ಚಿಕ್ಕೋಡಿ: ರಮೇಶ್ ಜಾರಕಿಹೊಳಿ ಕ್ಷೇತ್ರ ಗೋಕಾಕ್‌ನಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಸಚಿವೆ ಶಶಿಕಲಾ ಜೊಲ್ಲೆ ಗೈರಾದ ಬೆನ್ನಲ್ಲೇ ಶಶಿಕಲಾ ಜೊಲ್ಲೆ ಅವರ ಕ್ಷೇತ್ರ ರಾಯಭಾಗದಲ್ಲಿ ಬುಧವಾರ ನಡೆದ ವಿಜಯ ಸಂಕಲ್ಪ ಯಾತ್ರೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೈರಾಗಿದ್ದಾರೆ. ಇದರಿಂದ ಚುನಾವಣೆ (Karnataka Election 2023) ವೇಳೆ ನಾಯಕರ ಹೊಂದಾಣಿಕೆ ಕೊರತೆ ಬಿಜೆಪಿಗೆ ಮಗ್ಗುಲ ಮುಳ್ಳಾಗಿ ಕಾಡುವ ಸಾಧ್ಯತೆ ಇದೆ.
ಬುಧವಾರ ರಾಯಭಾಗದ ಸಂಕಲ್ಪ ಯಾತ್ರೆ ಹಾಗೂ ಮಾಂಜರಿಯಲ್ಲಿ ನಡೆದ ರೋಡ್ ಶೋನಲ್ಲಿ ರಮೇಶ್ ಜಾರಕಿಹೊಳಿ ಭಾಗಿಯಾಗಿದ್ದರು. ಬಳಿಕ ನಿಪ್ಪಾಣಿಗೆ ಬಾರದೆ ಗೋಕಾಕ್‌ಗೆ ತೆರಳಿದ್ದಾರೆ. ಯಾತ್ರೆಗೆ ಗೈರಾಗುವ ಮೂಲಕ ಜೊಲ್ಲೆ ವಿರುದ್ಧದ ತಮ್ಮ ಅಸಮಾಧಾನವನ್ನು ರಮೇಶ್ ಜಾರಕಿಹೊಳಿ ಹೊರಹಾಕಿದ್ದಾರೆ.
ಇತ್ತೀಚೆಗಷ್ಟೆ ರಮೇಶ್ ಜಾರಕಿಹೊಳಿ ಬಗ್ಗೆ ಚಿಕ್ಕೋಡಿ ಕ್ಷೇತ್ರ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡುತ್ತಾ, ನಮ್ಮ ಮತಕ್ಷೇತ್ರಕ್ಕೆ ಬಂದು ನಮ್ಮನ್ನು ಡಿಸ್ಟರ್ಬ್ ಮಾಡಿದರೆ ನಾವೂ ಅವರ ಕ್ಷೇತ್ರಕ್ಕೆ ಹೋಗಿ ಡಿಸ್ಟರ್ಬ್ ಮಾಡುತ್ತೇವೆ ಎಂದಿದ್ದರು. ಇದಕ್ಕೆ ಮೋಸ್ಟ್ ವೆಲ್ ಕಮ್ ಎಂದು ಬಹಿರಂಗವಾಹಿಯೇ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಈ ವಿಷಯ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ರಮೇಶ್ ಜಾರಕಿಹೊಳಿ ನಡುವೆ ವೈಮನಸ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ | Lokayukta Raid: ರೈತರ ಆದಾಯವನ್ನು ನೂರಾರು ಪಟ್ಟು ಹೆಚ್ಚಿಸಿದ ಪ್ರಧಾನಿಗೆ ಅಭಿನಂದನೆಗಳು: ಕಾಂಗ್ರೆಸ್ ಟ್ವೀಟ್
ಗೋಕಾಕ್, ಮೂಡಲಗಿ ವಿಜಯ ಸಂಕಲ್ಪ ಯಾತ್ರೆಗೆ ಜಿಲ್ಲೆಯ ಬಿಜೆಪಿ ಲಿಂಗಾಯತ ನಾಯಕರಾದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಗೈರಾಗಿದ್ದರು. ಒಂದೆಡೆ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಣ್ ಸವದಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಮತ್ತೊಂದೆಡೆ ಸರ್ಕಾರಿ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಜಾರಕಿಹೊಳಿ ಸಹೋದರರ ವಿರುದ್ಧ ಈರಣ್ಣ ಕಡಾಡಿ ಅಸಮಾಧಾನ ಹೊರಹಾಕಿದ್ದರು.
ಕೇಂದ್ರ ಬಿಜೆಪಿ ನಾಯಕರು ರಾಜ್ಯಕ್ಕೆ ಭೇಟಿ ನೀಡಿದಾಗ ಒಗ್ಗಟ್ಟಿನ ಪಾಠ ಮಾಡಿ ತೆರಳಿದ್ದರೂ ಜಿಲ್ಲೆಯ ಬಿಜೆಪಿ ನಾಯಕರಲ್ಲಿ ಭಿನ್ನಾಭಿಪ್ರಾಯ ಮಾತ್ರ ಕಡಿಮೆಯಾಗಿಲ್ಲ. ಇದು ಚುನಾವಣೆ ಹೊಸ್ತಿಲಲ್ಲಿ ಕಮಲ ಪಕ್ಷ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.