ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ (Laksha Deepotsava) ಕಾರ್ಯಕ್ರಮವನ್ನು ಡಿಸೆಂಬರ್ 8 ರಿಂದ 12 ರವರೆಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಸೇರಿ ಹಲವು ಕಡೆಗಳಿಂದ ಭಕ್ತರು ಹಾಗೂ ಪ್ರವಾಸಿಗರು ಬರುವ ಕಾರಣಕ್ಕಾಗಿ ಕೆಎಸ್‌ಆರ್‌ಟಿಸಿ ವತಿಯಿಂದ ರಾಜ್ಯ ಹಲವು ಕಡೆಗಳಿಂದ ವಿಶೇಷ ಬಸ್ (KSRTC Special Bus) ವ್ಯವಸ್ಥೆಯನ್ನು ಮಾಡಲಾಗಿದೆ.
ಒಟ್ಟಾರೆ ಕಾರ್ಯಕ್ರಮದ ಮೂಲವಾಗಿರುವ ಲಕ್ಷ ದೀಪೋತ್ಸವವನ್ನು ನೋಡುವುದೇ ಒಂದು ಹಬ್ಬ. ಹೀಗಾಗಿ ಈ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಲಕ್ಷಕ್ಕೂ ಅಧಿಕ ಮಂದಿ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಡಿ.12ರಂದು ರಾತ್ರಿ 12 ಗಂಟೆ ಬಳಿಕ ಲಕ್ಷ ದೀಪೋತ್ಸವ ನೆರವೇರಲಿದೆ. ಹೀಗಾಗಿ ಅಂದು ಧರ್ಮಸ್ಥಳಕ್ಕೆ ಬರುವ ಭಕ್ತರು, ಪ್ರವಾಸಿಗರಿಗಾಗಿ ಕೆಎಸ್‌ಆರ್‌ಟಿಸಿ ರಾಜ್ಯದ ಹಲವು ಭಾಗಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯವನ್ನು ಕಲ್ಪಿಸಿದೆ.
ಇದನ್ನೂ ಓದಿ: Congress Karnataka : ಮೊದಲ ಶಾಸಕರಿಗೆ ನಿಗಮ – ಮಂಡಳಿ ಸ್ಥಾನ ಇಲ್ಲವೆಂದ ಡಿ.ಕೆ. ಶಿವಕುಮಾರ್
ಎಲ್ಲೆಲ್ಲಿಂದ ವಿಶೇಷ ಬಸ್ ವ್ಯವಸ್ಥೆ?
ಪ್ರಮುಖವಾಗಿ ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ, ಮಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೀಗಾಗಿ ಹೆಚ್ಚುವರಿ ಬಸ್‌ಗಳನ್ನು ಈ ವೇಳೆ ಬಿಡಲಾಗುತ್ತಿದ್ದು, ಇದಕ್ಕೆ ಅಗತ್ಯ ಸಿದ್ಧತೆಯನ್ನು ಕೆಎಸ್‌ಆರ್‌ಟಿಸಿ ಮಾಡಿಕೊಂಡಿದೆ.
ಡಿ.8ರಿಂದ ನಡೆಯುವ ಕಾರ್ಯಕ್ರಮಗಳ ಪಟ್ಟಿ
ಡಿ.8ರಂದು ಬೆಳಗ್ಗೆ 10.30ಕ್ಕೆ ಹೈಸ್ಕೂಲ್ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನ ಮಂಟಪದಲ್ಲಿ ಪ್ರತಿ ದಿನ ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ.
ಡಿ.10ರಂದು ರಾತ್ರಿ 7ರಿಂದ 10ರವರೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ ಗಾನ, ನೃತ್ಯ ವೈವಿಧ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ..
ಡಿ.11 ರಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನವನ್ನು ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ.ಗುರುರಾಜ ಕರ್ಜಗಿ ಉದ್ಘಾಟಿಸಲಿದ್ದಾರೆ. ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯವಾದಿ ಡಾ. ಎಂ.ಆರ್. ವೆಂಕಟೇಶ್, ಬೆಂಗಳೂರಿನ ವಿಭು ಅಕಾಡೆಮಿ ಮುಖ್ಯಸ್ಥ ವಿಜಯಪುರದ ಮಹಮ್ಮದ್ ಗೌಸ್ ಹವಾಲ್ದಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 8.30ರಿಂದ ಬೆಂಗಳೂರಿನ ಅನುರಾಧಾ ವಿಕ್ರಾಂತ್ ಮತ್ತು ಬಳಗದವರಿಂದ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್ ಉದ್ಘಾಟನೆ
ಡಿ.12ರಂದು ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶನವನ್ನು ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಖ್ಯಾತ ಗಮಕಿ ಡಾ. ಎ.ವಿ. ಪ್ರಸನ್ನ ಅಧ್ಯಕ್ಷತೆ ವಹಿಸುವರು. ಹೊನ್ನಾವರದ ನಿವೃತ್ತ ಉಪನ್ಯಾಸಕ ಡಾ. ಶ್ರೀಪಾದ ಶೆಟ್ಟಿ, ಬೆಂಗಳೂರಿನ ರಂಗಕರ್ಮಿ ಪ್ರಕಾಶ್ ಬೆಳವಡಿ ಮತ್ತು ಬಂಟ್ವಾಳದ ಡಾ. ಅಜಕ್ಕಳ ಗಿರೀಶ್ ಭಟ್ ಉಪನ್ಯಾಸ ನೀಡುವರು. ರಾತ್ರಿ 8.30ರಿಂದ ಬೆಂಗಳೂರಿನ ಜತಿನ್ ನೃತ್ಯ ಅಕಾಡೆಮಿಯ ವಿದುಷಿ ಅರ್ಚನಾ ಪುಣ್ಯೇಶ್ ಮತ್ತು ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: 108 Ambulance : ನಾಳೆ 262 ಆಂಬ್ಯುಲೆನ್ಸ್‌ಗೆ ಸಿಎಂ ಚಾಲನೆ; 108 ಆಧುನೀಕರಣಕ್ಕೆ ಕ್ರಮ: ದಿನೇಶ್ ಗುಂಡೂರಾವ್
ಭಕ್ತಿ ಹೆಚ್ಚಿಸುವ ಉತ್ಸವಗಳು
ಈ ವೇಳೆ ಅನೇಕ ಉತ್ಸವಗಳು ನಡೆಯಲಿದ್ದು, ಭಕ್ತಾದಿಗಳು ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿ.8ರಂದು ಹೊಸಕಟ್ಟೆ ಉತ್ಸವ ನಡೆದರೆ, 9ರಂದು ಕೆರೆಕಟ್ಟೆ ಉತ್ಸವ ನಡೆಯಲಿದೆ. ಡಿ. 10ರಂದು ಲಲಿತೋದ್ಯಾನ ಉತ್ಸವ, 11ರಂದು ಕಂಚಿಮಾರುಕಟ್ಟೆ ಉತ್ಸವ, 12ರಂದು ಗೌರಿಮಾರುಕಟ್ಟೆ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಕೊನೆಯಲ್ಲಿ ಅಂದರೆ ರಾತ್ರಿ 12 ಗಂಟೆ ನಂತರ ಲಕ್ಷ ದೀಪೋತ್ಸವ ನಡೆಯಲಿದೆ. ಡಿ. 13ರಂದು ಸಂಜೆ 7ರಿಂದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಆವರಣದಲ್ಲಿ ಸಮವಸರಣ ಪೂಜೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.