Site icon Vistara News

Lakshmi Hebbalkar : ಗೃಹಲಕ್ಷ್ಮಿ ನೋಂದಣಿಗೆ ದುಡ್ಡು ಪಡೆದರೆ, ಅಸಡ್ಡೆ ತೋರಿದರೆ ಕ್ರಿಮಿನಲ್ ಕೇಸ್‌: ಹೆಬ್ಬಾಳ್ಕರ್‌ ವಾರ್ನಿಂಗ್

Lakshmi Hebbalkar

ಬೆಳಗಾವಿ: ಗೃಹಲಕ್ಷ್ಮೀ ಯೋಜನೆ (Gruha Lakshmi scheme) ನೋಂದಣಿ ವಿಷಯದಲ್ಲಿ ಗ್ರಾಮ ಒನ್‌, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್‌, ಕರ್ನಾಟಕ ಒನ್‌ ಸೇರಿದಂತೆ ಯಾವುದೇ ಕೇಂದ್ರದ ಸಿಬ್ಬಂದಿ ಅಸಡ್ಡೆ ತೋರಿದರೆ, ಜನರಿಂದ ದುಡ್ಡು ಪಡೆದರೆ ಅಂತವರ ಮೇಲೆ ಕ್ರಿಮಿನಲ್ ಪ್ರಕರಣ (Criminal Case if money recieved illegally) ದಾಖಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ 3 ಜನರ ಲಾಗಿನ್ ಐಡಿ ವಾಪಸ್ ಪಡೆಯಲಾಗಿದೆ. ಸರಕಾರವಾಗಲೀ ಇಲಾಖೆಯಾಗಲಿ ಸುಮ್ಮನೆ ಕುಳಿತಿಲ್ಲ. ಅಂತವರ ಮೇಲೆ ಕ್ರಿಮಿನಲ್ ಪ್ರಕರಣವನ್ನು ಸಹ ದಾಖಲಿಸಲಾಗುವುದು ಎಂದು ಹೇಳಿದರು.

ಗೃಹ ಲಕ್ಷ್ಮೀ ಯೋಜನೆಯನ್ನು ಮಹಿಳೆಯರು ಉಚಿತವಾಗಿ ಮಾಡಿಸಿಕೊಳ್ಳಬೇಕೆಂದು ಬಹಳಷ್ಟು ಕಷ್ಟಪಟ್ಟು ಜಾರಿ ಮಾಡಿದ್ದೇವೆ. ಇದರಲ್ಲೂ ದುಡ್ಡು ಪಡೆಯುತ್ತಿರುವುದು ಗಮನಕ್ಕೆ ಬಂದರೆ ಅಂತವರ ಲಾಗಿನ್ ಐಡಿ ಮತ್ತು ಪಾಸ್‌ ವರ್ಡ್ ವಾಪಸ್ ಪಡೆಯಲು ಸೂಚನೆ ಕೊಡಲಾಗಿದೆ. ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ತಹಸಿಲ್ದಾರ್, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಯಾರಿಗೇ ಆಗಲಿ ಹಣ ಪಡೆಯುವುದು ಗಮನಕ್ಕೆ ಬಂದರೆ ತಕ್ಷಣ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕು. ಅಸಡ್ಡೆ ಮಾಡಿದರೆ ಅವರೂ ಜವಾಬ್ದಾರರಾಗುತ್ತಾರೆ ಎಂದೂ ಸಚಿವರು ತಿಳಿಸಿದರು.

ಯಾರಿಂದಲೂ ಉಚಿತವಾಗಿ ಕೆಲಸ ಮಾಡಿಸಿಕೊಳ್ಳುತ್ತಿಲ್ಲ

ನಾವು ಯಾರಿಂದಲೂ ಉಚಿತವಾಗಿ ಮಾಡಿಸಿಕೊಳ್ಳುತ್ತಿಲ್ಲ. ಅಪ್ ಲೋಡ್ ಮಾಡುವವರಿಗೆ ಸರಕಾರದಿಂದಲೇ ಪ್ರತಿ ಅರ್ಜಿಗೆ 12 ರೂ. ನೀಡಲಾಗುತ್ತಿದೆ. 10 ರೂ. ಅಪ್ ಲೋಡ್ ಮಾಡಲು, 2 ರೂ. ಪ್ರಿಂಟ್ ಔಟ್ ಕೊಡಲು ನೀಡಲಾಗುತ್ತಿದೆ. ಹಾಗಾಗಿ ಜನರು ಯಾರಿಗೂ ದುಡ್ಡು ಕೊಡಬೇಕಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಶನಿವಾರವರೆಗೆ 22 ಲಕ್ಷ ನೋಂದಣಿ

ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಶನಿವಾರದವರೆಗೆ 22,90,782 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಶನಿವಾರ ಒಂದೇ ದಿನ 14,16,462 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ 1.28 ಕೋಟಿ ಅರ್ಹ ಫಲಾನುಭವಿಗಳಿದ್ದು, ಅವರೆಲ್ಲರೂ ನೋಂದಣಿ ಮಾಡಿಕೊಳ್ಳುವ ಹಾಗೆ ಕ್ರಮ ಕೈಗೊಳ್ಳಲಾಗುವುದು. 88 ಲಕ್ಷ ಕುಟುಂಬಗಳ ಯಜಮಾನಿಯರ ಮೊಬೈಲ್‌ ನಂಬರ್‌ ಸರ್ಕಾರದ ಬಳಿ ಇದೆ. ಉಳಿದವರಿಗೂ ನೋಂದಣಿ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದರು.

ಇದನ್ನೂ ಓದಿ : Power Point with HPK : ಈಗ ರಮೇಶ್‌ ಜಾರಕಿಹೊಳಿ ಎದುರು ಬಂದು ನಿಂತ್ರೆ ಲಕ್ಷ್ಮಿ ಹೆಬ್ಬಾಳ್ಕರ್‌ ಏನು ಮಾಡಬಹುದು?

Exit mobile version