ನವದೆಹಲಿ: ಕನ್ನಡದ ಖ್ಯಾತ ಬರಹಗಾರ ಲಕ್ಷ್ಮೀಶ ತೋಳ್ಪಾಡಿ (Lakshmisha Tolpadi) ಅವರಿಗೆ 2023ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ(kendra sahitya academy award). ಲಕ್ಷ್ಮೀಶ ಅವರು ಬರಹಗಾರರು ಮಾತ್ರವಲ್ಲದೇ, ಕನ್ನಡದ ಹಿರಿಯ ಚಿಂತಕರು ಹಾಗೂ ಖ್ಯಾತ ವಾಗ್ಮಿಗಳು ಹೌದು.
ಲಕ್ಷ್ಮೀಶ ತೋಳ್ಪಾಡಿ ಅವರ ಮಹಾಭಾರತದ ಅನುಸಂಧಾನದ ಭಾರತಯಾತ್ರೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಕನ್ನಡ ವಿಭಾಗದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ಆನಂದ ಝುಂಜರವಾಡ ಮತ್ತು ಜೆ. ಎನ್. ತೇಜಶ್ರೀ ಅವರಿದ್ದರು.
ಲಕ್ಷ್ಮೀಶ ತೋಳ್ಪಾಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಾಂತಿಗೋಡು ಗ್ರಾಮದವರು. ಇವರದು ತೋಳ್ಳಾಡಿತ್ತಾಯ ವೈದಿಕ ಮನೆತನವಾಗಿದ್ದು, ತುಳು ಆಡುಭಾಷೆಯಾಗಿದೆ. ಅವರ ಸಾಹಿತ್ಯದಲ್ಲಿ ನಾವು ವೈದಿಕ ಮತ್ತು ವೈಚಾರಿಕ ನಿಲುವುಗಳನ್ನು ಪರಸ್ಪರ ಮುಖಾಮುಖಿಯಾಗಿಸಿದ್ದನ್ನು ಗುರುತಿಸಬಹುದು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಟ್ಟಿ ಇಲ್ಲಿದೆ
ಭಗವದ್ಗೀತೆಯ ಕುರಿತಾದ ‘ಮಹಾಯುದ್ದಕ್ಕೆ ಮುನ್ನ’ ಅವರ ಮೊದಲ ಪ್ರಕಟಿತ ಕೃತಿಯಾಗಿದೆ. ಭಾಗವತದ ಬಗ್ಗೆ ಬರೆದ ಸರಣಿ ಬರಹಗಳ ಸಂಕಲನ ‘ಸಂಪಿಗೆ ಭಾಗವತ’, ‘ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ’, ‘ಭವ ತಲ್ಲಣ’ ಅವರ ಇತರ ಕೃತಿಗಳಾಗಿವೆ. ಜತೆಗೆ, ಕನ್ನಡದ ಅನೇಕ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕವಾಗುತ್ತಲೇ ಇರುತ್ತವೆ.
ಇನ್ನು ಮಲಯಾಳಂ ಖ್ಯಾತ ಬರಹಗಾರ ಇ.ವಿ ರಾಮಕೃಷ್ಣನ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಅವರು ಬರೆದ ದೇಶ ಕಾಲಂಞಳ್ ಕಾದಂಬರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.
ಒಟ್ಟು 24 ಭಾಷೆಗಳ ಕೃತಿಗಳಿಗೆ ಪ್ರಶಸ್ತಿ ಘೋಷಣೆಯಾಗಿದ್ದು, ಪ್ರಶಸ್ತಿ ಮೊತ್ತ ಒಂದು ಲಕ್ಷ ರೂಪಾಯಿ ಹಾಗು ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಮಾರ್ಚ್ 12ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ದೆಹಲಿಯ ಕಾಮಿನಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಈ ಸುದ್ದಿಯನ್ನೂ ಓದಿ: Premashekhara: ಸಾಹಿತಿ ಪ್ರೊ. ಪ್ರೇಮಶೇಖರಗೆ ಸರ್ವಭಾಷಾ ಸಾಹಿತಿಗಳ ಸಮ್ಮಾನದಲ್ಲಿ ಗೌರವ