ವಿಜಯಪುರ : ಮುಂದಿನ ಚುನಾವಣೆಯಲ್ಲಿ ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ ಜೋಡೆತ್ತುಗಳು ಮೆರೆಯಬೇಕೇ ವಿನಃ ಎತ್ತು ಹಾಗೂ ಕೋಣ ಅಲ್ಲ. ಒಂದು ಎತ್ತು ಲೋಕಸಭೆಗೆ ಹೋಗಿದ್ದು, ಇನ್ನೊಂದು ಎತ್ತನ್ನು ನಾಗಠಾಣ ಕ್ಷೇತ್ರದಿಂದ ವಿಧಾನಸಭೆಗೆ ಕಳುಹಿಸಬೇಕು ಎಂದು ಕ್ಷೇತ್ರದ ಜನತೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.
ನಾಗಠಾಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೂತನ ಬಸ್ ನಿಲ್ದಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ಶಾಸಕರು ನನ್ನ ಆತ್ಮೀಯ ಗೆಳೆಯರು, ನಾನು ಸಾರಿಗೆ ಸಚಿವನಾಗಿದ್ದಾಗ ಈ ಬಸ್ ನಿಲ್ದಾಣ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಊರ ಹೊರಗೆ ಬಸ್ ನಿಲ್ದಾಣ ಮಾಡಲು ನನ್ನ ಮೇಲೆ ಒತ್ತಡ ಹೇರಿದ್ದರು ಎಂದು ಹೇಳಿದರು.
ನಾನು ಅವರಿಗೆ ಊರ ಹೊರಗೆ ಸ್ಮಶಾನ ಇರಬೇಕು ಎಂದು ತಿಳಿಹೇಳಿದ್ದೆ ಎಂದು ದೇವಾನಂದ ಚವ್ಹಾಣ್ ವಿರುದ್ಧ ವ್ಯಂಗ್ಯವಾಡಿ ಸವದಿ. ಈ ಕುರಿತು ಗೋವಿಂದ ಕಾರಜೋಳರನ್ನು ಸಂಪರ್ಕಿಸಿದಾಗ, ಊರ ನಡುವೆ ಬಸ್ ನಿಲ್ದಾಣ ಇರಬೇಕು ಎಂದು ಹೇಳಿದ್ದರು ಎಂದು ನೆನಪಿಸಿಕೊಂಡರು.
ಇದನ್ನೂ ಓದಿ | ಎಲ್ಲರಿಗೂ ರಾಷ್ಟ್ರಧ್ವಜ ಸಿಗಲೆಂದು ನಿಯಮ ತಿದ್ದುಪಡಿ, ಹಾಗಾಗಿ ರಾಜಕೀಯ ಬೇಡ ಎಂದ ಪ್ರಲ್ಹಾದ್ ಜೋಶಿ
ಈ ಭಾಗದ ಜನರ ಮನವಿಗೆ ನಾನೂ ಧ್ವನಿಗೂಡಿಸುತ್ತೇನೆ. ನನ್ನ ಕ್ಷೇತ್ರದ 4 ಕೆರೆಗಳನ್ನು ತುಂಬುವುದು ಕಡಿಮೆ ಮಾಡಿ, ಆದರೆ ಈ ಭಾಗದ ಎಲ್ಲ ಕೆರೆಗಳನ್ನು ತುಂಬಿಸಿ ಎಂದು ಕಾರಜೋಳರಲ್ಲಿ ಮನವಿ ಮಾಡಿದ ಅವರು, ನಮಗೆ ಸನ್ಮಾನದಲ್ಲಿ ನೀಡಿದ ಖಡ್ಗವನ್ನು ಈ ದೇಶದಲ್ಲಿರುವ ದುಷ್ಟರನ್ನು ಹೊಡೆದೋಡಿಸಲು ಬಳಸುತ್ತೇವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ನಿಮ್ಮ ಹಾಲಿ ಶಾಸಕರು ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬರುತ್ತದೆ ಎಂದು ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಅಭಿವೃದ್ಧಿಗಿಂತ, ಕೆಲಸ ಕೆಡಿಸುವ ಕಾರ್ಯಕ್ಕೆ, ಹೆಚ್ಚು ಮನವಿ ಪತ್ರಗಳನ್ನು ನನಗೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಚಾರ ಮಾಡಿ ಶಾಸಕರನ್ನು ಆಯ್ಕೆ ಮಾಡಿ ಎಂದು ಪರೋಕ್ಷವಾಗಿ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಸೂಚನೆ ನೀಡಿದರು.
ದೇವಾನಂದ ಚವ್ಹಾಣ ಅವರು, ಅಧಿಕಾರಿಗಳಿಗೂ ದಾರಿ ತಪ್ಪಿಸಿದ್ದರು. ನಾನೇ ಲೋಕೋಪಯೋಗಿ ಸಚಿವರಾಗಿದ್ದಲೂ ಸುಳ್ಳು ಹೇಳಿದ್ದರು. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅವರಿಗೆ ಮನಸ್ಸಿಲ್ಲ ಎಂದು ಶಾಸಕರ ವಿರುದ್ಧ ಹರಿಹಾಯ್ದರು.
ಶೀಘ್ರದಲ್ಲಿಯೇ ನೀವು ಸಲ್ಲಿಸಿರುವ ಮನವಿಯ ಪ್ರಕಾರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು, ಸಮುದಾಯ ಆರೋಗ್ಯ ಕೇಂದ್ರವಾಗಿ ಹಾಗೂ ಕೆಪಿಟಿಸಿಎಲ್ ಮೇಲ್ದರ್ಜೆಗೆ ಏರಿಸುವ ಕೆಲಸವನ್ನು ಆದಷ್ಟು ಬೇಗನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಮಾತನಾಡಿ, ನಾನು ಕೂಡ ನಾಗಠಾಣ ಕ್ಷೇತ್ರದ ಮಗನೇ, ಈ ಕ್ಷೇತ್ರದಲ್ಲಿ ಬರುವ ಸುಮಾರು 35 ಹಳ್ಳಿಗಳು ಬಬಲೇಶ್ವರ ಕ್ಷೇತ್ರಕ್ಕೆ ಬಂದಿದ್ದರೆ, ನಾನೂ ಗೆಲ್ಲುತ್ತಿದ್ದೆ ಎನ್ನುವ ಆಶಯ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ತಮ್ಮ ಮಗನಿಗೆ ರಾಜಕೀಯ ಭವಿಷ್ಯ ಕಲ್ಪಿಸಲು ನಾಗಠಾಣ ಮತಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಗೋವಿಂದ ಕಾರಜೋಳ ಅಕ್ಷರಶಃ ಇಂದು ತಮ್ಮ ಶಕ್ತಿ ಪ್ರದರ್ಶಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ, ಚಂದ್ರಶೇಖರ್ ಕವಟಗಿ, ವಿವಿಧ ಸ್ವಾಮೀಜಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಶಾಸಕ ದೇವಾನಂದ ಚವ್ಹಾಣ ಹಾಗೂ ಸಂಸದ ರಮೇಶ್ ಜಿಗಜಿಣಗಿ ಗೈರು ಹಾಜರಾಗಿದ್ದರು.
ಇದನ್ನೂ ಓದಿ | ವಿಜಯಪುರದಲ್ಲಿ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನ: ಅಧ್ಯಕ್ಷ ಶಿವಾನಂದ ತಗಡೂರು