಳೇನೋ ಚುನಾವಣೆ ಸಂದರ್ಭದಲ್ಲಿ ನೀರು ಸುರಿಸುತ್ತವೆ ಎಂಬುದು ಜಗತ್ತಿಗೆ ತಿಳಿದ ಸಂಗತಿ. ಆದರೆ ಅವರ ನಾಲಿಗೆ ಯಾವ ಯಾವ ಕಾಲದಲ್ಲಿ ಹೇಗೆ ಹೊರಳುತ್ತದೆ ಎಂಬುದು ಪಿಎಚ್‌ಡಿ ಮಾಡಬಹುದಾದ ವಿಷಯ ಎಂದು ಕಾಂಗ್ರೆಸ್‌ ಛೇಡಿಸಿದೆ.

Exit mobile version