ಬೆಳಗಾವಿ: ಗೋಕಾಕ್‌ನಲ್ಲಿ ಪೊಲೀಸ್ ಠಾಣೆ, ತಹಸೀಲ್ದಾರ್, ಸಬ್ ರಿಜಿಸ್ಟ್ರಾರ್, ಎಸಿ ಆಫೀಸ್ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿದೆ. ಒಂದು ಎಕರೆ ಭೂಮಿ ಖರೀದಿಗೆ 10 ಲಕ್ಷ ರೂಪಾಯಿ ಲಂಚ ಕೊಡಬೇಕು, ಮಾರಲೂ 10 ಲಕ್ಷ ರೂಪಾಯಿ ಲಂಚ ಕೊಡಬೇಕು. ಇದು ಗೋಕಾಕ್ ರಿಪಬ್ಲಿಕ್ ಕ್ಷೇತ್ರದ ನಿಯಮಾವಳಿ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಇವರು ನೂರಾರು ಕೋಟಿಗೆ ತಮ್ಮನ್ನು ತಾವು ಮಾರಿಕೊಂಡು ಬಿಜೆಪಿ ಸರ್ಕಾರ ಮಾಡಿ ನನಗೇ ಪಾಠ ಮಾಡಲು ಬರುತ್ತಾರೆ ಎಂದು ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.
ತಾಲೂಕಿನ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ಬುಧವಾರ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ (Prajadwani Yatra) ಮಾತನಾಡಿದ ಅವರು, ನಾನು ಮಾಡಿದ ಅಭಿವೃದ್ಧಿ ಕಾರ್ಯ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಗೋಕಾಕ್ ಶಾಸಕರು ಸ್ವಯಂಘೋಷಿತ ನಾಯಕರು. ಎರಡು ವರ್ಷ ಕೊರೊನಾ, ಒಂದು ವರ್ಷ ಪ್ರವಾಹ ಇದ್ದಾಗ ಸಾಕಷ್ಟು ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ನೀವು ಎಲ್ಲಿದ್ದಿರಿ? ಈಗ ಒಂದು ತಿಂಗಳು ಹಿಂದೆ ನನ್ನ ಕ್ಷೇತ್ರಕ್ಕೆ ಕಾಲಿಟ್ಟಿದ್ದೀರಿ ಕುಟುಕಿದರು.
ನಾನು ಎಂಎಲ್‌ಎ ಆಗಿ ನಾಲ್ಕೂವರೆ ವರ್ಷ ಕಳೆದಿದೆ. ನೀವು ಎಂಎಲ್‌ಎ ಆಗಿ 23 ವರ್ಷ ಆಗಿದೆ. ನನ್ನ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರ ಒಂದು ವರ್ಷ ಅಧಿಕಾರದಲ್ಲಿತ್ತು. ನೀವು 23 ವರ್ಷ ಎಂಎಲ್‌ಎ ಆಗಿ 16 ವರ್ಷ ಅಧಿಕಾರದಲ್ಲಿ ಇದ್ದಿರಿ. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದೀರಿ. ಇದು ನಿಮಗೆ ಎಂತಹ ಸಂಕುಚಿತ ಭಾವನೆ ಇದೆ ಎಂಬುವುದು ತೋರಿಸುತ್ತದೆ ಎಂದರು.
ರೈತರಿಗೆ ಕಬ್ಬಿನ ಬಿಲ್ ಕೊಟ್ಟು ನಂತರ ಮಾತನಾಡಿ
ನನ್ನ ವೈರಿಗಳು ಎಷ್ಟೇ ಕಷ್ಟ ಕೊಟ್ಟರೂ ಎದುರಿಸಲು ನಾನು ಸಿದ್ಧನಿದ್ದೇನೆ. ಗೋಕಾಕ್ ಶಾಸಕರೇ, ಭ್ರಷ್ಟಾಚಾರ ಒಂದು ಕಡೆ ಇರಲಿ, ನನ್ನ ಕ್ಷೇತ್ರದ ಜನರಿಗೆ ಕಬ್ಬಿನ ಬಿಲ್ ಕೊಟ್ಟು ನಂತರ ನೀವು ಮಾತನಾಡಿ. ರಾಹುಲ್ ಗಾಂಧಿ ಬೆಳಗಾವಿಗೆ ಬಂದ ದಿನವೇ ನನ್ನ ಕ್ಷೇತ್ರದ ನಂದಿಹಳ್ಳಿಯಲ್ಲಿ ನಿಮ್ಮ ಹೆಸರು ಬರೆದು ರೈತ ಆತ್ಮಹತ್ಯೆ ಮಾಡಿಕೊಂಡ. ಹೀಗಾಗಿ ನನ್ಮ ಕ್ಷೇತ್ರದ ಜನರ ಕಬ್ಬಿನ ಬಾಕಿ ಬಿಲ್ ನೀಡಿ ನೀವು ನನ್ನ ಕ್ಷೇತ್ರಕ್ಕೆ ಬನ್ನಿ. ನಾನು ರೈತರ ಹೊಲ ಬರೆಸಿಕೊಳ್ಳುತ್ತೇನೆ ಎನ್ನುತ್ತೀರಾ, ನಾಚಿಕೆ ಆಗಬೇಕು ನಿಮಗೆ ಎಂದರು.
ನಾವು ಇಂದಿರಾ ಗಾಂಧಿ ಪಕ್ಷದವರು, ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿ ತಂದವರು ಎಂದ ಅವರು, ನೀವು ಬ್ಯಾಂಕ್‌ಗಳ ಖಾಸಗೀಕರಣ ಮಾಡುತ್ತಿದ್ದೀರಿ, ರೇಲ್ವೆ ನಿಲ್ದಾಣ, ಏರ್‌ಪೋರ್ಟ್ ಎಲ್ಲ ಮಾರಿಕೊಂಡಿದ್ದೀರಿ ಎಂದು ಹರಿಹಾಯ್ದರು.
40 ಲಕ್ಷ ರೂ. ಕೊಟ್ಟರೆ ಕಾಂಗ್ರೆಸ್‌ಗೆ ಬರ್ತೀನಿ ಎಂದಿದ್ದ ನಾಗೇಶ್ ಮನ್ನೋಳಕರ್
ನಾಗೇಶ್ ಮನ್ನೋಳಕರ್ 2018ರ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಇದ್ದಿರಿ, ಬೆಳಗ್ಗೆ ಸಂಜಯ್ ಪಾಟೀಲ್ ಪರ ಪ್ರಚಾರ ಮಾಡಿದ್ದೀರಿ, ರಾತ್ರಿ ನಿಮ್ಮ ಮಿತ್ರನ ಕರೆದುಕೊಂಡು ನನ್ನ ಮನೆಗೆ ಬಂದಿದ್ದಿರಿ. ಮನೆಗೆ ಬಂದು ನಮ್ಮದೊಂದು ಡೀಲ್ ಇದೆ ಎಂದು ಹೇಳಿದ್ದಿರಿ. ನನಗೆ 40 ಲಕ್ಷ ರೂಪಾಯಿ ಕೊಟ್ಟರೆ ನಾನು ನಾಳೆ ಕಾಂಗ್ರೆಸ್ ಪಕ್ಷ ಸೇರುತೇನೆ ಎಂದಿದ್ದಿರಿ. ನಾನು ಸುಳ್ಳು ಹೇಳಿದ್ದರೆ ಉಚಗಾವಿ ಮಳೆಕರಣಿ ದೇವಿ ಮೇಲೆ ಆಣೆ ಮಾಡಲು ಸಿದ್ಧ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಯಾರ‍್ಯಾರು ರಮೇಶ್ ಜಾರಕಿಹೊಳಿ ಬೆನ್ನು ಹತ್ತಿದ್ದಾರೆ ಎಲ್ಲರೂ ಮನೆಗೆ ಬಂದಿದ್ದಾರೆ. ವೀರಕುಮಾರ್ ಪಾಟೀಲ್, ವಿವೇಕರಾವ್ ಪಾಟೀಲ್, ಘಾಟಗೆ, ಮಹಾಂತೇಶ ಕವಟಗಿಮಠ ಅಣ್ಣಾ ಅವರನ್ನು ಮನೆಗೆ ಕಳುಹಿಸಿದ್ದಾರೆ ಎಂದು ನನಗೆ ಸತೀಶ್ ಜಾರಕಿಹೊಳಿ ಹೇಳುತ್ತಿದ್ದರು ಎಂದು ತಿಳಿಸಿದರು.
ಸಂಜಯ್ ಪಾಟೀಲ್ ಮಾರ್ಚ್ 2ರಂದು ರಾಜಹಂಸಗಡ ಕ್ಷೇತ್ರದ ಶಿವಾಜಿ ಮೂರ್ತಿ ಉದ್ಘಾಟನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ಕೈಯಿಂದ ಮಾಡಿಸುತ್ತಿದ್ದಾರೆ. ಅವರಿಗೆ ನಾಚಿಕೆ ಆಗಬೇಕು ಎಂದ ಲಕ್ಷ್ಮಿ ಹೆಬ್ಬಾಳ್ಕರ್, ರಾಜಹಂಸಗಡ ಕೋಟೆ ಮಣ್ಣನ್ನು ಬಾಕ್ಸೈಟ್ ಅದಿರನ್ನು ಮಾರಿ ದುಡ್ಡು ಮಾಡಿದವರು ನೀವು ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಶಿವಾಜಿ ಮೂರ್ತಿಗೆ ಹಣ ಕೇಳಿದಾಗ ಕೊಡಲಿಲ್ಲ ಎಂದು ಸಂಜಯ್ ಪಾಟೀಲ್ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಸಾಹೇಬರೇ ನೀವು ಅವರಿಗೆ ಹಣ ಕೊಟ್ಟಿಲ್ಲ ಎನ್ನುತ್ತಿದ್ದಾರೆ ನಿಜವೇ ಎಂದು ವೇದಿಕೆಯಲ್ಲಿ ಕುಳಿತಿದ್ದ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಲಕ್ಷ್ಮಿ ಹೆಬ್ಬಾಳ್ಕರ್ ಕೇಳಿದರು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ನಾನು ಆತನನ್ನ ನೋಡೇ ಇಲ್ಲ ಎಂದು ಹೇಳಿದರು. ನಂತರ ಮಾರ್ಚ್ 5ರಂದು ರಾಜಹಂಸಗಡದಲ್ಲಿ ನಾವೆಲ್ಲರೂ ಸೇರಿ ಶಿವಾಜಿ ಪ್ರತಿಮೆ ಉದ್ಘಾಟನೆ ಮಾಡೋಣ ಎಂದು ಜನರಿಗೆ ಶಾಸಕಿ ಕರೆ ನೀಡಿದರು.
ಕಾಂಗ್ರೆಸ್ ಸಾಧನೆಗಳನ್ನು ಜನರಿಗೆ ತಲುಪಿಸಬೇಕು: ಸತೀಶ್ ಜಾರಕಿಹೊಳಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ನಮ್ಮ ಸರ್ಕಾರ ಮಾಡಿದ ಸಾಧನೆಗಳನ್ನು ಜನರಿಗೆ ತಿಳಿಸಲು ಪ್ರಜಾಧ್ವನಿ ಸಮಾವೇಶ ಮಾಡುತ್ತಿದ್ದೇವೆ. ಈಗಾಗಲೇ ಮೂರು ಯೋಜನೆ ಘೋಷಣೆ ಮಾಡುವ ಭರವಸೆ ನೀಡಿದ್ದೇವೆ. 200 ಯುನಿಟ್ ಉಚಿತ ವಿದ್ಯುತ್, 10 ಕೆಜಿ ಅಕ್ಕಿ, ಪ್ರತಿ ಮನೆಗೆ 2 ಸಾವಿರ ಹಣ ನೀಡಲು ನಿರ್ಧರಿಸಿದ್ದೇವೆ. ಬರುವ ದಿನಗಳಲ್ಲಿ ನೀರಾವರಿ ಸಂಬಂಧಿಸಿದ ಯೋಜನೆಗಳನ್ನು ಘೋಷಣೆ ಮಾಡುತ್ತೇವೆ. ನಮ್ಮ ಸಾಧನೆ, ಯೋಜನೆಗಳ ಬಗ್ಗೆ ಜನರಿಗೆ ತಲುಪಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ | BJP Rathayatre: ಮಿಷನ್ 150 ಗುರಿಯ ವಿಜಯ ಸಂಕಲ್ಪ ರಥಯಾತ್ರೆಗೆ ಜೆ.ಪಿ. ನಡ್ಡಾ ಚಾಲನೆ; ವಿ. ಸೋಮಣ್ಣ ಗೈರು
ಮೊನ್ನೆಯ ಬೆಳಗಾವಿಯಲ್ಲಿ ನಡೆದ ಮೋದಿ ಕಾರ್ಯಕ್ರಮ ಸಕ್ಸಸ್ ಆಗಲು ಪಿಡಿಒಗಳು ಕಾರಣ. ಬಹಳಷ್ಟು ಕಡೆ ಬಸ್ ಭರ್ತಿ ಆಗಿರಲಿಲ್ಲ. ಹೀಗಾಗಿ ಉದ್ಯೋಗ ಖಾತ್ರಿ ಜನರನ್ನು ಕರೆತಂದರು. ನಮ್ಮ ಬಳಿಯೂ ಬಸ್ ಖಾಲಿ ಇರುವ ಫೋಟೊಗಳು ಬಂದಿವೆ ಎಂದು ವ್ಯಂಗ್ಯವಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಅಡುಗೆ ಅನಿಲ ಬೆಲೆ ಮತ್ತೆ 50 ರೂಪಾಯಿ ಏರಿಕೆಯಾಗಿದೆ. ಬೆಲೆ ಏರಿಕೆ ಮೂಲಕ ಬಿಜೆಪಿ ಜನಸಾಮಾನ್ಯರ ವಿರೋಧಿ ಆಡಳಿತ ಮಾಡುತ್ತಿದೆ. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ನೀಡುವಂತೆ ಮನವಿ ಮಾಡಿದರು.