Site icon Vistara News

Lalbagh Tour : ಸಸ್ಯಕಾಶಿ ಲಾಲ್‌ಬಾಗ್‌ನೊಳಗೆ ಏನೇನಿದೆ? ಮರೆಯದೆ ನೋಡಿ…

Lalbagh information

ಬೆಂಗಳೂರಿನ ಪ್ರಮುಖ ಆಕರ್ಷಣೆಯೆಂದರೆ ಅದು ಲಾಲ್‌ಬಾಗ್‌. ನಗರದ ಹೃದಯ ಭಾಗದಲ್ಲಿರುವ ಈ ಸಸ್ಯಕಾಶಿ ಎಲ್ಲರನ್ನೂ ಕೈ ಬೀಸಿ ಕರೆಯುವಂತೆ ಸ್ಥಳವಾಗಿದೆ. ಸುಮಾರು 240 ಎಕರೆ ಪ್ರದೇಶಕ್ಕೆ ಹಬ್ಬಿಕೊಂಡಿರುವ ಲಾಲ್‌ಬಾಗ್‌ ಹಲವಾರು ಶತಮಾನಗಳಷ್ಟು ಹಳೆಯ ಮರಗಳನ್ನೂ ಹೊಂದಿದೆ. ಆ ಲಾಲ್‌ಬಾಗ್‌ ಬಗ್ಗೆ ಸಂಪೂರ್ಣ ವಿವರ (Lalbagh Tour) ಇಲ್ಲಿದೆ.


ಲಾಲ್‌ಬಾಗ್‌ನಲ್ಲಿ ಉಷ್ಣವಲಯದ ಸಸ್ಯಗಳು ಇವೆ. ಹಾಗೆಯೇ ಉಪ ಉಷ್ಣವಲಯದ ಸಸ್ಯಗಳ ಭಾರತದ ಅತಿ ದೊಡ್ಡ ಸಂಗ್ರಹ ಇದೇ ಲಾಲ್‌ಬಾಗ್‌ ಆಗಿದೆ. ವಿಸ್ತಾರವಾದ ಸರೋವರ, ಲಂಡನ್‌ ಕ್ರಿಸ್ಟಲ್‌ ಪ್ಯಾಲೇಸ್‌ ರೀತಿಯ ಗಾಜಿನ ಮನೆ ಹೀಗೆ ಅನೇಕ ಆಕರ್ಷಣೆ ಲಾಲ್‌ಬಾಗ್‌ನೊಳಗಿದೆ.

ಇತಿಹಾಸ:

ಟಿಪ್ಪು ಸುಲ್ತಾನನ ತಂದೆ ಹೈದರ್‌ ಅಲಿ ಅವರು 1760ರಲ್ಲಿ ಈ ಉದ್ಯಾನ ನಿರ್ಮಿಸುವುದಕ್ಕೆ ಯೋಜನೆ ಹಾಕಿಕೊಂಡರು. ಆದರೆ ಅದನ್ನು ಟಿಪ್ಪು ಆಳ್ವಿಕೆ ಸಮಯದಲ್ಲಿ ಪೂರ್ಣಗೊಳಿಸಲಾಯಿತು. ಅವರೇ ಈ ಉದ್ಯಾನಕ್ಕೆ ಹಲವಾರು ದೇಶಗಳಿಂದ ಮರಗಳನ್ನು ಮತ್ತು ಸಸ್ಯಗಳನ್ನು ಆಮದು ಮಾಡಿಕೊಂಡು ನೆಡಿಸಿದರು. 1799ರಲ್ಲಿ ಬ್ರಿಟಿಷರು ಮೈಸೂರು ಸಾಮ್ರಾಜ್ಯವನ್ನು ವಶಪಡಿಸಿಕೊಂಡ ನಂತರ, ಉದ್ಯಾನವು ಮೇಜರ್ ಗಿಲ್ಬರ್ಟ್ ವಾ ಅವರ ಉಸ್ತುವಾರಿಯಲ್ಲಿತ್ತು. 1874ರಲ್ಲಿ ಲಾಲ್‌ಬಾಗ್‌ ಕೇವಲ 45 ಎಕರೆ ವಿಸ್ತೀರ್ಣಕ್ಕೆ ಹಬ್ಬಿತ್ತು. 1889ರಲ್ಲಿ ಪೂರ್ವ ಭಾಗಕ್ಕೆ 30 ಎಕರೆಗಳನ್ನು ಸೇರಿಸಿಕೊಳ್ಳಲಾಯಿತು. 1891ರಲ್ಲಿ 13 ಎಕರೆ ಮತ್ತು 1984ರಲ್ಲಿ 94 ಎಕರೆಗಳನ್ನು ಸೇರಿಸಲಾಯಿತು.

ಲಂಡನ್‌ನ ಕ್ರಿಸ್ಟಲ್ ಪ್ಯಾಲೇಸ್‌ನ ಮಾದರಿಯಲ್ಲಿ ಗ್ಲಾಸ್‌ಹೌಸ್‌ ರಚಿಸಲು 1889ರ ನವೆಂಬರ್‌ 30ರಂದು ಪ್ರಿನ್ಸ್‌ ಆಲ್ಬರ್ಟ್‌ ವಿಕ್ಟರ್‌ ಅವರು ಅಡಿಪಾಯ ಹಾಕಿದರು. ಈ ಕಾಮಗಾರಿಯನ್ನು ಜಾನ್‌ ಕ್ಯಾಮರೂನ್‌ ಕಾಲದಲ್ಲಿ ಸಂಪೂರ್ಣಗೊಳಿಸಲಾಯಿತು.

ಭೇಟಿ ನೀಡುವುದಕ್ಕೆ ಕಾರಣವೇನು?

ಬೆಂಗಳೂರಿಗರಿಗೆ ಹಾಗೂ ಬೆಂಗಳೂರಿಗೆ ಪ್ರವಾಸ ಹೋಗುವವರಿಗೆ ಲಾಲ್‌ಬಾಗ್‌ಗೆ ತೆರಳುವುದಕ್ಕೆ ಹಲವು ಕಾರಣಗಳಿವೆ. ಇಲ್ಲಿನ ಗ್ಲಾಸ್‌ ಹೌಸ್‌ ಒಂದು ರೀತಿಯಲ್ಲಿ ಅರಮನೆ ರೀತಿಯಲ್ಲಿ ಕಾಣುತ್ತದೆ. ಈ ಅರಮನೆ ಕಾಮಗಾರಿಯನ್ನು 1989ರಲ್ಲಿ ಪೂರ್ಣಗೊಳಿಸಲಾಯಿತಾದರೂ 2004ರಲ್ಲಿ ಆಧುನಿಕತೆಗೆ ತಕ್ಕಂತೆ ಮತ್ತೆ ನವೀಕರಣ ಮಾಡಲಾಯಿತು. ಹಾಗೆಯೇ ಲಾಲ್‌ಬಾಗ್‌ನ ದಕ್ಷಿಣ ಭಾಗದಲ್ಲಿ ದೊಡ್ಡದೊಂದು ಸರೋವರವಿದೆ. ಸ್ವಚ್ಛ ಹಸಿರಿನ ನಡುವೆ ವಾಕಿಂಗ್‌ ಮಾಡುವವರಿಗೆ ಹಾಗೆಯೇ ಸಣ್ಣದೊಂದು ಜಲಪಾತವನ್ನು ಕಣ್ತುಂಬಿಕೊಳ್ಳಬೇಕು ಎಂದುಕೊಳ್ಳುವವರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ.


ಇಲ್ಲಿರುವ ಬೋನ್ಸಾಯ್‌ ಗಾರ್ಡನ್‌, ದೊಡ್ಡ ದೊಡ್ಡ ಬಂಡೆಗಳು, ಕೆಂಪೇಗೌಡ ಕಾವಲು ಗೋಪರ, ದೊಡ್ಡ ಗಡಿಯಾರ, ಗುಲಾಬಿ ಉದ್ಯಾನ ಸೇರಿ ಎಲ್ಲವೂ ನೋಡುಗರ ಮನಸ್ಸಿಗೆ ಮುದ ನೀಡುತ್ತವೆ.


ಇದಷ್ಟೇ ಅಲ್ಲದೆ ಲಾಲ್‌ಬಾಗ್‌ನಲ್ಲಿ ಆಗಾಗ ವಿಶೇಷ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತದೆ. ಪ್ರತಿ ವರ್ಷ ಗಣರಾಜ್ಯೋತ್ಸವ (ಜನವರಿ 26) ಸಮಯದಲ್ಲಿ ಮತ್ತು ಸ್ವಾತಂತ್ರ್ಯ ದಿನಾಚರಣೆ (15 ಆಗಸ್ಟ್) ಸಮಯದಲ್ಲಿ ಲಾಲ್‌ಬಾಗ್‌ ಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತದೆ. ಪ್ರತಿ ಬಾರಿ ವಿಶೇಷ ಥೀಮ್‌ಗಳನ್ನು ಇಟ್ಟುಕೊಂಡು ಪುಷ್ಪ ಪ್ರದರ್ಶನ ನಡೆಸಲಾಗುತ್ತದೆ. ಅದಲ್ಲದೆ ಬೇಸಿಗೆಯಲ್ಲಿ ಮಾವು/ಹಲಸು ಮೇಳಗಳನ್ನೂ ಸಹ ಇಲ್ಲಿ ನಡೆಸಲಾಗುತ್ತದೆ.

ಸಮಯದ ಗಡುವೇನು?

ಲಾಲ್‌ಬಾಗ್‌ ನೋಡಬೇಕೆಂದು ಹೊತ್ತಲ್ಲದ ಹೊತ್ತಿನಲ್ಲಿ ಇಲ್ಲಿಗೆ ಹೋಗುವಂತಿಲ್ಲ. ಪ್ರತಿದಿನ ಲಾಲ್‌ಬಾಗ್‌ ಬೆಳಗ್ಗೆ 6ರಿಂದ ಸಂಜೆ 7 ಗಂಟೆಯವರೆಗೆ ತೆಗೆದಿರುತ್ತದೆ. ಬೆಳಗ್ಗೆ 6ರಿಂದ 9 ಮತ್ತು ಸಂಜೆ 6ರಿಂದ 7 ಗಂಟೆಯವರೆಗೆ ವಾಕಿಂಗ್‌ ಮಾಡುವವರಿಗಾಗಿ ಪ್ರವೇಶವನ್ನು ಉಚಿತವಾಗಿಸಲಾಗಿದೆ. ಅದರ ಹೊರೆತು ಬೇರೆ ಸಮಯದಲ್ಲಿ ಲಾಲ್‌ಬಾಗ್‌ ಪ್ರವೇಶಕ್ಕೆ ಶುಲ್ಕವಿರುತ್ತದೆ.

ಪ್ರವೇಶ ದರ: 20 ರೂ. (12 ವರ್ಷದೊಳಗಿನವರಿಗೆ ಉಚಿತ). ಕ್ಯಾಮೆರಾ ಬಳಕೆಗೆ ಶುಲ್ಕ: 50 ರೂಪಾಯಿ. ಫಲ ಪುಷ್ಪ ಪ್ರದರ್ಶನ ಸಂದರ್ಭದ ಶುಲ್ಕ ಬೇರೆ ಇರುತ್ತದೆ.

ಸೌಲಭ್ಯಗಳೂ ಇವೆ:

ಲಾಲ್‌ಬಾಗ್‌ ಬೆಂಗಳೂರಿಗೆ ಬರುವವರಿಗೆ ಅತಿ ಇಷ್ಟದ ಸ್ಥಳವಾಗಿರುವುದರಿಂದ ಇಲ್ಲಿ ಯಾವಾಗಲೂ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಅದಕ್ಕಾಗಿಯೇ ಇಲ್ಲಿ ಸರ್ಕಾರ ಹಲವಾರು ರೀತಿಯ ಸೌಲಭ್ಯಗಳನ್ನೂ ಕಲ್ಪಿಸಿಕೊಟ್ಟಿದೆ. ಇಲ್ಲಿ ತೋಟಗಾರಿಕೆ ಇಲಾಖೆ ಮತ್ತು ಕೆಲವು ಖಾಸಗಿ ಮಾರಾಟಗಾರರಿಂದ ನಡೆಸಲ್ಪಡುವ ಹಲವಾರು ಅಂಗಡಿಗಳಿವೆ. ಹಣ್ಣು, ತರಕಾರಿ, ಜ್ಯೂಸ್‌, ಐಸ್‌ಕ್ರೀಮ್‌ ಹಾಗೂ ವಿವಿಧ ರೀತಿಯ ಖಾದ್ಯಗಳನ್ನು ಮಾರಾಟ ಮಾಡುವ ಅಂಗಡಿಗಳು ಲಾಲ್‌ಬಾಗ್‌ನೊಳಗಿವೆ.


ಹಾಗೆಯೇ ಗ್ಲಾಸ್‌ ಹೌಸ್‌ನ ಬಳಿಯೇ ಸಾರ್ವಜನಿಕ ಶೌಚಾಲಯ ಸೌಲಭ್ಯವನ್ನೂ ನೀಡಲಾಗಿದೆ. ಈ ಲಾಲ್‌ಬಾಗ್‌ ದಿಕ್ಕಿಗೆ ಒಂದರಂತೆ ಒಟ್ಟು ನಾಲ್ಕು ದಿಕ್ಕುಗಳಿಂದ ನಾಲ್ಕು ಪ್ರವೇಶ ದ್ವಾರಗಳನ್ನು ಹೊಂದಿದೆ. ಇದರಿಂದಾಗಿ ನೀವು ಒಂದು ದ್ವಾರದಿಂದ ಪ್ರವೇಶ ಮಾಡಿ ಇನ್ನೊಂದು ದ್ವಾರದಿಂದ ಹೊರಗೆ ಬರುವುದಕ್ಕೂ ಸಾಧ್ಯವಾಗುತ್ತದೆ.

ಹೋಗುವುದು ಹೇಗೆ?


ಲಾಲ್‌ಬಾಗ್‌ ನಗರದ ಮುಖ್ಯ ಬಸ್‌ ನಿಲ್ದಾಣವಾದ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಿಂದ 7ಕಿ.ಮೀ. ದೂರದಲ್ಲಿದೆ. ಹಾಗೆಯೇ ಬೆಂಗಳೂರು ವಿಮಾನ ನಿಲ್ದಾಣದಿಂದ 38ಕಿ.ಮೀ. ದೂರದಲ್ಲಿದೆ. ಲಾಲ್‌ಬಾಗ್‌ ಪಶ್ಚಿಮ ಗೇಟ್‌ ಬಳಿಯೇ ಮೆಟ್ರೋ ನಿಲ್ದಾಣವಿದ್ದು, ಅದಕ್ಕೆ ಲಾಲ್‌ಬಾಗ್‌ ಮೆಟ್ರೋ ನಿಲ್ದಾಣ ಎಂದೇ ಹೆಸರಿಡಲಾಗಿದೆ. ನಗರದ ಯಾವುದೇ ಮೂಲೆಯಿಂದ ಇಲ್ಲಿಗೆ ನೀವು ಮೆಟ್ರೋ, ಬಸ್ಸು ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು. ಲಾಲ್‌ಬಾಗ್‌ ಸಮೀಪದಲ್ಲಿಯೇ ಜಯನಗರ, ಬಸವನಗುಡಿ ಇರುವುದರಿಂದ ಇಲ್ಲಿ ಹಲವಾರು ಹೋಟೆಲ್‌ಗಳು, ಲಾಡ್ಜ್‌ಗಳೂ ಇವೆ. ಅಲ್ಲಿಯೇ ನೀವು ವಾಸ ಹೂಡಬಹುದು.

Exit mobile version