ವಿಧಾನಸಭೆ: ರಾಜ್ಯ ಭೂರಹಿತ ಮಹಿಳಾ ಕಾರ್ಮಿಕರಿಗೆ ಬಜೆಟ್‌ನಲ್ಲಿ ಘೋಷಣೆಯಾಗಿದ್ದ 500 ರೂ. ಮಾಸಿಕ ಸಹಾಯಧನವನ್ನು 1000 ರೂ.ಗಳಿಗೆ ಏರಿಸಲಾಗಿದೆ (Assembly session) ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಇದೇ ವೇಳೆ ಗ್ರಾಮೀಣ ಭಾಗದಲ್ಲಿ ಮಕ್ಕಳು ಶಾಲೆಗೆ ಹೋಗಲು ಅನುಕೂಲವಾಗುವಂತೆ 1000 ಬಸ್ ಆರಂಭಿಸಲು ಮಾಡಿದ್ದ ಪ್ಲ್ಯಾನ್‌ನ್ನು 2000 ಬಸ್‌ಗಳಿಗೆ ವಿಸ್ತರಿಸಲಾಗಿದೆ.
ಫೆಬ್ರವರಿ 17ರಂದು ತಾನೇ ಮಂಡಿಸಿದ ಬಜೆಟ್ ಮೇಲಿನ ಚರ್ಚೆಗೆ ಗುರುವಾರ ಉತ್ತರ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ವಿಚಾರಗಳನ್ನು ಪ್ರಕಟಿಸಿದರು.
ʻʻವಿದ್ಯಾವಾಹಿನಿ ಹೆಸರಿನಲ್ಲಿ ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡುತ್ತಿದ್ದೇವೆ. ಇದುವರೆಗೆ ಎಸ್‌ಎಸ್‌ಎಲ್‌ಸಿವರೆಗೆ ಇದ್ದ ಉಚಿತ ಶಿಕ್ಷಣವನ್ನು ಪದವಿವರೆಗೆ ವಿಸ್ತರಿಸುವ ಮೂಲಕ ಶಿಕ್ಷಣಕ್ಕೆ ಸರ್ಕಾರದ ಬದ್ಧತೆಯನ್ನು ಸ್ಪಷ್ಟಪಡಿಸಿದ್ದೇನೆ. ಇದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಹೇಳಿದ ಸಿಎಂ ಬೊಮ್ಮಾಯಿ ಅವರು, ಮಕ್ಕಳಿಗೆ ಶಾಲೆಗೆ ಹೋಗುವ ಸಮಸ್ಯೆ ನೀಗಿಸಲು ಈಗಾಗಲೇ ಘೋಷಿಸಿರುವ ಸಾವಿರ ಬಸ್‌ಗಳ ಆರಂಭವನ್ನು 2000ಕ್ಕೇರಿಸಲಾಗುವುದು ಎಂದು ಪ್ರಕಟಿಸಿದರು.
ರಾಜ್ಯದ ಆರ್ಥಿಕ ಸ್ಥಿತಿ ಚೇತರಿಕೆ
2022-23ರಲ್ಲಿ ಖೋತಾ ಬಜೆಟ್ ಮಂಡಿಸಿದ್ದೆವು. ಈ ಬಾರಿ ರಾಜ್ಯದ ಆದಾಯ ಹೆಚ್ಚಾಗಿದ್ದು, ಮಿಗತೆ ಬಜೆಟ್ ಮಂಡನೆಯಾಗಿದೆ. ಮುಂದಿನ ಬಾರಿ ಹೆಚ್ಚಿನ ಆದಾಯದ ಬಜೆಟ್ ಮಂಡಿಸಲು ಸಾಧ್ಯವಾಗಲಿದೆ ಎಂದು ಸಿಎಂ ಹೇಳಿದರು.
ʻʻಕೋವಿಡ್ ಅವಧಿಯಲ್ಲಿ ಸರಕಾರದ ಆದಾಯ ಕಡಿಮೆ ಆಗಿತ್ತು. ಲಾಕ್‌ಡೌನ್ ಮತ್ತಿತರ ಕಾರಣಗಳಿಂದ ವ್ಯವಹಾರಕ್ಕೇ ಹೊಡೆತವಾಯಿತು. ನಾನು ಎರಡು ವರ್ಷದ ಬಜೆಟ್ ನಿರ್ವಹಣೆ ಮಾಡಿದ್ದೇನೆ. ಈ ವರ್ಷ 67 ಸಾವಿರ ಕೋಟಿಗೆ ಸಾಲ ಮಾಡಿದ್ದೇನೆ. ನಮಗೆ 71 ಸಾವಿರ ಕೋಟಿ ಸಾಲ ಮಾಡುವ ಅವಕಾಶವಿದ್ದರೂ ಮಾಡಿಲ್ಲʼʼ ಎಂದು ಹೇಳಿದರು.
ಇದೇ ವೇಳೆ, ಸ್ವಾತಂತ್ರ್ಯಾನಂತರ ಒಟ್ಟಾಗಿ ಮಾಡಿರುವ ಸಾಲ 1,30,000 ಕೋಟಿ ಇರಬಹುದು. ಸಿದ್ದರಾಮಯ್ಯ ಆಡಳಿತ ಐದು ವರ್ಷವೊಂದರಲ್ಲೇ 1,30,000 ಕೋಟಿ ರೂ. ಸಾಲ ಮಾಡಲಾಗಿದೆ ಎಂದು ಬೊಮ್ಮಾಯಿ ಅವರು ಗಂಭೀರ ಆರೋಪ ಮಾಡಿದರು. ನಾವು ಸಿಕ್ಕಾಪಟ್ಟೆ ಸಾಲ ಮಾಡಿದ್ದೇವೆ ಎಂಬ ಸಿದ್ದರಾಮಯ್ಯ ಆರೋಪ ಸುಳ್ಳು. ಸಾಲ ಮಾಡದೆ ಅಭಿವೃದ್ಧಿ ಸಾಧ್ಯವಿಲ್ಲ. ಅದೇ ಹೊತ್ತಿಗೆ ಸಾಲ ತೀರಿಸುವ ಕ್ಷಮತೆ ನಮಗಿದೆ ಎಂದು ವಿವರಿಸಿದರು.
ನಾವು ವೇತನಕ್ಕೆ ಕತ್ತರಿ ಹಾಕಿಲ್ಲ
ʻʻಕೋವಿಡ್ ಸಂದರ್ಭದಲ್ಲಿ ಕೆಲವು ರಾಜ್ಯಗಳು ಸರ್ಕಾರಿ ನೌಕರರ ವೇತನವನ್ನು ಶೇ. 30-40 ಕಟ್ ಮಾಡಿದ್ದವು. ಆದರೆ, ಕರ್ನಾಟಕದಲ್ಲಿ ಮಾತ್ರ ಸಂಪೂರ್ಣ ವೇತನ ನೀಡಿದೆವು. ಇದು ನಮ್ಮ ಆರ್ಥಿಕ ನಿರ್ವಹಣೆಯ ಫಲʼʼ ಎಂದರು ಸಿದ್ದರಾಮಯ್ಯ.
ನೀರಾವರಿ ಅಭಿವೃದ್ಧಿಗೆ ಸರ್ಕಾರ ಬದ್ಧ
ಮಹಾದಾಯಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗುವುದನ್ನು ಕಾಯುತ್ತಿದ್ದೇವೆ. ಈ ಯೋಜನೆಗಾಗಿ 1000 ಕೋಟಿ ರೂ. ಮೀಸಲಿಟ್ಟಿದ್ದೇವೆ. ಕೋರ್ಟ್ ಕ್ಲಿಯರೆನ್ಸ್ ಮಾಡಿದ ಕೂಡಲೇ ಅದರ ಕಾಮಗಾರಿ ಆರಂಭಿಸುತ್ತೇವೆ ಎಂದರು.
ಇದನ್ನೂ ಓದಿ : 7th Pay commission : ಮಾ. 1ರಿಂದ ಸರ್ಕಾರಿ ನೌಕರರ ಪ್ರತಿಭಟನೆ, ಮಾತುಕತೆ ಸಂದೇಶ ರವಾನಿಸಿದ ಸಿಎಂ ಬೊಮ್ಮಾಯಿ