ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ (Lalbagh Flower Show 2024) ಸಜ್ಜಾಗಿದ್ದು, ಈ ಬಾರಿ ಬಗೆ ಬಗೆಯ ಹೂಗಳ ಮೂಲಕ ವಿಶ್ವ ಗುರು ಬಸವಣ್ಣರ ಜೀವನ ಚರಿತ್ರೆ ಹಾಗೂ ವಚನ ಸಾಹಿತ್ಯದ (Basavanna Flower show) ದರ್ಶನವಾಗಲಿದೆ.
2024 ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ 215ನೇ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದೆ. ಜನವರಿ 18 ರಿಂದ 28ರವರಗೆ ಒಟ್ಟು 11 ದಿನಗಳ ಕಾಲ ಫ್ಲವರ್ ಶೋ ನಡೆಯಲಿದೆ.
2023ರಲ್ಲಿ ಗಣರಾಜ್ಯೋತ್ಸವದಂದು ಬೆಂಗಳೂರು ಇತಿಹಾಸದ ಪ್ರತಿಬಿಂಬವಾಗಿ ಲಾಲ್ ಬಾಗ್ ಬಂಡೆ, ವರ್ಟಿಕಲ್ ಗಾರ್ಡನ್ ರೂಪದಲ್ಲಿ ಗಡಿ ಗೋಪುರ, ಕಾಡುಮಲ್ಲೇಶ್ವರ ದೇವಾಲಯ, ಟಿಪ್ಪುವಿನ ಬೇಸಿಗೆ ಅರಮನೆ, ಹೈಕೋರ್ಟ್, ಬೆಂಗಳೂರು ಅರಮನೆ, ವಿಧಾನಸೌಧದ ಕಲಾಕೃತಿಗಳು ಬಣ್ಣ ಬಣ್ಣದ ಹೂಗಳ ನಡುವೆ ಅರಳಲಿತ್ತು. ಸ್ವಾತಂತ್ರ್ಯ ದಿನದಂದು ವಿಧಾನಸೌಧ ಹಾಗೂ ಅದರ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಥೀಮ್ ಆಯ್ದುಕೊಳ್ಳಲಾಗಿತ್ತು.
2024ರ ಗಣರಾಜ್ಯೋತ್ಸವ ದಿನದಂದು ಬಸವಣ್ಣರ ಥೀಮ್ ಆಯ್ದುಕೊಳ್ಳಲಾಗಿದೆ. ಬಸವಣ್ಣರ ಜೀವನ ಚರಿತ್ರೆ, ವಚನಗಳು, ಧಾರ್ಮಿಕ ಚಟುವಟಿಕೆಯ ವಿಷಯಗಳು, ಅನುಭವ ಮಂಟಪ ಹೂಗಳಲ್ಲಿ ಮೂಡಲಿದೆ.
ಇದನ್ನೂ ಓದಿ: Hijab Row : ಮತ್ತೆ ಹಿಜಾಬ್‌ಗೆ ಅವಕಾಶದಿಂದ ದ್ವೇಷ ಸೃಷ್ಟಿ; ಬಿವೈ ವಿಜಯೇಂದ್ರ ಕೆಂಡಾಮಂಡಲ
ಸ್ಪರ್ಧೆ ಆಯೋಜನೆ
ಲಾಲ್‌ಬಾಗ್ ಫ್ಲವರ್ ಶೋ ಪ್ರದರ್ಶನ ಹಿನ್ನೆಲೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಅಲಂಕಾರಿಕ ತೋಟಗಾರಿಕಾ ಆಸಕ್ತರು ತಮ್ಮ ಮನೆ, ಕಛೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಲಂಕಾರಿಕ ತೋಟಗಳು, ತಾರಸಿ / ಕೈ ತೋಟಗಳು, ತರಕಾರಿ / ಔಷಧಿ ಗಿಡಗಳು, ಕುಂಡದಲ್ಲಿ ಬೆಳೆದ ವಿವಿಧ ಜಾತಿಯ ಗಿಡಗಳು, ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಟಿಕೆಟ್ ದರ ಏರಿಕೆ ಆಗುತ್ತಾ
ಈ ಹಿಂದೆ ಟಿಕೆಟ್ ದರದಲ್ಲಿ ವ್ಯತ್ಯಾಸವಿರಲಿಲ್ಲ. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ರಜಾ ದಿನಗಳಲ್ಲಿ 75 ರೂಪಾಯಿ ನಿಗದಿ ಮಾಡಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ಎಲ್ಲ ದಿನಗಳಲ್ಲಿ 30 ರೂಪಾಯಿ ದರವೇ ನಿಗದಿ ಮಾಡಲಾಗಿದೆ ಎನ್ನಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಾಲ್ಕು ಗೇಟ್‌ಗಳಲ್ಲಿಯೂ ಟಿಕೆಟ್ ಕೌಂಟರ್ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.
ಫ್ಲವರ್ ಶೋಗೆ ಕೋವಿಡ್ ಭೀತಿ
ಹಿಂದೊಮ್ಮೆ 2021ರಲ್ಲಿ ಕೋವಿಡ್ ಕಾರಣದಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಸ್ಥಗಿತಗೊಂಡಿತ್ತು. ಇದೀಗ ಮತ್ತೊಮ್ಮೆ ಕೋವಿಡ್ ಹರಡುವಿಕೆ ಹೆಚ್ಚಾಗುತ್ತಿದ್ದು, ಫ್ಲವರ್ ಶೋಗೆ ಅಡ್ಡಿಯಾಗುತ್ತಾ ಎಂಬ ಪ್ರಶ್ನೆ ಮೂಡುತ್ತಿದೆ. ಸದ್ಯ ಫ್ಲವರ್ ಶೋಗೆ ಬರುವವರಿಗೆ ಮಾಸ್ಕ್ ಕಡ್ಡಾಯ ಮಾಡುವ ಸಾಧ್ಯತೆ ಇದೆ. ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 10-12 ಲಕ್ಷಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆ. ಹೀಗಾಗಿ ಕೋವಿಡ್ ಮುನ್ನೇಚ್ಚರಿಕಾ ಕ್ರಮಕ್ಕೂ ತೋಟಗಾರಿಕೆ ಇಲಾಖೆ ಮುಂದಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ