ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ಆ.8ರಿಂದ 19ರವರೆಗೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ (Lalbagh Flower Show) ಆಯೋಜಿಸಿರುವ ಹಿನ್ನೆಲೆಯಲ್ಲಿ ಉದ್ಯಾನಕ್ಕೆ ಗಣ್ಯವ್ಯಕ್ತಿಗಳು, ಪ್ರವಾಸಿಗರು, ಸಾರ್ವಜನಿಕರು ಸೇರಿ ಸುಮಾರು 8 ರಿಂದ 10 ಲಕ್ಷ ಜನ ಆಗಮಿಸುವ ನಿರೀಕ್ಷೆ ಇರುವುದರಿಂದ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಸಂಚಾರ ಪೊಲೀಸ್ ವಿಭಾಗದಿಂದ ಸುಗಮ ಸಂಚಾರಕ್ಕಾಗಿ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಷೇಧ ಮಾಡಲಾಗಿದ್ದು, ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಒಟ್ಟು 12 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯುವ ಹಿನ್ನೆಲೆಯಲ್ಲಿ ಲಾಲ್‌ಬಾಗ್ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಸುಗಮ ಸಂಚಾರಕ್ಕಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು
- ಡಾ. ಮರಿಗೌಡ ರಸ್ತೆ, ಆಲ್ ಅಮೀನ್ ಕಾಲೇಜ್ ಆವರಣದಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
- ಕೆ.ಎಚ್.ರಸ್ತೆ, ಶಾಂತಿನಗರ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ
ಮಾಡಬಹುದಾಗಿದೆ. - ಡಾ. ಮರಿಗೌಡ ರಸ್ತೆ- ಹಾಪ್ ಕಾಮ್ಸ್‌ನಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
- ಜೆ.ಸಿ. ರಸ್ತೆ- ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳದಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
ವಾಹನಗಳ ನಿಲುಗಡೆ ನಿಷೇಧಿಸಿರುವ ರಸ್ತೆಗಳು
- ಡಾ. ಮರಿಗೌಡ ರಸ್ತೆ, ಲಾಲ್‌ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ
- ಕೆ.ಎಚ್.ರಸ್ತೆ, ಕೆ.ಎಚ್.ವೃತ್ತದಿಂದ ಶಾಂತಿನಗರ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ,
- ಲಾಲ್‌ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ಬಾಗ್ ಮುಖ್ಯದ್ವಾರದವರೆಗೆ
- ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್‌ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್‌ವರೆಗೆ
- ಬಿಟಿಎಸ್ ಬಸ್ ಸ್ಟಾಪ್ ಬಿಎಂಟಿಸಿ ಜಂಕ್ಷನ್‌ನಿಂದ ರಸ್ತೆಯ ಎರಡೂ ಬದಿಗಳಲ್ಲಿ.
- ಕೃಂಬಿಗಲ್ ರಸ್ತೆಯ ಎರಡೂ ಕಡೆಗಳಲ್ಲಿ.
- ಲಾಲ್‌ಬಾಗ್ ವೆಸ್ಟ್‌ಗೇಟ್‌ನಿಂದ ಆರ್.ವಿ. ಟೀಚರ್ಸ್ ಕಾಲೇಜ್‌ವರೆಗೆ.
- ಆರ್‌ವಿ ಟೀಚರ್ಸ್ ಕಾಲೇಜ್‌ನಿಂದ ಅಶೋಕ ಪಿಲ್ಲರ್‌ವರೆಗೆ
- ಅಶೋಕ ಪಿಲ್ಲರ್‌ನಿಂದ ಸಿದ್ದಾಮರ ಜಂಕ್ಷನ್ ವರೆಗೆ.
ಡಾ. ಮರೀಗೌಡ ರಸ್ತೆ, ಲಾಲ್‌ಬಾಗ್ ರಸ್ತೆ, ಕೆ.ಎಚ್. ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗುವುದರಿಂದ ಸಾರ್ವಜನಿಕರು ಸಾಧ್ಯವಾದಷ್ಟು ಮಟ್ಟಿಗೆ ಸಮೂಹ ಸಾರಿಗೆ ವಾಹನಗಳಾದ ಬಿಎಂಟಿಸಿ ಬಸ್‌ಗಳು, ಮೆಟ್ರೋ, ಕ್ಯಾಬ್‌ಗಳನ್ನು ಬಳಸಲು ಹಾಗೂ ವಾಹನಗಳ ನಿಲುಗಡೆಗೆ ಮಾಡಲಾಗಿರುವ ವ್ಯವಸ್ಥೆಯನ್ನು ಅನುಸರಿಸಲು ಕೋರಲಾಗಿದೆ.
ಆ.8ರಿಂದ 19ವರೆಗೆ ಲಾಲ್‌ಬಾಗ್ ಫ್ಲವರ್ ಶೋ; ಅನಾವರಣವಾಗಲಿದೆ ಭೀಮ ಸಂದೇಶ
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ಆ.8ರಿಂದ 19ವರೆಗೆ 216ನೇ ಫಲಪುಷ್ಪ ಪ್ರದರ್ಶನ (Lalbagh Flower Show) ನಡೆಯಲಿದೆ. ಈ ಬಾರಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ (Dr BR Ambedkar) ಅವರ ಜೀವನಗಾಥೆಯ ಥೀಮ್ ನೋಡುಗರನ್ನು ರಂಜಿಸಲಿದ್ದು, ಆಗಸ್ಟ್ 8 ರಂದು ಬೆಳಗ್ಗೆ 10.30ಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಫ್ಲವರ್ ಶೋಗೆ ಚಾಲನೆ ನೀಡಲಿದ್ದಾರೆ.
ಈ ಬಗ್ಗೆ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಶಾಮಲಾ ಇಕ್ಬಾಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಆಗಸ್ಟ್ 8 ರಿಂದ 19ವರೆಗೆ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಅಂಬೇಡ್ಕರ್ ಅವರ ಜೀವನ ಆಧಾರಿತ ಪುಷ್ಪ ಪ್ರದರ್ಶನ ಇರಲಿದ್ದು, ಆಗಸ್ಟ್ 8ರಂದು ಬೆಳಗ್ಗೆ 10.30ಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಇನ್ನು ಮುಖ್ಯ ಅತಿಥಿಯಾಗಿ ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ್ ಯಶವಂತ ಅಂಬೇಡ್ಕರ್ ಅವರು ಬರಲಿದ್ದಾರೆ ಎಂದ ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆ ನಿರ್ದೇಶಕ ರಮೇಶ್ ಮಾತನಾಡಿ, ಈ ಬಾರಿ ಲಾಲ್‌ಬಾಗ್ ಪರಿಸರದಲ್ಲಿ ಭೀಮ ಸಂದೇಶ ಅನಾವರಣವಾಗಲಿದೆ. 12 ದಿನಗಳ ಕಾಲ 6 ಆಂಬ್ಯುಲೆನ್ಸ್ ಸೇರಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸುತ್ತೇವೆ. ಡೆಂಗ್ಯೂ ಆತಂಕ ಇರುವುದರಿಂದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಕಳೆದ ಬಾರಿ ಕುಡಿಯುವ ನೀರಿನ ಸಮಸ್ಯೆ ಆಗಿತ್ತು, ಈ ಬಾರಿ ಅಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಪ್ರವೇಶ ಶುಲ್ಕ ಎಷ್ಟು?
168 ವಿವಿಧ ಪ್ರಭೇದದ ಸಸ್ಯಗಳನ್ನು ನಾವೇ ಬೆಳೆದಿದ್ದೇವೆ. ದ್ವಿ ಚಕ್ರ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ, ಸಂಚಾರ ದಟ್ಟಣೆ ಕಡಿಮೆ ಮಾಡಲು ಜನರು ಆದಷ್ಟು ಮೆಟ್ರೋ ಬಳಸಬೇಕು. ಆನ್‌ಲೈನ್ ಟಿಕೆಟ್ ಕೂಡ ಲಭ್ಯವಿರುತ್ತದೆ. ಪ್ರವೇಶ ಶುಲ್ಕ ಮಕ್ಕಳಿಗೆ 30 ರೂ., ಸಾಮಾನ್ಯರಿಗೆ 100 ರೂ. ಇರಲಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿರಲಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ರಮೇಶ್ ಮಾಹಿತಿ ನೀಡಿದರು.
ಇದನ್ನೂ ಓದಿ | Rajya Sabha Election: 9 ರಾಜ್ಯಗಳ 12 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ಘೋಷಣೆ; ಸೆ.3ಕ್ಕೆ ಮತದಾನ
ಕಳೆದ ಬಾರಿ 60-70 ಲಕ್ಷ ಲಾಭ ಆಗಿದೆ.. ಈ ಬಾರಿ ಕೂಡ ಸಾಕಷ್ಟು ಆದಾಯ ಬರುವ ನಿರೀಕ್ಷೆ ಇದೆ. ವಾಕಿಂಗ್ ಬರುವವರು ಕೂಡ ಟಿಕೆಟ್ ತೆಗೆದುಕೊಂಡು ಬರಬೇಕು. ಪಾರ್ಕ್‌ನಲ್ಲಿ ಜೇನು ಹುಳುಗಳು ಇಲ್ಲ, ಎರಡು ವರ್ಷಗಳ ಹಿಂದೆ ಇತ್ತು, ಈಗ ಇಲ್ಲ. ಬಹುತೇಕ ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.