Site icon Vistara News

Lakshmi Hebbalkar : ನಾನು ನಿಮ್ಮಅಕ್ಕ, ಎಂದಿಗೂ ಜತೆಗಿರ್ತೇನೆ; ಹೆಬ್ಬಾಳ್ಕರ್‌ ಮಾತಿಗೆ ಕರಗಿದ ಪ್ರತಿಭಟನೆ

Lakshmi hebbalkar

ಬೆಳಗಾವಿ: ವಿಕಲ ಚೇತನರ (Handicapped) ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಬೇಡಿಕೆಗಳನ್ನು ಸಾಧ್ಯವಾದಷ್ಟು ಮುಂದಿನ ಬಜೆಟ್‌ನಲ್ಲಿ ಈಡೇರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಭರವಸೆ ನೀಡಿದ್ದಾರೆ. ಬೆಳಗಾವಿ ಸುವರ್ಣಸೌಧದ ಬಳಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಭೇಟಿಯಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪ್ರತಿಭಟನಾಕಾರರ ಅಹವಾಲು ಆಲಿಸಿದರು.

ʻʻನಿಮ್ಮ ಸಹೋದರಿಯಾಗಿ ನಿಮ್ಮ ಜೊತೆ ನಾನಿರುತ್ತೇನೆ. ನಿಮ್ಮ ಬೇಡಿಕೆಗಳನ್ನು ಈಡೆರಿಸಲು ಸತತವಾಗಿ ಪ್ರಯತ್ನಿಸುತ್ತೇನೆ. ನಿಮ್ಮ ಬೆಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. 2024ರ ಬಜೆಟ್ ನಲ್ಲಿ ನಿಮ್ಮ ಬೇಡಿಕೆಗಳಲ್ಲಿ ಕನಿಷ್ಠ 2-3 ಬೇಡಿಕೆ ಈಡೇರಿಸಲು ಯತ್ನಿಸುತ್ತೇನೆ. ಕೇವಲ ಭಾಷಣಕ್ಕೆ ಸೀಮಿತವಾಗದೇ ನಿಜವಾದ ಕಾಳಜಿಯಿಂದ ಒಡಹುಟ್ಟಿದವರು ಎಂದು ತಿಳಿದು ಕೆಲಸ ಮಾಡುತ್ತೇನೆʼʼ ಎಂದು ಭರವಸೆ ನೀಡಿದರು.

ಫೆಬ್ರುವರಿಯಲ್ಲಿ ವಿಕಲಚೇತನರ ಒಕ್ಕೂಟದ ಪ್ರಮುಖ ಪದಾಧಿಕಾರಿಗಳನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ದು ಬೇಡಿಕೆಗಳನ್ನು ಮಂಡಿಸಲು ಅವಕಾಶವನ್ನು ಮಾಡಿಕೊಡುತ್ತೇನೆ. ಹಾಗಾಗಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಿರಿ ಎಂದು ಸಚಿವರು ವಿನಂತಿಸಿದರು. ಸಚಿವರ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲು ನೌಕರರು ಸಮ್ಮತಿಸಿದರು.

ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸಿದ ಸಚಿವೆ

ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆದು ಬೆಂಗಳೂರಿನ ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯನ್ನು ವಸತಿಯುತ ಶಾಲೆಯನ್ನಾಗಿ ಪರಿವರ್ತಿಸಲು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿಧಾನ ಪರಿಷತ್ ನಲ್ಲಿ‌ ಮಂಗಳವಾರ ಭರವಸೆ ನೀಡಿದರು.

ನಿಯಮ 72 ರ ಅಡಿಯಲ್ಲಿ ಕೆ.ಎ.ತಿಪ್ಪೇಸ್ವಾಮಿ ಪ್ರಶ್ನೆಗೆ ಸಚಿವರು ಉತ್ತರ ನೀಡುತ್ತಿದ್ದರು. ವಸತಿ ಶಾಲೆಯನ್ನಾಗಿ ಪರಿವರ್ತಿಸಲು ಈಗಾಗಲೇ ಮಂಜೂರಾಗಿರುವ 20 ಹುದ್ದೆಗಳೊಂದಿಗೆ ಹೆಚ್ಚುವರಿಯಾಗಿ 12 ಹುದ್ದೆಗಳ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಪರಿಸ್ಕೃತ ಪ್ರಸ್ತಾವನೆ ಸ್ವೀಕೃತವಾಗಿದ್ದು, ಆರ್ಥಿಕ ಇಲಾಖೆಯಿಂದ ಮಂಜೂರಾತಿ ಹಾಗೂ ನಿಯಮನುಸಾರ ಭರ್ತಿ ಮಾಡಿದ ನಂತರ ವಸತಿಯುತ ಶಲೆಯನ್ನಾಗಿ ಪರಿವರ್ತಿಸಲು ಕ್ರಮ ವಹಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: Assembly Session : ಬರ ಸಂತ್ರಸ್ತ ರೈತರ 2 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ; HDK ಆಗ್ರಹ

ನಮ್ಮ ಇಲಾಖೆ ಸೇವೆ ಮಾಡುವ ಇಲಾಖೆ, ದುರ್ಬಲರ ಜೀವನಕ್ಕೆ ಅಡಿಪಾಯ ಮಾಡುವ ಇಲಾಖೆ. ಸಮಾಜದ ಕಾಳಜಿ ಇಟ್ಟುಕೊಂಡು ಇಂತಹ ಇಲಾಖೆ ನಿಭಾಯಿಸಲು ಮುಖ್ಯಮಂತ್ರಿಗಳು ಅವಕಾಶ ಕೊಟ್ಟಿದ್ದಾರೆ ಅದಕ್ಕಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಜೊತೆಗೆ ಈ ಚಿಂತನ ಚಾವಡಿಯಲ್ಲಿ ಹಲವಾರು ಸದಸ್ಯರು ಉತ್ತಮ ಸಲಹೆಗಳನ್ನು ಕೊಟ್ಟಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿ, ಆದಷ್ಟು ಶೀಘ್ರ ಸಮಗ್ರ ಅಧ್ಯಯನ ಮಾಡಿ ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಿ, ಉತ್ತಮ ನಿರ್ಧಾರ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.

Exit mobile version