ಚಿಕ್ಕಮಗಳೂರು: ಮನೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶಾಲೆ ಇನ್ನಿತರ ಮೂಲಸೌಕರ್ಯಗಳಿಲ್ಲದೆ ಸಂಕಷ್ಟದಲ್ಲೇ ಜೀವನ ನಡೆಸುತ್ತಿದ್ದ ಜಿಲ್ಲೆಯ (Chikkamagaluru News) ಗ್ರಾಮವೊಂದರ ಜನರು, ಸಮಸ್ಯೆಗಳ ಪರಿಹಾರಕ್ಕೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಅವರ ಪತ್ರಕ್ಕೆ ಪ್ರಧಾನಿ ಮಂತ್ರಿಗಳ ಕಾರ್ಯಾಲಯ ಸ್ಪಂದಿಸಿದ್ದು, ಗ್ರಾಮಸ್ಥರ ಜತೆಗೆ ಪ್ರಧಾನಿಯೇ ನೇರವಾಗಿ ಮಾತನಾಡಲು ಸಮಯ ನಿಗದಿ ಮಾಡಿದೆ.
ಜಿಲ್ಲೆಯ ಕಳಸ ತಾಲೂಕಿನ ಕುಂಬಳಡಿಕೆ ಗ್ರಾಮದಲ್ಲಿ ಹಲವರಿಗೆ ಮನೆಯಿಲ್ಲ. ಸುಮಾರು 70 ಕುಟುಂಬಗಳು ವಾಸಿಸುತ್ತಿರುವ ಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಗ್ರಾಮಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಹೀಗಾಗಿ ಪ್ರಧಾನಿ ಕಾರ್ಯಾಲಯದಿಂದಲೇ ಗ್ರಾಮಕ್ಕೆ ಫೋನ್ ಬಂದಿದ್ದು, ನರೇಂದ್ರ ಮೋದಿ ಅವರೊಂದಿಗೆ ಮಾತನಾಡಲು ಸಮಯ ನಿಗದಿ ಮಾಡಿರುವುದಾಗಿ ತಿಳಿಸಲಾಗಿದೆ.
ಹತ್ತು ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದು ಪೋನ್ ಮಾಡಲಿದ್ದಾರೆ ಎನ್ನಲಾಗಿದೆ. ಕುಂಬಳಡಿಕೆ ಗ್ರಾಮದಲ್ಲಿ ಮನೆಯಿಲ್ಲದೆ ಹಲವು ಕುಡುಂಬಗಳು ಟೆಂಟ್ ರೀತಿಯ ತಾತ್ಕಾಲಿಕ ಮನೆಗಳನ್ನು ನಿರ್ಮಿಸಿಕೊಂಡು ಜೀವಿಸುತ್ತಿದ್ದಾರೆ. ಜತೆಗೆ ಮೂಲಸೌಕರ್ಯ ಕೊರತೆಯೂ ಇದೆ.
ನಾವು ಎಂಟು ವರ್ಷದಿಂದ ಈ ಗ್ರಾಮದಲ್ಲಿದ್ದೇವೆ. ಬಹಳ ದಿನದಿಂದ ನೀರಿನ ವ್ಯವಸ್ಥೆ ಇಲ್ಲ, ವಿದ್ಯುತ್ ಸಂಪರ್ಕವೂ ಇಲ್ಲ. ದೀಪ ಹಚ್ಚಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯ ಮಹಿಳೆ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ | Gruha lakshmi : ಗೃಹ ಲಕ್ಷ್ಮಿ ಚಾಲನೆ ಮೈಸೂರಿಗೆ ಶಿಫ್ಟ್; ಲಕ್ಷ್ಮಿ ಹೆಬ್ಬಾಳ್ಕರ್ ವರ್ಚಸ್ಸು ವೃದ್ಧಿಗೆ ಬೆದರಿದರೇ ಸಿದ್ದರಾಮಯ್ಯ?