Site icon Vistara News

Rain News | ಧಾರಾಕಾರ ಮಳೆಗೆ ವಿವಿಧೆಡೆ ಭೂಕುಸಿತ, ರಸ್ತೆಗಳು ಜಲಾವೃತ

ಮಳೆ

ಬೆಂಗಳೂರು: ರಾಜ್ಯಾದ್ಯಂತ ಧಾರಾಕಾರ ಮಳೆ ಮುಂದುವರಿದಿದ್ದು, ವಿವಿಧೆಡೆ ಭೂಕುಸಿತ, ರಸ್ತೆಗಳು ಜಲಾವೃತವಾದ ಹಿನ್ನೆಲೆಯಲ್ಲಿ ವಾಹನ ಸಂಚಾರ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಕೆಲವೆಡೆ ಭೀಕರ ಮಳೆಗೆ ಮನೆಗಳಿಗೆ ಹಾನಿಯಾಗಿದ್ದು, ನದಿ ಹಾಗೂ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.

ಹೆದ್ದಾರಿ ಮೇಲೆ ಬಿದ್ದ ಮರ, ಸಂಚಾರ ಅಸ್ತವ್ಯಸ್ತ
ಹಾಸನ: ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚಲಿಸುತ್ತಿದ್ದ ಲಾರಿ ಮೇಲೆ ಭಾರಿ ಗಾತ್ರದ ಮರ ಬಿದ್ದಿದ್ದರಿಂದ ಶನಿವಾರ ಮಧ್ಯರಾತ್ರಿ ಸಂಚಾರಕ್ಕೆ ಅಡಚಣೆಯಾಯಿತು. ಭಾರಿ ಮಳೆ ಗಾಳಿಯಿಂದ ರಸ್ತೆ ಮೇಲೆ ಮರ ಬಿದ್ದಿದ್ದರಿಂದ ನಡುರಾತ್ರಿ ಸುಮಾರು 3 ಗಂಟೆಗೂ ಅಧಿಕ ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯವಾಯಿತು. ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೋಣಿಗಲ್ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತವಾಗಿದೆ.

ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ರದ್ದು
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೆ.ಆರ್‌.ಎಸ್ ಡ್ಯಾಂಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಡ್ಯಾಂನಿಂದ ನದಿಗೆ 11,633 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ನೀರಿನ ಪ್ರಮಾಣ ಹೆಚ್ಚಾಗಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಮುಳುಗಡೆಯ ಅಂಚಿಗೆ ಬಂದಿದ್ದು, ರಂಗನತಿಟ್ಟು ಪಕ್ಷಿಧಾಮದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೋಟಿಂಗ್‌ ರದ್ದು ಮಾಡಲಾಗಿದೆ. 20 ಸಾವಿರ ಕ್ಯೂಸೆಕ್ ನೀರು ಡ್ಯಾಂ‌ನಿಂದ ಬಿಡುಗಡೆಯಾದರೆ ನಡುಗಡ್ಡೆಗಳು ಸಂಪೂರ್ಣ ಮುಳುಗುವ ಸಾಧ್ಯತೆ ಇದೆ.

ಮೈದುಂಬಿ ಹರಿಯುತ್ತಿರುವ ತುಂಗಾ ನದಿ

ಶಿವಮೊಗ್ಗ: ಜಿಲ್ಲೆಯಲ್ಲಿ ಪುನರ್ವಸು ಮಳೆ ಅಬ್ಬರ ಮುಂದುವರಿದಿದ್ದು, ತೀರ್ಥಹಳ್ಳಿ ಪಟ್ಟಣದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ತುಂಗಾನದಿ ಮೈದುಂಬಿ ಹರಿಯುತ್ತಿದ್ದು, ಇನ್ನೊಂದು ಅಡಿ ನೀರಿನ ಮಟ್ಟ ಏರಿದರೆ ಇತಿಹಾಸ ಪ್ರಸಿದ್ಧ ರಾಮಮಂಟಪ ಮುಳುಗಡೆಯಾಗಲಿದೆ.

ಶಿವಮೊಗ್ಗದಿಂದ ಕರಾವಳಿ ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ವ್ಯಾಪಕ ಮಳೆಯಿಂದ ಗುಡ್ಡ ಕುಸಿತವಾಗಿ ಘಾಟಿ ರಸ್ತೆ ಸಂಚಾರ ಬಂದ್​ ಆಗಿತ್ತು. ಶಿವಮೊಗ್ಗದ ಗಡಿಗೆ ಹೊಂದಿಕೊಂಡಿರುವ ತಿರುವಿನಲ್ಲಿ ಮಣ್ಣುಕುಸಿತವಾಗಿದ್ದು, ರಸ್ತೆಗೆ ಅಡ್ಡಲಾಗಿ ಭಾರಿ ಗಾತ್ರದ ಮರ ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಈಗಾಗಲೇ ತಿರುವಿನಲ್ಲಿ ಹೋದವರು ವಾಪಸ್​ ಆಗುತ್ತಿದ್ದಾರೆ. ಘಾಟಿ ಕೆಳಗೆ ಸೋಮೇಶ್ವರ ಚೆಕ್​​ಪೋಸ್ಟ್​ ಬಳಿ ವಾಹನಗಳನ್ನು ತಡೆಯಲಾಗಿತ್ತು. ಆಗುಂಬೆ ಘಾಟಿ ಚೆಕ್​ಪೋಸ್ಟ್​ ಬಳಿಯಿಂದ ವಾಹನಗಳು ವಾಪಸ್‌ ತೆರಳುತ್ತಿದ್ದವು.

ಬಳಿಕ ವಿಷಯ ತಿಳಿದ ಅಧಿಕಾರಿಗಳು ದೌಡಾಯಿಸಿದ್ದು, ರಸ್ತೆ ತೆರವಿಗೆ ಕ್ರಮ ಕೈಗೊಂಡರು. ಬೆಳಗೆ 6 ಗಂಟೆಯಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸತತ ಪ್ರಯತ್ನದ ಬಳಿಕ ಮೂರು ಗಂಟೆಗಳ ಬಳಿಕ ರಸ್ತೆಯನ್ನು ಭಾಗಶಃ ತೆರವು ಮಾಡಲಾಯಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೃಂಗೇರಿ ಉಪವಿಭಾಗದ ತಾಂತ್ರಿಕ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಕುಸಿದ ಮಣ್ಣು ತೆರವು ಕಾರ್ಯವನ್ನು ಪ್ರಾರಂಭಿಸಿ, ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಚುರುಕಾಗಿ ಕೆಲಸವನ್ನು ಪ್ರಾರಂಭಿಸಿದ್ದರು.

ಉಡುಪಿಯ ಹಲವೆಡೆ ಮನೆಗಳು ಜಲಾವೃತ

ಉಡುಪಿ: ಉಡುಪಿಯಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಭಾನುವಾರವೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕಾಪು ತಾಲೂಕಿನ ಪಡುಬಿದ್ರೆ ಗ್ರಾಮದ ಹೊಯ್ಗೆ ತೋಟದ ಕೆಲವು ಮನೆಗಳು ಜಲಾವೃತವಾಗಿದ್ದು,
ಐದಾರು ಮನೆಗಳಿಗೆ ನೀರು ನುಗ್ಗಿದೆ. ಈ ಭಾಗದಲ್ಲಿ ಪ್ರತಿವರ್ಷ ನೆರೆಯ ಸಮಸ್ಯೆಯಾಗುತ್ತಿದ್ದು, ಉಡುಪಿ ನಗರದಲ್ಲೂ ಕೃಷಿಗದ್ದೆಗಳು ಜಲಾವೃತವಾಗಿವೆ. ಮಠದಬಿಟ್ಟು ಶಿರಿಬೀಡು ಭಾಗದಲ್ಲಿ ಗದ್ದೆಗಳಿಗೆ ನೀರು ನುಗ್ಗಿದೆ.

ಹಾಸನದ ವಿವಿಧೆಡೆ ಮನೆಗಳಿಗೆ ಹಾನಿ

ಹಾಸನ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ‌ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಗೆ ಹಲವು ಮನೆಗಳ ಗೋಡೆಗಳು ಕುಸಿದಿದ್ದು, ಕೆಲವು ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಜಿಲ್ಲೆ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿಯಲ್ಲಿ ಹದಿನೈದಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮರವಳಲು, ಮಲ್ಲಿರಾಜಪಟ್ಟಣ ಗ್ರಾಮಗಳಲ್ಲಿ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು,
ಅದೃಷ್ಟವಶಾತ್ ಅಪಾಯದಿಂದ ಜನರು ಪಾರಾಗಿದ್ದಾರೆ. ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ಥರು ಒತ್ತಾಯ ಮಾಡುತ್ತಿದ್ದಾರೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಸಿ.ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮನೆ ನೆಲಸಮ

ಚಿಕ್ಕಮಗಳೂರು: ವರುಣನ ಆರ್ಭಟಕ್ಕೆ ನಗರದ ನಗರದ ಕ್ರಿಶ್ಚಿಯನ್ ಕಾಲನಿಯಲ್ಲಿ ಶ್ರೀನಿವಾಸ್ ಎಂಬುವವರ ಮನೆ ಸಂಪೂರ್ಣ ನೆಲಸಮವಾಗಿದೆ. ಮತ್ತೆರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಮಂದು ಪರಿಹಾರ ನೀರುವಂತೆ ಸಂತ್ರಸ್ತರು ಆಗ್ರಹಿಸಿದ್ದಾರೆ. ಮಳೆಯಿಂದ ಮತ್ತಷ್ಟು ಮನೆಗಳಿಗೆ ಹಾನಿಯಾಗುವ ಆತಂಕ ಮೂಡಿದೆ. ಜಿಲ್ಲೆಯ ಕಳಸ ತಾಲೂಕಿನ ಗುಳ್ಯ ಗ್ರಾಮದಲ್ಲಿ ಭಾರಿ ಮಳೆಯಿಂದ ಕಾಲುಸಂಕ ಕೊಚ್ಚಿ ಹೋಗುವ ಸ್ಥಿತಿಯಲ್ಲಿದೆ. ಪ್ರಾಣವನ್ನ ಪಣಕ್ಕಿಟ್ಟು ವಿದ್ಯಾರ್ಥಿಗಳು, ಗ್ರಾಮಸ್ಥರು ಸೇತುವೆ ದಾಟುತ್ತಿದ್ದಾರೆ. ಮಳೆ ಹೆಚ್ಚಾದರೆ ಕಾಲು ಸಂಕವೂ ಕೊಚ್ಚಿ ಹೋಗುವ ಆತಂಕ ಎದುರಾಗಿದ್ದು, ಶಾಶ್ವತ ಸೇತುವೆ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು ನಗರದ ಹೊರವಲಯದ ಉಪ್ಪಳ್ಳಿ ಬಡಾವಣೆ ಬಳಿ ಕೆರೆಯ ಕಟ್ಟೆ ಒಡೆದಿದ್ದರಿಂದ ಅಪಾರ ಪ್ರಮಾಣದ ನೀರು ನುಗ್ಗಿ ಬಡಾವಣೆ ದ್ವೀಪದಂತಾಗಿದೆ. ನಿರಂತರ ಮಳೆಗೆ ಕೆರೆಯ ಏರಿ ಬಿರುಕು ಬಿಟ್ಟು ರಭಸವಾಗಿ ನೀರು ನುಗ್ಗಿದ್ದರಿಂದ ಮನೆಗಳು ಜಲಾವೃತವಾಗಿವೆ. ರಸ್ತೆಗೂ ನೀರು ನುಗ್ಗಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ನಗರಸಭೆ ಹಾಗೂ ಸಣ್ಣ ನೀರಾವರಿ ಇಲಾಖೆ ವಿರುದ್ಧ ಸ್ಥಳೀಯತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಾನುವಾರುಗಳ ಸ್ಥಳಾಂತರ

ಉಡುಪಿ: ಕಳೆದ ಒಂದು ವಾರದಿಂದ ಉಡುಪಿಯಲ್ಲಿ ಸುರಿಯುತ್ತಿರುವ ಭಾರಿಯಿಂದ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಸದ್ಯ ಮನೆಯ ಆವರಣವನ್ನೂ ಮಳೆ ನೀರು ತಲುಪಿದ್ದು, ಮಳೆ ಮುಂದುವರಿದರೆ ಮನೆಯೊಳಗೆ ನೀರು ನುಗ್ಗುವ ಸಾಧ್ಯತೆ ಇದೆ. ಕುಂದಾಪುರ ತಾಲೂಕು ತೆಕ್ಕಟೆಯ ಕುದ್ರುಬೈಲು ನಿವಾಸಿಗಳು ಸುರಕ್ಷತಾ ದೃಷ್ಟಿಯಿಂದ ಜಾನುವಾರುಗಳನ್ನು ಬೇರೆಡೆ ಸ್ಥಳಾಂತರ ಮಾಡಿದ್ದಾರೆ.

ದಶಕದಲ್ಲೇ ಮೊದಲ ಬಾರಿ ಜುಲೈನಲ್ಲಿ ತುಂಬಿದ ತುಂಗಭದ್ರಾ ಜಲಾಶಯ

ಕೊಪ್ಪಳ ಜಿಲ್ಲೆ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯ.

ಕೊಪ್ಪಳ: ದಶಕದಲ್ಲಿಯೇ ಇದೇ ಮೊದಲ ಬಾರಿ ಜುಲೈ ತಿಂಗಳಲ್ಲಿ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಜುಲೈ ಎರಡನೆಯ ವಾರದಲ್ಲಿ ಜಲಾಶಯ ಭರ್ತಿಯಾಗಿದ್ದು, ಕಳೆದ ಹತ್ತು ವರ್ಷದಲ್ಲಿ ಜಲಾಶಯಕ್ಕೆ ಜುಲೈ 10 ದಿನದಂದು 1605 ಅಡಿ ನೀರು ನಿಲ್ಲುತ್ತಿತ್ತು. ಕಳೆದ ವರ್ಷ 1610.28 ಅಡಿ ನೀರು ನಿಂತಿತ್ತು. ಈ ವರ್ಷ 1626.22 ಅಡಿಗೆ ನೀರು ನಿಂತಿದೆ. ದಶಕದಲ್ಲಿ ಈ ದಿನಕ್ಕೆ ಸರಾಸರಿ 32.97 ಟಿಎಂಸಿ ನೀರು ಸಂಗ್ರಹವಾಗುತ್ತಿತ್ತು, ಕಳೆದ ವರ್ಷ 35.79 ಟಿಎಂಸಿ ನೀರು ಸಂಗ್ರಹವಾಗಿತ್ತು. ಸದ್ಯ 80.55 ಟಿಎಂಸಿ ನೀರು ಸಂಗ್ರಹವಾಗಿದೆ. ತುಂಗಭದ್ರಾ ನದಿಯ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯ ಬೇಗನೆ ತುಂಬಿದೆ.

ಸೇತುವೆ ಮುಳುಗಡೆ- ಗ್ರಾಮಗಳ ಸಂಪರ್ಕ‌ ಬಂದ್

ಹಾವೇರಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾದರೂ ನದಿಗಳು ಉಕ್ಕಿ ಹರಿಯುತ್ತಿವೆ. ವರದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಅಕ್ಕೂರ-ಕೋಡಬಾಳ ನಡುವಿನ ಸೇತುವೆ ಮುಳುಗಡೆಯಾಗಿದ್ದು, ಎರಡು ಗ್ರಾಮದ ನಡುವೆ ಸಂಪರ್ಕ ಕಡಿತವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮ ಜಲಾವೃತವಾಗಿದೆ.

ತುಂಬಿ ಹರಿಯುತ್ತಿದೆ ಕುಮಾರಧಾರ, ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಜಲಾವೃತ

ದಕ್ಷಿಣ ಕನ್ನಡ (ಸುಳ್ಯ): ಭಾರೀ ಮಳೆಗೆ ಕುಮಾರಧಾರಾ ನದಿ ತುಂಬಿ ಹರಿಯುತ್ತಿರುವುದರಿಂದ ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಜಲಾವೃತವಾಗಿದೆ. ಶನಿವಾರ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಕುಮಾರಧಾರಾ ನದಿಯ ನೀರು ಸುಬ್ರಹ್ಮಣ್ಯ ಸುತ್ತಮುತ್ತಲ ಪ್ರದೇಶಕ್ಕೆ ನುಗ್ಗಿದ್ದು ಹಲವು ಪ್ರದೇಶಗಳು ಜಲಾವೃತವಾಗಿದೆ.

ಕುಮಾರಧಾರ ನದಿಯ ಉಪನದಿ ದರ್ಪಣತೀರ್ಥ ತುಂಬಿ ಹರಿಯುತ್ತಿದ್ದು, ರಾಜ್ಯ ಹೆದ್ದಾರಿಯಲ್ಲಿರುವ ಸೇತುವೆ ಜಲಾವೃತವಾಗಿದೆ. ದರ್ಪಣ ತೀರ್ಥ ಸೇತುವೆಯಿಂದ ಸುಮಾರು ಇನ್ನೂರು ಮೀಟರ್ ದೂರದವರೆಗೆ ಹೆದ್ದಾರಿ ಮುಳುಗಿದೆ. ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯಲ್ಲಿ ಪಂಜ ಸೇತುವೆ ಮೇಲೆ ನೀರು ಹರಿದಿದೆ. ಬೆಳ್ಳಾರೆ-ಪೆರುವಾಜೆ ಭಾಗದ ಗೌರಿ ಹೊಳೆಯಲ್ಲಿ ಪ್ರವಾಹದಂತೆ ನೀರು ಹರಿದಿದ್ದು ಸಮೀಪ ಪ್ರದೇಶಗಳಿಗೆ, ಕೃಷಿ ಭೂಮಿಗೆ ನುಗ್ಗಿದೆ. ಸುಳ್ಯ ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ.

ಇನ್ನು ಭಾರಿ ಮಳೆಗೆ ಪಯಸ್ವಿನಿ ನದಿ ಉಕ್ಕಿ ಹರಿದ ಪರಿಣಾಮ ಸಂಪಾಜೆ ಗ್ರಾಮದ ಪೇರಡ್ಕ ಭಾಗದ ಸಂಪರ್ಕ ಕಡಿತಗೊಂಡು ದ್ವೀಪದಂತಾಗಿದೆ. ಎಲ್ಲ ರಸ್ತೆಗಳು, ತೋಟಗಳು ಜಲಾವೃತವಾಗಿತ್ತು. ಎಲ್ಲ ರಸ್ತೆಗಳ ಮೇಲೆ ನೀರು ತುಂಬಿದ ಕಾರಣ ರಸ್ತೆಗಳಲ್ಲಿ ವಾಹನ ಸಂಚಾರ ಅಸಾಧ್ಯವಾಗಿದೆ. ಇದರಿಂದ ಬಕ್ರೀದ್‌ ಹಿನ್ನೆಲೆಯಲ್ಲಿ ಪೇರಡ್ಕ ಮಸೀದಿಗೆ ಪ್ರಾರ್ಥನೆಗೆ ಬಂದವರು ಪ್ರವಾಹ ನೀರಿನಲ್ಲಿ ನಡೆದುಹೋಗಬೇಕಾಯಿತು. ಹಲವು ಮನೆಗಳಿಗೆ, ಕೃಷಿ ಭೂಮಿಗೆ ನೀರು ನುಗ್ಗಿ ಹಾನಿಯಾಗಿದೆ.

ಇದನ್ನೂ ಓದಿ | ಮಳೆ ಅವಾಂತರ | ಮಂಗಳೂರಿನ ಪಿಲಿಕುಳ ಮೃಗಾಲಯದಲ್ಲಿ ನೆರೆ

Exit mobile version