Site icon Vistara News

ಕುವೆಂಪು ವಿವಿ ದಿವಾಳಿ: ಮೂರು ತಿಂಗಳಿಂದ ಸಂಬಳ ನೀಡಲು ದುಡ್ಡಿಲ್ಲ!

ಕುವೆಂಪು ವಿಶ್ವವಿದ್ಯಾಲಯ

ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲೊಂದಾದ ಕುವೆಂಪು ವಿವಿಯಲ್ಲಿ ಉಪನ್ಯಾಸಕರಿಗೆ ಸಂಬಳ ನೀಡಲೂ ಹಣವಿಲ್ಲದಂತಾಗಿದೆ. ಕುವೆಂಪು ವಿಶ್ವವಿದ್ಯಾಲಯ ಆರ್ಥಿಕ ಸಂಪನ್ಮೂಲಕ್ಕಾಗಿ ದೂರ ಶಿಕ್ಷಣ ವಿಭಾಗವನ್ನು ಅವಲಂಬಿಸಿತ್ತು. ಸುಮಾರು 150 ಕೋಟಿ ರೂಪಾಯಿಗೂ ಅಧಿಕ ಆದಾಯವನ್ನು ಇದರಿಂದ ಸಂಗ್ರಹಿಸಲಾಗುತ್ತಿತ್ತು. ಆದರೆ ಈ ವಿಭಾಗವೇ ಸ್ಥಗಿತಗೊಂಡ ಬಳಿಕ ಆರ್ಥಿಕ ಹೊಡೆತ ಎದುರಾಗಿದೆ. ಸರ್ಕಾರ ಕೂಡ ಹೆಚ್ಚಿನ ನೆರವು ನೀಡದೆ ಸಮಸ್ಯೆ ಬಿಗಡಾಯಿಸಿದೆ.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ವಿದೇಶಕ್ಕೆ ಪರಾರಿಯಾದ ಯುವಕ

ರಾಜ್ಯ ಸರ್ಕಾರದ ಆದೇಶದ ಪ್ರಕಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಹೊರತುಪಡಿಸಿ ಉಳಿದ ಯಾವ ವಿಶ್ವವಿದ್ಯಾಲಯವೂ ದೂರ ಶಿಕ್ಷಣ ಕೊಡುವಂತಿಲ್ಲ. ಹೀಗಾಗಿ ಕೋಟ್ಯಂತರ ಆದಾಯ ತಂದು ಕೊಡುತ್ತಿದ್ದ ವಿ.ವಿ.ಗೆ ದೂರ ಶಿಕ್ಷಣ ವಿಭಾಗದಲ್ಲಿ ಯಾವುದೇ ಕೋರ್ಸ್ ನಡೆಸಲು ಅವಕಾಶ ನೀಡದಿರುವುದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಕುವೆಂಪು ವಿಶ್ವವಿದ್ಯಾಲಯದ ಶಂಕರಘಟ್ಟದಲ್ಲಿ ಇರುವ ವಿವಿಧ ಸ್ನಾತಕೋತ್ತರ ವಿಭಾಗ, ವಿವಿ ಆವರಣದಲ್ಲಿರುವ ರಂಭಾಪುರಿ ಪದವಿ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜು ಹಾಗೂ ಗಡೂರಿನಲ್ಲಿ ವಿವಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸುಮಾರು 250 ಅತಿಥಿ ಉಪನ್ಯಾಸಕರು ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಸ್ನಾತಕೋತ್ತರ ಪದವಿಯೊಂದಿಗೆ ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ಪಿಎಚ್‌.ಡಿ ಯನ್ನು ಅನೇಕ ಅತಿಥಿ ಉಪನ್ಯಾಸಕರು ಹೊಂದಿದ್ದಾರೆ. ಕೇವಲ ವಯೋಮಿತಿ ಹೆಚ್ಚಳದಿಂದಾಗಿ ವಿಧಿಯಿಲ್ಲದೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಕಡಿಮೆ ಸಂಬಳದಲ್ಲಿ ಹೆಚ್ಚು ಕೆಲಸ ಮಾಡುತ್ತ ವಿವಿಯ ಬೆಳವಣಿಗೆಯಲ್ಲಿ ತಮ್ಮದೇ ಕೊಡುಗೆ ನೀಡಿದ್ದ ಅತಿಥಿ ಉಪನ್ಯಾಸಕರು ತಮ್ಮ ಸಂಬಳ ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ವಿವಿ ಆಡಳಿತ ಮಂಡಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು.

ಈ ನಡುವೆ ಸಿಂಡಿಕೇಟ್ ಸದಸ್ಯರ ಒತ್ತಾಯದ ಮೇರೆಗೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಲಾಗಿದೆ ಎಂದು ಪ್ರಕಟಿಸಿದ್ದರು. ಯುಜಿಸಿ ನಿಗದಿಪಡಿಸಿರುವ, ವಿದ್ಯಾರ್ಹತೆ ಹಾಗೂ ಸೇವಾವಧಿಯನ್ನು ಆಧರಿಸಿ ಕನಿಷ್ಠ 30 ಸಾವಿರ ರೂ.ಗಳಿಂದ ಗರಿಷ್ಠ 45 ಸಾವಿರ ತನಕ, ವೇತನವನ್ನು ಸಿಂಡಿಕೇಟ್‌ ಸಭೆ ತೀರ್ಮಾನದಂತೆ ಪರಿಷ್ಕರಿಸಿರುವುದಾಗಿ ಪ್ರಕಟಿಸಿದ್ದರು.

ಈ ಮೂಲಕ ಬೆಂಗಳೂರು ವಿಶ್ವವಿದ್ಯಾಲಯ ಹೊರತು ಪಡಿಸಿದರೆ ಅತಿಥಿ ಉಪನ್ಯಾಸಕರಿಗೆ ಅತಿ ಹೆಚ್ಚು ವೇತನ ನಿಗದಿಪಡಿಸಿದ ವಿವಿ ಎಂಬ ಹೆಗ್ಗಳಿಕೆಗೆ ಕುವೆಂಪು ವಿವಿ ಪಾತ್ರವಾಗಿತ್ತು. ಇದು ನೂರಾರು ಅತಿಥಿ ಉಪನ್ಯಾಸಕರ ಬಾಳಿನಲ್ಲಿ ಸಂತಸ ಮೂಡಿಸಿತ್ತು, ಆದರೆ ಈ ಸಂತಸ ಬಹಳ ಸಮಯ ಉಳಿಯಲಿಲ್ಲ. ಕಾರಣ ವಿವಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ 250ಕ್ಕೂ ಹೆಚ್ಚು ಉಪನ್ಯಾಸಕರಿಗೆ ಕಳೆದ ಏಪ್ರಿಲ್ ಮತ್ತು ಮೇ ತಿಂಗಳಿನಿಂದ ಸಂಬಳವೇ ಸಿಕ್ಕಿಲ್ಲ.

ಬ್ಯಾಂಕ್‌ನಿಂದ OD ಸಾಲಕ್ಕೆ ನಿರ್ಧಾರ?

ಆರ್ಥಿಕ ಮುಗ್ಗಟ್ಟಿನಲ್ಲಿರುವ ಕುವೆಂಪು ವಿ.ವಿ.ಗೆ ಉಪನ್ಯಾಸಕರಿಗೆ ಸಂಬಳ ನೀಡಲು ಬ್ಯಾಂಕ್ ಸಾಲಕ್ಕೆ ಮೊರೆ ಹೋಗುವ ಅನಿವಾರ್ಯತೆ ಒದಗಿ ಬಂದಿದೆ ಎನ್ನುತ್ತಿವೆ ವಿವಿ ಮೂಲಗಳು. ಅತಿಥಿ ಉಪನ್ಯಾಸಕರಿಗೆ ತಾನು ನೀಡಿದ ಆಶ್ವಾಸನೆಯನ್ನು ಉಳಿಸಿಕೊಳ್ಳಲು ಎಸ್‌ಬಿಐನಿಂದ 26 ಕೋಟಿ ರೂ. OD ಸಾಲ ಪಡೆಯಲು ಕುವೆಂಪು ವಿವಿ ನಿರ್ಧರಿಸಿದೆ ಎನ್ನಲಾಗಿದೆ.

ಸಿಂಡಿಕೇಟ್ ಸದಸ್ಯರು ಹೇಳುವುದು ಏನು?

ಕುವೆಂಪು ವಿವಿಯ ಆರ್ಥಿಕ ಮುಗ್ಗಟ್ಟಿನ ಕುರಿತು ಅಧಿಕೃತವಾಗಿ ಯಾರೊಬ್ಬರೂ ತುಟಿಕ್‌ ಪಿಟಕ್ ಎನ್ನುತ್ತಿಲ್ಲ. ಸಿಂಡಿಕೇಟ್ ಸದಸ್ಯ ಸಂತೋಷ್ ಬಳ್ಳಕೆರೆ ಅವರನ್ನು ಈ ಕುರಿತು ಕೇಳಿದರೆ, ಕಾಲೇಜಿನ ಆಯಾ ವಿಭಾಗದ ಮುಖ್ಯಸ್ಥರು ಬಿಲ್‌ ನೀಡದೇ ಇರುವುದೇ ಸಮಸ್ಯೆಗೆ ಕಾರಣ ಎಂದು ದೂರಿದ್ದಾರೆ. ಜತೆಗೆ ವಿವಿಯ ದೂರ ಶಿಕ್ಷಣ ಕೋರ್ಸ್ ನಿಲ್ಲಿಸಿರುವುದು ಕೂಡ ವಿವಿ ಆರ್ಥಿಕ ಸಮಸ್ಯೆಗೆ ಕಾರಣ. ಶೀಘ್ರದಲ್ಲಿ ಸರ್ಕಾರದ ಬಳಿ ಹೋಗಿ ಹೆಚ್ಚಿನ ನೆರವಿಗೆ ಮನವಿ ಮಾಡಲಾಗುವುದು ಎಂದರು.

Exit mobile version