ಉಡುಪಿ: ʻʻನನಗೆ ಬಾಲ್ಯದಲ್ಲೇ ವೈದ್ಯಳಾಗಬೇಕು ಎಂಬ ಕನಸಿತ್ತು. ಆದರೆ, ಈಡೇರಲಿಲ್ಲ. ನನ್ನ ಮಗ ಎಂಜಿನಿಯರ್ ಆದ. ಸೊಸೆ ಡಾಕ್ಟರ್ ಆಗಿದ್ದಾಳೆ. ಸೊಸೆ ಮೂಲಕ ಕುಟುಂಬದಲ್ಲಿ ವೈದ್ಯರ ಕೊರತೆ ನೀಗಿದೆʼʼ- ಹೀಗೆ ತಮ್ಮ ಕನಸು ಮತ್ತು ಖುಷಿ ಹಂಚಿಕೊಂಡರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar).
ಉಡುಪಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ನಡೆದ ಉಡುಪಿ ಜಿಲ್ಲಾ ಸರಕಾರಿ ಪದವಿಪೂರ್ವ ಕಾಲೇಜುಗಳ ವಿಜ್ಞಾನ ವಿದ್ಯಾರ್ಥಿಗಳಿಗಾಗಿ CET/NEET/JEE ಆನ್ ಲೈನ್ ತರಬೇತಿಗೆ ಚಾಲನೆ ನೀಡಿದ ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಪ್ರೇರಣೆಯ ಮಾತುಗಳನ್ನಾಡಿದರು.
ʻʻಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಅಕ್ಕಮಹಾದೇವಿಯಂಥವರು ರಾತ್ರೋರಾತ್ರಿ ದೊಡ್ಡವರಾಗಿಲ್ಲ. ಅವರ ಪರಿಶ್ರಮದಿಂದಲೇ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾದರುʼʼ ಎಂದು ವಿವರಿಸಿದರು. ʻʻಇಂದಿನ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಆನ್ ಲೈನ್ ವ್ಯವಸ್ಥೆ ಇದೆ. ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಓದುವುದಕ್ಕೂ ಸೂಕ್ತ ಸ್ಥಳವಿರಲಿಲ್ಲ. ಬೀದಿ ದೀಪದ ಕೆಳಗೆ ಕುಳಿತು ಓದಿ, ದೊಡ್ಡ ವ್ಯಕ್ತಿಯಾದರುʼʼ ಎಂದು ನೆನಪಿಸಿದರು.
ʻʻಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸೂಕ್ತವಾಗಿ ಬಳಸಿಕೊಂಡು ಮುಂದೆ ಬನ್ನಿ. ಎಲ್ಲಾ ಮಹಾತ್ಮರ ಬದುಕು ನಿಮಗೆಲ್ಲಾ ಆದರ್ಶವಾಗಬೇಕುʼʼ ಎಂದು ಹೇಳಿದರು ಲಕ್ಷ್ಮೀ ಹೆಬ್ಬಾಳ್ಕರ್.
ʻʻಭಾರತಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದೆ. ನಮ್ಮ ಹಿಂದಿನ ಮಹಾರಾಜರು ತಮ್ಮ ಮಕ್ಕಳಿಗೆ ಕಷ್ಟ ಅರ್ಥ ಮಾಡಿಸುವ ದೃಷ್ಟಿಯಿಂದ ಗುರುಕುಲಗಳಲ್ಲಿ ವಿದ್ಯಾಭ್ಯಾಸ ಕೊಡಿಸುತ್ತಿದ್ದರುʼʼ ಎಂದು ಹೇಳಿದ ಅವರು, ʻʻನಾವು ಎಂದಿಗೂ ನಮ್ಮ ಪಾಲಕರಿಗೆ ಋಣಿಯಾಗಿರಬೇಕು, ಯಾಕೆಂದರೆ ಅವರು ಎಷ್ಟೇ ಕಷ್ಟಪಟ್ಟಾದರೂ ಮಕ್ಕಳಿಗೆ ಉತ್ತಮ ಸೌಲಭ್ಯ ಕಲ್ಪಿಸುತ್ತಾರೆ. ಮಕ್ಕಳಿಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಡುತ್ತಾರೆ. ನನ್ನ ಮಗ, ಮಗಳು ಸಮಾಜದ ಆಸ್ತಿಯಾಗಬೇಕು ಎಂದು ಪೋಷಕರು ಕನಸು ಕಾಣುತ್ತಾರೆ ಎಂದರು.
ಉಡುಪಿ ಜಿಲ್ಲಾ ಪಂಚಾಯತಿ ಆರಂಭಿಸಿರುವ ಆನ್ ಲೈನ್ ಸೇವೆಯನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಸಿಇಒ ಎಚ್.ಪ್ರಸನ್ನ, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ, ಉಪ ವಿಭಾಗಧಿಕಾರಿ ರಶ್ಮಿ ಉಪಸ್ಥಿತರಿದ್ದರು.
ಸಂಜೀವಿನಿ ಸೂಪರ್ ಮಾರ್ಕೆಟ್‌ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮೆಚ್ಚುಗೆ
ಉಡುಪಿ: ಸಮೃದ್ಧಿ ಸಂಜೀವಿನಿ ಸ್ವಸಹಾಯ ಗುಂಪಿನ ಸದಸ್ಯರು ಆರಂಭಿಸಿರುವ ‘ಸಂಜೀವಿನಿ ಸೂಪರ್ ಮಾರ್ಕೆಟ್’ʼ ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು. ಉಡುಪಿಯ ತಾಲೂಕು ಪಂಚಾಯತ್ ಆವರಣದಲ್ಲಿ ಆರಂಭಿಸಿರುವ ಸೂಪರ್ ಮಾರ್ಕೆಟ್ ಹಾಗೂ ಸಂಜೀವಿನಿ ಆಹಾರೋತ್ಸವಕ್ಕೆ ಸೋಮವಾರ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, ಪುರುಷರಿಗೆ ಹೋಲಿಸಿದರೆ ಮಹಿಳೆಯರು ಶಾರೀರಿಕವಾಗಿ ಅಶಕ್ತರಿರಬಹುದು, ಆದರೆ ಮಾನಸಿಕವಾಗಿ ಪುರುಷರಿಗಿಂತ ಹೆಚ್ಚು ಶಕ್ತವಾಗಿದ್ದಾಳೆ ಎಂದರು.
ಫ್ಯಾಬ್ ಇಂಡಿಯಾ, ಗುಡ್ ಅರ್ಥ್ ನಂತ ಮಾರುಕಟ್ಟೆಗಳಿಗಿಂತಲೂ ಸಂಜೀವಿನಿ ಸೂಪರ್ ಮಾರ್ಕೆಟ್ ಅದ್ಭುತವಾಗಿದೆ ಎಂದರು. ಮಹಿಳೆಯರು ಸ್ವಾವಲಂಬನೆ ಜೀವನ ನಡೆಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಗೃಹ ಲಕ್ಷ್ಮಿ, ಶಕ್ತಿ ಯೋಜನೆ, ಗೃಹ ಜ್ಯೋತಿಯಂತಹ ಕಾರ್ಯಗಳನ್ನು ಜಾರಿಗೆ ತಂದಿದೆ. ಮಹಿಳೆಯರ ಮುಖದಲ್ಲಿ ಮಂದಹಾಸ ತರುವುದೇ ಸರ್ಕಾರದ ಉದ್ದೇಶ. ಎಲ್ಲಾ ಮಹಿಳೆಯರು ಸ್ವಾಭಿಮಾನಿ ಜೀವನ ಕಟ್ಟಿಕೊಳ್ಳುವುದು. ಅಚಾರ, ವಿಚಾರಗಳನ್ನು ಎಲ್ಲರೂ ಅಳವಡಿಸಿಕೊಂಡು ಸಾಗಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ಸಂಜೀವಿನಿ ಸೂಪರ್ ಮಾರ್ಕೆಟ್ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವಂತಾಗಲಿ ಎಂದು ಸಚಿವರು ಹಾರೈಸಿದರು.
ಈ ವೇಳೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಜಿಲ್ಲಾ ಪಂಚಾಯತಿ ಸಿಇಒ ಪ್ರಸನ್ನ, ಉಪವಿಭಾಗಧಿಕಾರಿ ಎಸ್.ಆರ್.ರಶ್ಮಿ, ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಉಪಸ್ಥಿತರಿದ್ದರು.
ಇದನ್ನೂ ಓದಿ : Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್; ಒಂದೇ ದಿನ 2 ಸಿಹಿ ಸುದ್ದಿ!