Site icon Vistara News

Lalbagh Flower Show | ಗಮನ ಸೆಳೆದ ಜ್ಯೋತಿ ರ‍್ಯಾಲಿ-ಬ್ಯಾಂಡ್‌ ಬಜಾನ; ಕಳೆಗಟ್ಟಿದೆ ಸಸ್ಯ ಕಾಶಿ!

puneet samadhi muniratna

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ (Lalbagh Flower Show) ಈ ಬಾರಿ ಅದ್ಧೂರಿ ಚಾಲನೆ ದೊರೆತಿದೆ. ಬ್ಯಾಂಡ್‌ ಪ್ರದರ್ಶನ ಸಹ ಮೆರವಣಿಗೆಗೆ ಮೆರಗು ತಂದರೆ, ಸಸ್ಯ ಕಾಶಿ ಕಳೆಗಟ್ಟಿದೆ. ಪುನೀತ್‌ ಸಮಾಧಿಯಿಂದ ಅವರ ಮನೆ ಹಾಗೂ ಲಾಲ್‌ಬಾಗ್‌ವರೆಗೆ ಸಾಗಿದ ಜ್ಯೋತಿ ಹೊತ್ತ ವಾಹನದ ರ‍್ಯಾಲಿ ಎಲ್ಲರ ಗಮನ ಸೆಳೆದಿದೆ.

ಕಳೆದ ಕೆಲವು ದಿನಗಳಿಂದ ಸಿದ್ಧತೆ ಕೈಗೊಂಡಿದ್ದ ಸರ್ಕಾರ ಈ ಬಾರಿ ಡಾ.ರಾಜಕುಮಾರ್‌ ಅವರ ಗಾಜನೂರಿನ ಮನೆ ಹಾಗೂ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ವಿಷಯಾಧಾರಿತವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್‌ 5 ರ ಶುಕ್ರವಾರ ಮುಂಜಾನೆ ತೋಟಗಾರಿಕಾ ಸಚಿವ ಮುನಿರತ್ನ ಅವರು ಪುನೀತ್‌ ರಾಜಕುಮಾರ್‌ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.

ಪುನೀತ್‌ ರಾಜಕುಮಾರ್‌ ಅವರ ಮನೆಗೆ ಜ್ಯೋತಿಯನ್ನು ಹೊತ್ತೊಯ್ಯುತ್ತಿರುವ ಹೊರಟಿರುವ ಸಚಿವ ಮುನಿರತ್ನ.

ಜ್ಯೋತಿ ಹೊತ್ತಿಸಿ ರ‍್ಯಾಲಿಗೆ ಚಾಲನೆ

ಪುನೀತ್‌ ಸಮಾಧಿಗೆ ಸಚಿವ ಮುನಿರತ್ನ ನಮಿಸಿದ ನಂತರ, ಅಲ್ಲಿಂದ ಜ್ಯೋತಿ ಹೊತ್ತಿಸಿ ರ‍್ಯಾಲಿಗೆ ಚಾಲನೆ ನೀಡಿದರು. ಜ್ಯೋತಿ ರ‍್ಯಾಲಿಗಾಗಿಯೇ ವಿಶೇಷ ವಾಹನವನ್ನು ಸಿದ್ಧಪಡಿಸಿದ್ದು, ಆ ವಾಹನದ ಮುಂದೆ ಡಾ.ರಾಜಕುಮಾರ್‌ ಹಾಗೂ ಡಾ.ಪುನೀತ್‌ ರಾಜಕುಮಾರ್‌ ಅವರ ಪ್ರತಿಮೆಯನ್ನು ಕೂರಿಸಲಾಗಿದೆ. ಅದಕ್ಕೆ ಚೆಂದದ ಹೂವಿನ ಅಲಂಕಾರವನ್ನೂ ಮಾಡಲಾಗಿದೆ. ಈ ಜ್ಯೋತಿ ಹೊತ್ತ ರ‍್ಯಾಲಿಯ ಜತೆ ಜತೆಗೆ ಸೈಕಲ್‌ ರ‍್ಯಾಲಿ ಸಹ ಆರಂಭಗೊಂಡಿದೆ. ಭಾಷ್ಯಂ ಸರ್ಕಲ್‌ ಮೂಲಕ ಪುನೀತ್‌ ಮನೆಯನ್ನು ತಲುಪಿದ ಜ್ಯೋತಿಯು ಅಲ್ಲಿಂದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ಸ್ಥಳಕ್ಕೆ ಬಂದಿದೆ. ಈ ವೇಳೆ ಪುನೀತ್‌ ಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌, ಸಹೋದರರಾದ ಶಿವರಾಜಕುಮಾರ್‌ ಹಾಗೂ ರಾಘವೇಂದ್ರ ರಾಜಕುಮಾರ್‌ ಸಹಿತ ರಾಜ್‌ ಕುಟುಂಬಸ್ಥರು ಭಾಗಿಯಾಗಿದ್ದರು.

ಪುನೀತ್‌ ರಾಜಕುಮಾರ್‌ ಅವರ ಮನೆಯಲ್ಲಿ ಜ್ಯೋತಿಯಿಂದ ದೀಪ ಬೆಳಗಲಾಯಿತು.

ಇದನ್ನೂ ಓದಿ | ನವೆಂಬರ್‌ 1ಕ್ಕೆ ಪುನೀತ್‌ ರಾಜಕುಮಾರ್‌ಗೆ ಕರ್ನಾಟಕ ರತ್ನ ಪ್ರದಾನ; ಸಿಎಂ ಬೊಮ್ಮಾಯಿ ಘೋಷಣೆ

ಸಿಎಂ ಅದ್ಧೂರಿ ಚಾಲನೆ
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ಜಾಗಕ್ಕೆ ಜ್ಯೋತಿಯನ್ನು ತಂದ ಮೇಲೆ ಆ ಜ್ಯೋತಿಯನ್ನು ಹಿಡಿಯುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಇವರಿಗೆ ತೋಟಗಾರಿಕಾ ಸಚಿವ ಮುನಿರತ್ನ, ಪುನೀತ್‌ ಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌, ಸಹೋದರರಾದ ಶಿವರಾಜಕುಮಾರ್‌ ಹಾಗೂ ರಾಘವೇಂದ್ರ ರಾಜಕುಮಾರ್‌ ಅವರು ಸಾಥ್‌ ನೀಡಿದರು.

ಕಳೆಗಟ್ಟಿದ ಸಸ್ಯ ಕಾಶಿ
ಸಸ್ಯ ಕಾಶಿ ಎಂದೇ ಪ್ರಸಿದ್ಧವಾಗಿರುವ ಲಾಲ್‌ಬಾಗ್‌ ಕಳೆಕಟ್ಟಿದ್ದು, ಸುಂದರ ಹೂವುಗಳ ಅಲಂಕಾರಗಳು ಎಲ್ಲರ ಗಮನ ಸೆಳೆಯುತ್ತಿದೆ. ಪುನೀತ್‌ ರಾಜಕುಮಾರ್‌ ಅವರ ಪ್ರತಿಮೆ ಸೇರಿದಂತೆ ಡಾ. ರಾಜ್‌ ಕುಟುಂಬದ ಗಾಜನೂರಿನ ಮೂಲಮನೆ ಎಲ್ಲರ ಗಮನ ಸೆಳೆಯುತ್ತಿದೆ. ಅಲ್ಲದೆ, ಫುಡ್‌ ಕೋರ್ಟ್‌ ಸಹಿತ ಸಕಲ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗಿದೆ.

ಸಂಗೀತ ಬ್ಯಾಂಡ್‌ ಪ್ರದರ್ಶನ

ಗಮನ ಸೆಳೆದ ಬ್ಯಾಂಡ್‌ ಸಂಗೀತ
ಫಲ ಪುಷ್ಪ ಪ್ರದರ್ಶನ ಆರಂಭದ ದಿನ ಅದಕ್ಕೆ ಇನ್ನಷ್ಟು ಮೆರಗು ತರುವುದು, ಕಳೆಕಟ್ಟುವುದು ಈ ಬ್ಯಾಂಡ್‌ ಸಂಗೀತ ಪ್ರದರ್ಶನದಿಂದ ಎಂಬುದರಲ್ಲಿ ಎರಡು ಮಾತಿಲ್ಲ. ಬ್ಯಾಂಡ್‌ ವಾದ್ಯಗಳೊಂದಿಗೆ ಮೇಳೈಸುತ್ತಿದ್ದರೆ ಕೇಳುಗರಿಗೆ ಪುಳಕವನ್ನುಂಟು ಮಾಡುತ್ತದೆ. ಈ ಬಾರಿ 2 ಬಿಎಸ್‌ಎಫ್‌ ಹಾಗೂ ಒಂದು ಆರ್ಮಿ ಬ್ಯಾಂಡ್‌ ಸಂಗೀತ ಪ್ರದರ್ಶನವನ್ನು ಹೊಂದಲಾಗಿದ್ದು, ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ | Lalbagh | ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ನಟ ಶಿವರಾಜ್‌ಕುಮಾರ್‌ ಜತೆ ಶಕ್ತಿಧಾಮ ಮಕ್ಕಳ ಭೇಟಿ

ಡಾ. ರಾಜ್ ಸಿನಿಮಾ ಹಾಡುಗಳ ಬ್ಯಾಂಡ್ ಬಜಾನ!
ಬಿಎಸ್‌ಎಫ್‌ನ 2 ಹಾಗೂ ಒಂದು ಆರ್ಮಿ ಬ್ಯಾಂಡ್‌ ಒಳಗೊಂಡ ಸಂಗೀತ ಪ್ರದರ್ಶನ ಗಮನ ಸೆಳೆದಿದ್ದು, ಡಾ.ರಾಜಕುಮಾರ್‌ ಅಭಿನಯದ ಹಾಡುಗಳು ಕೇಳಿಬಂದವು. ಇವು ಹಳೇ ನೆನಪುಗಳನ್ನು ಮತ್ತೆ ಮತ್ತೆ ಮರುಕಳಿಸುವಂತೆ ಮಾಡಿದವು.

ಅಪ್ಪು ಅವರಿಗೆ ಫ್ಲವರ್‌ ಶೋ ಅರ್ಪಣೆ- ಮುನಿರತ್ನ
ಈ ಬಾರಿಯ ಫಲಪುಷ್ಪ ಪ್ರದರ್ಶನವು ಅದ್ಧೂರಿಯಾಗಿ ಇರಲಿದೆ. ಪುನೀತ್‌ ಅವರನ್ನು ಕಳೆದುಕೊಂಡ ನೋವು ನಮಗೆ ಅತಿಯಾಗಿ ಬಾಧಿಸುತ್ತಿದೆಯಾದರೂ ಫಲ ಪುಷ್ಪ ಪ್ರದರ್ಶನದಲ್ಲಿ ಅವರನ್ನು ಕಾಣುತ್ತಿರುವುದು ಸಂತಸದ ವಿಷಯವಾಗಿದೆ. ಅಲ್ಲದೆ, ಈ ಬಾರಿ ಫ್ಲವರ್ ಶೋವನ್ನು ಅಪ್ಪುವಿಗೆ ಅರ್ಪಿಸಲಾಗಿದೆ ಎಂಬ ಖುಷಿ ಸಹ ನಮಗಿದೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ | Lalbagh Flower Show | ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಈ ಬಾರಿ ರಾಜ್‌, ಪುನೀತ್‌ ಫೋಕಸ್‌

Exit mobile version