Site icon Vistara News

Lakkundi Utsava 2023: ಹಂಪಿ ಸರ್ಕಿಟ್‌ನಲ್ಲಿ ಲಕ್ಕುಂಡಿ ಸೇರ್ಪಡೆ ಮಾಡುತ್ತೇವೆ: ಸಿಎಂ ಬೊಮ್ಮಾಯಿ

Lakkundi Utsava 2023

#image_title

ಗದಗ: ಕಲ್ಯಾಣ ಚಾಲುಕ್ಯರು ಆಳಿರುವ ಐತಿಹಾಸಿಕ ಪ್ರದೇಶ ಲಕ್ಕುಂಡಿಯಾಗಿದೆ (Lakkundi Utsava 2023). ಕಲ್ಯಾಣ ಚಾಲುಕ್ಯರ ಕಾಲದ ಶಿಲ್ಪಕಲೆ, ಪುರಾತನ ದೇಗುಲಗಳ ಸಂಗಮವಾದ ಈ ಸ್ಥಳವನ್ನು ಜಗತ್ಪ್ರಸಿದ್ಧ ಮಾಡುವ ಅನಿವಾರ್ಯವಿದೆ. ಹಂಪಿ ಸರ್ಕಿಟ್‌ನಲ್ಲಿ ಲಕ್ಕುಂಡಿಯನ್ನು ಮುಂಬರುವ ದಿನಗಳಲ್ಲಿ ಸೇರ್ಪಡೆ ಮಾಡಲಾಗುವುದು ಹಾಗೂ ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯ ಲಕ್ಕುಂಡಿಯಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಆಯೋಜಿಸಿದ್ದ ಲಕ್ಕುಂಡಿ ಉತ್ಸವ ಉದ್ಘಾಟಿಸಿ ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದಲ್ಲಿದ್ದಂತೆಯೇ ಸಮೃದ್ಧವಾಗಿದ್ದ ಗದಗ ಜಿಲ್ಲೆಯ ವೈಭವದ ಕುರಿತು ಶಾಸನಗಳು ಹೇಳುತ್ತವೆ. ಅದ್ಭುತ ಕಲಾಕೃತಿಗಳ ಸಂಗಮವಾದ ಲಕ್ಕುಂಡಿ. ಇದನ್ನು ಜಗತ್ಪ್ರಸಿದ್ದ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವುದು, ಪ್ರವಾಸೋದ್ಯಮಕ್ಕೆ ಅತಿ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಕನ್ನಡಿಗರ ಗುಣಧರ್ಮಗಳ ಪ್ರಸಾರ

ಗದಗ ಜಿಲ್ಲೆ ಕುಮಾರವ್ಯಾಸನ ಕರ್ಮಭೂಮಿ, ರನ್ನನ ಜನ್ಮಭೂಮಿ. ಕನ್ನಡ ಹುಟ್ಟಲು, ಅದರ ವೈಭವ ದೊಡ್ಡದಾಗಿ ಬೆಳೆಯಲು ರನ್ನ, ಪಂಪರ ಸಾಹಿತ್ಯ ಕಾರಣ. ಅವರ ಸಾಹಿತ್ಯಕ್ಕೆ ದಾನಚಿಂತಾಮಣಿ ಅತ್ತಿಮಬ್ಬೆ ಆಶ್ರಯ ನೀಡದ್ದಳು. ಕನ್ನಡಿಗರ ಗುಣ ಧರ್ಮಗಳನ್ನು ಸಾರುವ ಕೆಲಸಕ್ಕೆ ಮಹತ್ವ ನೀಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.

ನೀರಾವರಿಗೆ ಕಾಯಕಲ್ಪ

ನೀರಾವರಿ ಕಾಯಕಲ್ಪ ನೀಡಲು ತಮ್ಮ ಪ್ರಮುಖ ಪಾತ್ರವಿತ್ತು ಎಂದು ಸ್ಮರಿಸಿದ ಮುಖ್ಯಮಂತ್ರಿಗಳು ಏತ ನೀರಾವರಿ ಯೋಜನೆಗಳನ್ನು ಫೂರ್ಣಗೊಳಿಸಿದ್ದನ್ನು ವಿವರಿಸಿದರು. ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ತುಂಗೆಯ ನೀರನ್ನು ಗದಗ ಜಿಲ್ಲೆಯ ತಾಲೂಕುಗಳಿಗೆ ಒದಗಿಸಿ ಇದಕ್ಕೆ ಅಗತ್ಯ ಅನುದಾನವನ್ನು ನೀಡುವುದಾಗಿ ತಿಳಿಸಿದರು. ಕಳಸಾ ಬಂಡೂರಿ ಯೋಜನೆಗೆ ಹೋರಾಟ ಮಾಡಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಲಿಂಕಿಂಗ್ ಕಾಲುವೆ ನಿರ್ಮಿಸಿ ಮಹದಾಯಿ ನೀರನ್ನು ಮಲಪ್ರಭೆಗೆ ಹರಿಸುವ ಪ್ರಮುಖ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾಗಿ ತಿಳಿಸಿದರು.

ಗೋವಾದ ತಕರಾರಿನಿಂದ ಮಹಾದಾಯಿ ಯೋಜನೆ ನನೆಗುದಿಗೆ ಬಿದ್ದು ಈಗ ನ್ಯಾಯಮಂಡಳಿ ಆದೇಶವೂ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ನ್ಯಾಯಮಂಡಳಿ ಆದೇಶಕ್ಕೆ ಅಧಿಸೂಚನೆ ಹೊರಡಿಸಿದೆ. ಡಿಪಿಆರ್‌ಗೆ ಅನುಮೋದನೆ ನೀಡುವ ಮೂಲಕ ಕರ್ನಾಟಕದೊಂದಿಗೆ ನಿಂತಿದೆ ಎಂದರು. ಆದಷ್ಟು ಬೇಗನೆ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು ಎಂದರು.

ನವಕರ್ನಾಟಕದ ನಿರ್ಮಾಣ

ನರಗುಂದ ಮತ್ತು ರೋಣ ತಾಲೂಕಿನ ಮಲಪ್ರಭೆ ನದಿಯನ್ನು ಮಹಾದಾಯಿ ಯೋಜನೆಗೆ ಜೋಡಿಸಿ, ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಸಂಗೀತದ ನೆಲೆವೀಡಾಗಿರುವ ಈ ಕ್ಷೇತ್ರ ಪುಟ್ಟರಾಜು ಗವಾಯಿ, ಪಂಚಾಕ್ಷರಿ ಗವಾಯಿಗಳು ಸಾವಿರಾರು ಅಂಧರಿಗೆ ಬದುಕನ್ನು ನೀಡಿರುವ ನಾಡಿದು. ಧಾರ್ಮಿಕವಾಗಿ ತೋಂಟದಾರ್ಯ ಮಠ, ಶಿವಾನಂದ ಮಠ ನಮಗೆ ದಾರಿದೀಪವಾಗಿದೆ. ಈ ಎಲ್ಲ ಉತ್ತಮ ಪರಿಸರದಲ್ಲಿ ನವಕರ್ನಾಟಕದ ನಿರ್ಮಾಣ ಮಾಡಲಾಗುವುದು ಎಂದರು.

ದುಡಿಯುವ ವರ್ಗಕ್ಕೆ ಬೆಂಬಲ

ರಾಜ್ಯವನ್ನು ದುಡಿಯುವ ವರ್ಗ ಮಾತ್ರ ಕಟ್ಟಲು ಸಾದ್ಯ. ದುಡಿಯುವ ವರ್ಗಕ್ಕೆ ಸರ್ಕಾರ ಬೆಂಬಲ ನೀಡುತ್ತಿದೆ. ಪ್ರಧಾನಿ ಮೋದಿಯವರು ಎಲ್ಲರನ್ನೂ ಒಳಗೊಂಡಿರುವ ಅಭಿವೃದ್ಧಿಯ ಗುರಿ ನೀಡಿದ್ದಾರೆ. ರೈತಮಕ್ಕಳು ವಿವಿಧ ವೃತ್ತಿಗಳಲ್ಲಿ ಅಭಿವೃದ್ಧಿ ಹೊಂದಬೇಕೆಂಬ ಉದ್ದೇಶದಿಂದ ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗಿದೆ. ರೈತ ಕೂಲಿ ಕಾರ್ಮಿಕರು, ಮೀನುಗಾರರು, ನೇಕಾರರು, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ. ಕಸುಬುದಾರರ ವೃತ್ತಿ ಉನ್ನತೀಕರಣಕ್ಕಾಗಿ ಕಾಯಕ ಯೋಜನೆ, ಕುರಿಗಾಹಿಗಳಿಗೆ ಅಮೃತ ಕುರಿಗಾಹಿ ಯೋಜನೆ ಜಾರಿಗೊಳಿಸಲಾಗಿದೆ. ದುಡಿಯುವ ವರ್ಗಕ್ಕೆ ಜನಪರ ಯೋಜನೆಗಳನ್ನು ಯಾವುದೇ ಜಾತಿ ಬೇಧಭಾವವಿಲ್ಲದೆ ಜಾರಿಗೊಳಿಸಲಾಗಿದೆ ಎಂದರು.

ಗದಗ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಟೌನ್ ಶಿಪ್ ನಿರ್ಮಾಣಕ್ಕೆ ಶೀಘ್ರದಲ್ಲಿ ಘೋಷಣೆ

ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 5000 ಕೋಟಿ ರೂ. ಆರ್ಥಿಕ ಕೊರತೆಯಿತ್ತು, ಈ ವರ್ಷವೂ 15 ಸಾವಿರ ಕೋಟಿಗೂ ಮೀರಿ ಆದಾಯ ಗಳಿಸಲಾಗಿದೆ. ಸೋರಿಕೆಯನ್ನು ತಡೆದು, ಆರ್ಥಿಕತೆಗೆ ಇಂಬು ನೀಡಲಾಗುತ್ತಿದೆ. ಗದಗದಲ್ಲಿ ಉದ್ಯಮ ಬಂದರೆ ಉದ್ಯೋಗ ಹೆಚ್ಚುತ್ತದೆ. ಗದಗ ಜಿಲ್ಲೆಯ ಔದ್ಯೋಗೀಕರಣಕ್ಕೆ ಜಮೀನನ್ನು ಗುರುತಿಸಿ, ಇಂಡಸ್ಟ್ರಿಯಲ್ ಟೌನ್ ಶಿಪ್ ಮಾಡಲು ಸರ್ಕಾರ ಸಿದ್ಧವಿದೆ. ಜಮೀನನ್ನು ಗುರುತಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಬೇಕು. ಉದ್ಯೋಗಾವಕಾಶದ ಮೂಲಕ ಯುವಕರ ಭವಿಷ್ಯ ಭದ್ರಗೊಳಿಸಬಹುದಾಗಿದೆ. ಜಮೀನು ಶೀಘ್ರದಲ್ಲಿ ಗುರುತಿಸಿ ನೀಡಿದರೆ, ಗದಗ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಟೌನ್ ಶಿಪ್ ನಿರ್ಮಾಣದ ಘೋಷಣೆಯನ್ನು ಮಾಡಲಾಗುವುದು ಎಂದರು.

ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಬಿ.ಎ. ಬಸವರಾಜ, ಬಿ.ಶ್ರೀರಾಮುಲು, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಿದ್ದರಾಮಯ್ಯನವರದ್ದು ಮತಬ್ಯಾಂಕ್ ರಾಜಕಾರಣ

ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಮತಬ್ಯಾಂಕಿನ ರಾಜಕಾರಣ ಹಾಗೂ ಓಲೈಕೆ ರಾಜಕಾರಣವನ್ನು ಕಳೆದ 20 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಲಕ್ಕುಂಡಿ ಉತ್ಸವದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಹಿಂದು ಬೇರೆ, ಹಿಂದುತ್ವ ಬೇರೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಹೊಸ ಹೊಸ ವ್ಯಾಖ್ಯಾನವನ್ನು ಸಿದ್ದರಾಮಯ್ಯನವರನ್ನೇ ಕೇಳಬೇಕು. ಅವರದ್ದು ಯಾವಾಗಲು ದ್ವಿಮುಖ ನೀತಿ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿಯ ದ್ವಂದ್ವ ನೀತಿಯನ್ನು ಸಮಾಜದಲ್ಲಿ ಸೃಷ್ಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಮತದಾರರು ಬಹಳ ಪ್ರಬುದ್ಧರಾಗಿದ್ದು, ಇಂಥ ದ್ವಿಮುಖ ನೀತಿಗೆ ಮನ್ನಣೆ ನೀಡುವುದಿಲ್ಲ ಎಂದರು.

ಹಿಂದು, ಹಿಂದುತ್ವ ವ್ಯತ್ಯಾಸ ಮಾಡುವುದು, ಇಸ್ಲಾಂ , ಮುಸಲ್ಮಾನರು ಒಂದು ಎನ್ನುವುದು ಮಾಡುತ್ತಾರೆ. ಸಮಾಜದಲ್ಲಿ ಬಿರುಕು ಹುಟ್ಟಿಸುವುದು, ಜಾತಿಗಳನ್ನು ಒಡೆಯುವುದು, ಉಪಜಾತಿಗಳ ದೊಡ್ಡ ಸಮೂಹವನ್ನೇ ಸೃಷ್ಟಿ ಮಾಡಲು ಕಾಂಗ್ರೆಸ್‌ನವರು ದೊಡ್ಡ ಸಮಿತಿಗಳನ್ನೇ ರಚಿಸಿರುವ ಸಾಕಷ್ಟು ಉದಾಹರಣೆಗಳಿವೆ. ಜನ ಅವರನ್ನು 2018ರಲ್ಲಿ ಮನೆಗೆ ಕಳುಹಿಸಿದ್ದರು. ಈ ಬಾರಿಯೂ ಕಳುಹಿಸಲಿದ್ದಾರೆ ಎಂದರು.

ಪೊಳ್ಳು ಘೋಷಣೆ

ರಾಜ್ಯಪಾಲರ ಭಾಷಣ ಶುದ್ಧ ಸುಳ್ಳು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ಚುನಾವಣೆಗೆ ಹೋಗುವ 2 ತಿಂಗಳ ಮುಂಚೆ, ಬಜೆಟ್ 15 ಲಕ್ಷ ಮನೆಗಳನ್ನು ಘೋಷಣೆ ಮಾಡಿ 3 ಸಾವಿರ ಕೋಟಿ ರೂಪಾಯಿ ಮೀಸಲಿಡುತ್ತೇವೆ ಎಂದಿದ್ದರು. ಆದರೆ 15 ಸಾವಿರ ಕೋಟಿ ರೂ. ಇಡಬೇಕಾಗಿತ್ತು. ಅವರೇ ಸುಳ್ಳು ಹೇಳಿ, ಮೋಸ ಮಾಡಿದ್ದಾರೆ. 15 ಲಕ್ಷ ಮನೆ ನಿರ್ಮಾಣಕ್ಕೆ ಮೂರನೇ ಒಂದು ಭಾಗದಷ್ಟು ಅನುದಾನ ಮೀಸಲಿಡದೇ ಪೊಳ್ಳು ಘೋಷಣೆ ಬಜೆಟ್ ಮಾಡಿದ ಧೀಮಂತ ನಾಯಕ. ಆ ಮನೆಗಳನ್ನು ಕಟ್ಟುವ ಜವಾಬ್ದಾರಿ ನಮ್ಮ ಪಾಲಿಗೆ ಬಂದಿದ್ದು, ಅದರೊಂದಿಗೆ ಹೊಸ 5 ಲಕ್ಷ ಮನೆಗಳನ್ನು ನಮ್ಮ ಸರ್ಕಾರ ಮಂಜೂರು ಮಾಡಿದೆ. ಇವೆಲ್ಲವೂ ಅವರಿಗೆ ತಿಳಿದಿದ್ದರೂ, ರಾಜಕೀಯ ಕಾರಣಕ್ಕಾಗಿ ಇಂತಹ ಅಪಾದನೆಗಳನ್ನು ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ | Budget session : ಹೊಸ ತೆರಿಗೆ ಪದ್ಧತಿಯಿಂದ ಜನತೆಗೆ ಹೆಚ್ಚಿನ ಉಳಿತಾಯ ಸಾಧ್ಯ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನವಲಿ ಡ್ಯಾಂ ಡಿಪಿಆರ್ ಸಿದ್ಧವಾಗಿದೆ

ತುಂಗಭದ್ರಾ ನದಿಗೆ ಪರ್ಯಾಯವಾಗಿ ನವಲೆ ಡ್ಯಾಂ ಕಟ್ಟುವ ಪ್ರಸ್ತಾವನೆ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಯೋಜನೆಯ ಡಿಪಿಆರ್ ಈಗಾಗಲೇ ಸಿದ್ಧವಾಗಿದೆ. ಆಂಧ್ರದ ಅಧಿಕಾರಿಗಳು ಈ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಆಗಮಿಸಿದ್ದು, ಒಂದು ಸುತ್ತಿನ ಚರ್ಚೆಯನ್ನು ಮಾಡಲಾಗಿದೆ. ಕೆಲವು ವಿಚಾರಗಳ ಬಗ್ಗೆ ಸ್ಪಷ್ಟೀಕರಣಗಳನ್ನು ಕೇಳಲಾಗಿದೆ. ಒಂದು ಹಂತದ ಸಿದ್ಧತೆಗಳ ನಂತರ ರಾಜಕೀಯವಾಗಿ ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಸ್ಪರ ಒಂದು ಇತ್ಯರ್ಥಕ್ಕೆ ಬರಲಾಗುವುದು ಎಂದರು.

ಭಾರತವನ್ನು ಸರ್ವಶ್ರೇಷ್ಠವಾಗಿಸುವ ಧ್ಯೇಯದೊಂದಿಗೆ ಆಡಳಿತ

ಹುಬ್ಬಳ್ಳಿ: ಪ್ರಧಾನಿ ಮೋದಿಯವರು ಅಮೃತ ಕಾಲವನ್ನು ಕರ್ತವ್ಯ ಕಾಲ ಎಂದು ಕರೆದಿದ್ದು, ಕರ್ತವ್ಯದ ಮುಖಾಂತರ ಭಾರತವನ್ನು ವಿಶ್ವದಲ್ಲಿ ಸರ್ವಶ್ರೇಷ್ಠ ಮಾಡುವ ಧ್ಯೇಯವನ್ನಿಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಲಕ್ಕುಂಡಿ ಉತ್ಸವಕ್ಕೆ ತೆರಳುವ ಮುನ್ನಾ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಕುರಿತು ಶಾಸಕ ಸಿ.ಟಿ.ರವಿ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿ, ಯಾವ ಪಕ್ಷದವರು ಯಾವ ಸಂಸ್ಕೃತಿ ಎಂದು ಜನರಿಗೆ ತಿಳಿದಿದೆ. ರಾಜ್ಯ ಭಾಜಪ ಪಕ್ಷದ್ದು ನರೇಂದ್ರ ಮೋದಿ ಸಂಸ್ಕೃತಿ. ಭಾರತವನ್ನು ಸಶಕ್ತ, ಸಮೃದ್ಧವಾಗಿ ಕಟ್ಟುವ ಕಾಲ ಸ್ವಾತಂತ್ರ್ಯಾ ನಂತರ 75 ವರ್ಷಗಳ ನಂತರ ಅವಕಾಶ ದೊರಕಿದೆ ಎಂದರು.

ಇದನ್ನೂ ಓದಿ| Assembly Session: ಗೋಹತ್ಯೆ ನಿಷೇಧ, ಪುಣ್ಯಕೋಟಿ ಯೋಜನೆಗೆ ಶಹಬ್ಬಾಸ್‌ಗಿರಿ: ಮೋದಿ ಮಾರ್ಗದಲ್ಲಿ ರಾಜ್ಯ ಸಾಗಲಿದೆ ಎಂದ ರಾಜ್ಯಪಾಲ ಗೆಹ್ಲೊಟ್‌

ಲಕ್ಕುಂಡಿ ಉತ್ಸವದ ಮೂಲಕ ಪ್ರವಾಸೋದ್ಯಮಕ್ಕೆ ಇಂಬು

ಲಕ್ಕುಂಡಿ ಜಗತ್ಪ್ರಸಿದ್ಧವಾದ ಐತಿಹಾಸಿಕ ಸ್ಥಳ. ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಇಂಬು ನೀಡಲು ಲಕ್ಕುಂಡಿ ಉತ್ಸವವನ್ನು ಆಯೋಜಿಸಲಾಗಿದೆ. ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿಪ್ರಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದೆಯೂ ಸರ್ಕಾರ ಈ ತೀರ್ಮಾನ ಕೈಗೊಂಡಾಗಲೂ ತನ್ನ ಹೆಸರನ್ನು ವಿಮಾನನಿಲ್ದಾಣಕ್ಕೆ ಸೂಚಿಸುವುದು ಬೇಡ ಎಂದಿದ್ದರು. ಇತ್ತೀಚೆಗೆ ಶಿವಮೊಗ್ಗ ಪ್ರವಾಸದ ಸಂದರ್ಭದಲ್ಲಿ ಸಾರ್ವಜನಿಕರಿಂದ ಈ ಬಗ್ಗೆ ಒತ್ತಡ ಬಂದಿದೆ. ಈ ಬಗ್ಗೆ ಅವರೊಂದಿಗೆ ಚರ್ಚಿಸಲಾಗುವುದು ಎಂದರು.

Exit mobile version