ಆನೇಕಲ್: ಮಾಲೀಕನೊಬ್ಬ ಮನೆ ಮಾರಾಟ ಮಾಡುವುದಾಗಿ ಹೇಳಿ ನಕಲಿ ದಾಖಲೆ ನೀಡಿ ಲಕ್ಷಾಂತರ ರೂ. ವಂಚನೆ (Fraud Case) ಮಾಡಿದ್ದಾರೆ ಎಂದು ಆರೋಪಿ ಮಹಿಳೆಯೊಬ್ಬರು ಸೆಲ್ಫಿ ವಿಡಿಯೊ (Selfie video) ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಶಿಲ್ಪಾ ಎಂಬಾಕೆ ಕಳೆದ ರಾತ್ರಿ 12 ಗಂಟೆ ಸುಮಾರಿಗೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಮಂಗಲದಲ್ಲಿ ನಡೆದಿದೆ.
ಶಿಲ್ಪ ಕುಟುಂಬಸ್ಥರು ನಾಗಮಂಗಲದಲ್ಲಿ ಇಳೆಯರಾಜ ಎಂಬವರ ಮನೆಯಲ್ಲಿ ಬಾಡಿಗೆಗೆ ಪಡೆದು ವಾಸವಿದ್ದರು. ಈ ಮಧ್ಯೆ ಮನೆಯನ್ನು 92 ಲಕ್ಷ ರೂ.ಗೆ ಮಾರಾಟ ಮಾಡಲು ಇಳೆಯರಾಜ ಮುಂದಾಗಿದ್ದ. ಈ ವಿಚಾರವನ್ನು ತಿಳಿದ ಶಿಲ್ಪ ಕುಟುಂಬಸ್ಥರು ತಾವೇ ಮನೆ ಕೊಳ್ಳಲು ಮುಂದಾಗಿದ್ದರು. ಇದಕ್ಕಾಗಿ ಮುಂಗಡವಾಗಿ 31.50 ಲಕ್ಷ ರೂ. ಹಣವನ್ನು ಇಳೆಯರಾಜನಿಗೆ ನೀಡಿದ್ದರು. ಆದರೆ 2018ರಲ್ಲಿ ಶಿಲ್ಪ ಅವರ ತಂದೆ ತೀರಿಕೊಂಡಿದ್ದರು.
ಈ ಮಧ್ಯೆ ಇಳೆಯರಾಜ ಬೇರೆಯವರಿಗೆ ಮನೆ ಮಾರಾಟ ಮಾಡಲು ಮುಂದಾಗಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಇದನ್ನು ಪ್ರಶ್ನಿಸಿ ಶಿಲ್ಪಾ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆಗ ಮುಂಗಡವಾಗಿ ಪಡೆದಿದ್ದ ಹಣವನ್ನು ವಾಪಸ್ ನೀಡುವುದಾಗಿ ಹೇಳಿದ್ದ. ಆದರೆ ಕಳೆದ ಕೆಲವು ದಿನಗಳ ಹಿಂದೆ ನಿಮಗೆ ಯಾವುದು ಹಣ ಕೊಡಬೇಕಿಲ್ಲ ಎಂದಿದ್ದಾನೆ.
ಇದರಿಂದ ನೊಂದು ಶಿಲ್ಪಾ ವಿಡಿಯೊ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಯವರು ಇದನ್ನೂ ಗಮನಿಸಿ, ಕೂಡಲೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಶಿಲ್ಪಾ ಚೇತರಿಸಿಕೊಳ್ಳುತ್ತಿದ್ದಾರೆ. ತಮಿಳುನಾಡು ಮೂಲದ ಇಳೆಯರಾಜನಿಂದ ವಂಚನೆ ಆಗಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ನ 10ನೇ ಮಹಡಿಯಿಂದ ಬಿದ್ದು ಗೃಹಿಣಿ ಮೃತ್ಯು
ಬೆಂಗಳೂರು: ಯಲಹಂಕ ಬಳಿಯ ನಾಗೇನಹಳ್ಳಿ ಸಮೀಪದ ಅಪಾರ್ಟ್‌ಮೆಂಟ್ (Bangalore Apartments) 10ನೇ ಮಹಡಿಯಿಂದ ಬಿದ್ದು ಗೃಹಿಣಿ ಮೃತಪಟ್ಟಿದ್ದಾರೆ. ಇದು ಆತ್ಮಹತ್ಯೆಯಾಗಿರಬಹುದೇ ಎಂಬ ಸಂಶಯ ಕಾಡಿದೆ. ಅಮೃತಾ ಶರ್ಮ (27) ಮೃತ ದುರ್ದೈವಿ.
ಅಮೃತಾ ಶರ್ಮಾ ಮೂಲತಃ ಲಖನೌ ಮೂಲದವರಾಗಿದ್ದು, ಯಲಹಂಕ ಬಳಿಯ ನಾಗೇನಹಳ್ಳಿಯಲ್ಲಿ ಅಪಾರ್ಟ್‌ಮೆಂಟ್ ಹತ್ತನೇ ಮಹಡಿಯಲ್ಲಿ ವಾಸವಾಗಿದ್ದರು. ಅಡುಗೆ ಕೋಣೆಗೆ ಅಟ್ಯಾಚ್ ಆದ ಬಾಲ್ಕನಿಯಿಂದ ಜಿಗಿದು ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ಎರಡು ವರ್ಷದ ಹಿಂದಷ್ಟೆ ವಿವಾಹವಾಗಿದ್ದ ಅಮೃತಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ತನ್ನ ತಂದೆಯನ್ನು ಕಳೆದುಕೊಂಡು ನೊಂದಿದ್ದರು. ಗುರುವಾರ ರಾತ್ರಿ (ಜೂ.22) ಹತ್ತು ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್ ಹತ್ತನೇ ಮಹಡಿಯಿಂದ ಅಮೃತಾ ಶರ್ಮ ಬಿದ್ದಿದ್ದಾರೆ. ಕೂಡಲೆ ಸ್ಥಳೀಯರು ಅಮೃತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ 10ನೇ ಮಹಡಿಯಿಂದ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Medical Negligence: ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿನಿ ಬಲಿ? ಆಪರೇಷನ್ ಮಾಡಿದ ಗಂಟೆಯೊಳಗೇ ಮರಣ!
ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಲಖನೌನಿಂದ ಅಮೃತಾ ತಾಯಿ ಆಗಮಿಸುತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ