ಶಿವಮೊಗ್ಗ: ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಲು ಹಾಗೂ ಸರ್ಕಾರಿ ಶಾಲೆಗಳ ಸುಧಾರಣೆ ಉದ್ದೇಶದೊಂದಿಗೆ ವಿಸ್ತಾರ ನ್ಯೂಸ್ ಆರಂಭಿಸಿರುವ “ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆʼʼ ಅಭಿಯಾನಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಅಭಿಯಾನದ ಭಾಗವಾಗಿ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್ ಮತ್ತು ಗ್ರಾಮಸ್ಥರು ಭಾನುವಾರ ದತ್ತು ಸ್ವೀಕರಿಸಿದರು.
ಶಾಲೆಯನ್ನು ದತ್ತು ಸ್ವೀಕರಿಸುವ ಕಾರ್ಯಕ್ರಮವು ಹಬ್ಬದಂತೆ ನಡೆಯಿತು. ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಕಳಸ ಹೊತ್ತ ಮಹಿಳೆಯರು, ಶಾಲಾ ಮಕ್ಕಳು, ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ಪಿ.ರಾಜೀವ್ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಡೊಳ್ಳು ಕುಣಿತ ವಿಶೇಷ ಆಕರ್ಷಣೆಯಾಗಿತ್ತು. ನಂತರ ಶಾಲೆಯ ನಿವೃತ್ತ ಶಿಕ್ಷಕರು ಮತ್ತು ಹಳೇ ವಿದ್ಯಾರ್ಥಿಗಳ ನಡುವೆ ಸಂವಾದ ನಡೆಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಾಗಾಗಿ, ಇಡೀ ದಿನದ ಕಾರ್ಯಕ್ರಮಗಳು ಗ್ರಾಮಕ್ಕೆ ಹಬ್ಬದ ಕಳೆ ತಂದಿದ್ದವು.
ಎಲ್ಲರೂ ಕೂಡಿ ಮಾದರಿ ಶಾಲೆ ರೂಪಿಸೋಣ: ಪಿ.ರಾಜೀವ್
ಶಾಲೆಯನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕ ಪಿ.ರಾಜೀವ್, “ನಾವೇನಾದರೂ ಜೀವನದಲ್ಲಿ ಏಳಿಗೆ ಹೊಂದಿದ್ದರೆ ಅದಕ್ಕೆ ಶಿಕ್ಷಕರೇ ಕಾರಣ. ಹಾಗಾಗಿ, ನಾವೆಲ್ಲರೂ ಸೇರಿ ಮಾದರಿ ಶಾಲೆ ನಿರ್ಮಿಸೋಣ. ಸರ್ಕಾರಿ ಶಾಲೆಯ ಮಕ್ಕಳು ಇಂಗ್ಲಿಷ್, ಹಿಂದಿ, ಕನ್ನಡದಲ್ಲಿ ಓದಲು ಸಾಧ್ಯವಿದೆಯಾ? ಪ್ರತಿಯೊಂದು ಕುಟುಂಬವೂ ಶಾಲೆಗಾಗಿ ಸಮಯ ಕೊಡಲು ಆಗುತ್ತದೆಯೇ ಎಂಬುದನ್ನು ಅರಿಯೋಣ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉತ್ತಮ ಶಾಲೆ ನಿರ್ಮಿಸೋಣ” ಎಂದರು.
“ಅದಮ್ಯ ಶಕ್ತಿಯಿದ್ದರೆ ಏನನ್ನೂ ಮಾಡಬಹುದು ಎಂಬ ಸ್ಫೂರ್ತಿಯ ಚಿಲುಮೆಗೆ ಹರಿಪ್ರಕಾಶ ಕೋಣೆಮನೆ ಸಾಕ್ಷಿ. ವಾರಾನ್ನ ಮಾಡಿ ಶಿಕ್ಷಣ ಪಡೆದು ಈ ಎತ್ತರಕ್ಕೆ ಬೆಳೆದ ಹರಿಪ್ರಕಾಶ್ ಕೋಣೆಮನೆ ಅವರು ಎಲ್ಲರಿಗೂ ಮಾದರಿ. ನಮ್ಮೂರ ಶಾಲೆಯನ್ನು ನಮ್ಮೆಲ್ಲರ ಶಾಲೆಯಾಗಿ ನಾವು ಮಾಡೋಣ” ಎಂದು ತಿಳಿಸಿದರು. ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಪಿ.ರಾಜೀವ್, ತಮ್ಮ ಶಾಲಾ ಶಿಕ್ಷಕರನ್ನು ನೆನೆದು ಭಾವುಕರಾದರು.
ವಿಸ್ತಾರ ಜತೆಗಿದೆ, ಅಭಿಯಾನ ಮುಂದುವರಿಸೋಣ ಎಂದ ಕೋಣೆಮನೆ
“ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ ಅಭಿಯಾನ ಆರಂಭವಾಗಿ ತಿಂಗಳಾಗಿದೆ. ೩೦ ದಿನಗಳಲ್ಲಿ ೩೦ ಶಾಲೆ, ೩೦ ದಾನಿಗಳನ್ನು ಗುರುತಿಸಲಾಗಿದೆ. ಅಂತೆಯೇ ವೀಕ್ಷಕ ವರದಿಗಾರ ಕೂಡ ಪ್ರಸಾರವಾಗುತ್ತಿದೆ. ಹೀಗೆ ವಿಸ್ತಾರ ನ್ಯೂಸ್ ನಿಂದ ಜನಪರ ಕಾರ್ಯಕ್ರಮ ಮುಂದುವರಿಯಲಿದೆ, ವಾಹಿನಿಯು ಸಮಾಜದ ಜತೆಗಿರಲಿದೆ” ಎಂದು ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಹೇಳಿದರು.
“ಎಂದಿಗೂ ವಿರೋಧ, ತೊಂದರೆ ಬಗ್ಗೆ ಚಿಂತಿಸಬಾರದು. ನಾವು ಪಾರದರ್ಶಕವಾಗಿದ್ದರೆ ಇರುವ ಅಡೆತಡೆಗಳು ತಾನಾಗಿಯೇ ಹೋಗುತ್ತವೆ. ಈ ಅಭಿಯಾನವನ್ನು ನಾವೆಲ್ಲರೂ ಸೇರಿ ಮುಂದುವರಿಸೋಣ. ಬದುಕು ರೂಪಿಸುವ ಶಾಲೆಗಳಿಗೆ ಹೊಸ ರೂಪ ಕೊಡೋಣ” ಎಂದರು.
ಬಾಲ್ ಉತ್ಸವ್ ಸಂಸ್ಥೆ ಮುಖ್ಯಸ್ಥ ರಮೇಶ್ ಬಾಲಸುಂದರಮ್, ಬಿನು ವರ್ಮಾ ಸಾಂದರ್ಭಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ವಿದ್ಯಾ ಗುರುರಾಜ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ್ ಶಾನಭಾಗ ಮತ್ತು ಸದಸ್ಯರು, ಗ್ರಾಪಂ ಸದಸ್ಯರು ಸೇರಿ ಊರಿನ ಗಣ್ಯರು ವೇದಿಕೆಯಲ್ಲಿ ಇದ್ದರು. ನಿವೃತ್ತ ಶಿಕ್ಷಕರು, ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳು ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು. ನಿಧನ ಹೊಂದಿದ ಶಿಕ್ಷಕರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿರಂಜನ್ ಕುಪ್ಪಗಡ್ಡೆ ಸ್ವಾಗತಿಸಿದರು, ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ಹಾಡಿದರು. ಮಕ್ಕಳ ಸ್ವಾಗತ ನೃತ್ಯ ಆಕರ್ಷಿಸಿತು.
ಇದನ್ನೂ ಓದಿ | ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆ | ವಿಸ್ತಾರ ನ್ಯೂಸ್ ಅಭಿಯಾನಕ್ಕೆ ಕುಪ್ಪಗಡ್ಡೆಯಲ್ಲಿ ಅದ್ಧೂರಿ ಆರಂಭ; ಕಳೆಗಟ್ಟಿದ ಮೆರವಣಿಗೆ