Site icon Vistara News

Rain News : ಮಳೆಯಬ್ಬರಕ್ಕೆ ಹಲವೆಡೆ ಗುಡ್ಡ, ಮನೆ ಕುಸಿತ; ಅವಘಡಕ್ಕೆ ಮೂವರ ಸಾವು

Ullala beach rain effect

ಬೆಂಗಳೂರು: ರಾಜ್ಯದಲ್ಲಿ ಜೂನ್‌ ತಿಂಗಳು ಮಳೆಯಿಲ್ಲದೆ ಆತಂಕಕ್ಕೊಳಗಾಗಿದ್ದ ಕರ್ನಾಟಕದಲ್ಲಿ ಈಗ ವರುಣ ವಿಜೃಂಭಿಸುತ್ತಿದ್ದಾನೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಜತೆ ಬಿರುಗಾಳಿಯೂ ಬೀಸತೊಡಗಿದೆ. ಈ ಮಧ್ಯೆ ಮಳೆಗೆ (Rain News) ಅಲ್ಲಲ್ಲಿ ಗುಡ್ಡ ಕುಸಿತ, ಮನೆ ಕುಸಿತದಂತಹ ಪ್ರಕರಣಗಳು ಕೇಳಿಬಂದಿವೆ. ಇನ್ನು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗುವುದು, ಮಳೆ ಅವಘಡಗಳಿಂದ ಮೃತಪಡುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ಇರಲಿ ಎಂದು ಹವಾಮಾನ ಇಲಾಖೆ ಹೇಳಿದೆ. ಈಗ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪೋಸ್ಟ್ ಚೆಂಡಿಯಾದಲ್ಲಿ ಗುಡ್ಡ ಕುಸಿತವಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಉಳ್ಳಾಲದ ಕೋಟೆಪುರ ಬಳಿಯ ಮನೆಯೊಂದರ ಗೋಡೆ ಕುಸಿದಿದೆ. ಉಡುಪಿ ಜಿಲ್ಲೆಯಲ್ಲಿ ಪ್ರತ್ಯೇಕ ಕಡೆ ನೀರಿಗೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ತುಂಗಾ ಜಲಾಶಯ ಸಹ ತುಂಬುವ ಮಟ್ಟಕ್ಕೆ ಬಂದಿದೆ.

ಕಾರವಾರದಲ್ಲಿ ನೌಕಾನೆಲೆ ರಸ್ತೆ ಕಾಮಗಾರಿಯಿಂದ ಗುಡ್ಡ ಕುಸಿತ

ಕಾರವಾರ: ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕಾರವಾರ ತಾಲೂಕಿನ ಪೋಸ್ಟ್ ಚಂಡಿಯಾದಲ್ಲಿ ಗುಡ್ಡ ಕುಸಿತವಾಗಿದೆ. ನೌಕಾನೆಲೆ ರಸ್ತೆ ಕಾಮಗಾರಿಯಿಂದ ಗುಡ್ಡ ಕುಸಿತ ಆಗಿದೆ ಎನ್ನಲಾಗಿದೆ. ಈಗ ಮನೆಗಳ ಮೇಲೆ ಗುಡ್ಡದ ಮಣ್ಣು ಕುಸಿಯುವ ಆತಂಕದಲ್ಲಿ ಜನರಿದ್ದಾರೆ. ನೌಕಾನೆಲೆಯಿಂದ ಆಮದಳ್ಳಿ ಸಂಪರ್ಕಕ್ಕೆ ರಸ್ತೆ ನಿರ್ಮಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಎದುರಾಗಿದೆ.

ಕಾರವಾರ ತಾಲೂಕಿನ ಪೋಸ್ಟ್ ಚಂಡಿಯಾದಲ್ಲಿ ಗುಡ್ಡ ಕುಸಿತ

ಇದನ್ನೂ ಓದಿ: Hottest June: 122 ವರ್ಷಗಳಲ್ಲೇ ಈ ವರ್ಷದ ಜೂನ್‌ ಅತ್ಯಂತ ಬಿಸಿ, ಅತೀ ಕಡಿಮೆ ಮಳೆ!

ಪೋಸ್ಟ್ ಚೆಂಡಿಯಾ ಬಳಿ ಗುಡ್ಡ ಕೊರೆದು ರಸ್ತೆ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿತ್ತು. ರಸ್ತೆ ನಿರ್ಮಾಣದ ವೇಳೆ ಮೇಲ್ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ. ಗುಡ್ಡಕ್ಕೆ ಹೊಂದಿಕೊಂಡೇ ಕೆಳಭಾಗದಲ್ಲಿ ಏಳು ಮನೆಗಳು ಇದ್ದು, ಮಣ್ಣು ಕುಸಿಯುವ ಆತಂಕದಲ್ಲಿ ಜನರಿದ್ದಾರೆ.

ಸ್ಥಳಕ್ಕೆ ಚೆಂಡಿಯಾ ಪಿಡಿಒ ಹಾಗೂ ಪಂಚಾಯತ್ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರನ್ನು ಬೇರೆಡೆ ಸ್ಥಳಾಂತರ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಜನರ ವಿರೋಧದ ನಡುವೆಯೂ ರಸ್ತೆ ನಿರ್ಮಾಣಕ್ಕೆ ನೌಕಾನೆಲೆ ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈಗ ಗ್ರಾಮಸ್ಥರು ಮನೆ, ಆಸ್ತಿ-ಪಾಸ್ತಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಕೋಟೆಪುರ ಬಳಿ ಭಾರಿ ಮಳೆಗೆ ಮನೆ ಗೋಡೆ ಕುಸಿತವಾಗಿರುವುದು

ಮನೆ ಗೋಡೆ ಕುಸಿತ; ಮನೆಯವರು ಪಾರು

ಮಂಗಳೂರು: ಹೊರವಲಯದ ಉಳ್ಳಾಲದ ಕೋಟೆಪುರ ಬಳಿ ಭಾರಿ ಮಳೆಗೆ ಮನೆ ಗೋಡೆ ಕುಸಿತವಾಗಿದ್ದು, ಮನೆ ಮಂದಿ ಪಾರಾಗಿದ್ದಾರೆ. ಈ ವೇಳೆ ಎಲ್ಲರೂ ಮನೆಯೊಳಗಿದ್ದರು. ರುಕಿಯ- ಉಮರಬ್ಬ ದಂಪತಿಗೆ ಸೇರಿದ ಮನೆ ಇದಾಗಿದೆ. ಗೋಡೆ ಕುಸಿಯುತ್ತಿದ್ದಂತೆ ಮನೆಯಲ್ಲಿದ್ದವರೆಲ್ಲರೂ ಹೊರಗೆ ಓಡಿ ಬಂದಿದ್ದಾರೆ. ಘಟನಾ ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಉಡುಪಿಯಲ್ಲಿ ಇಬ್ಬರು ಬಲಿ

ಉಡುಪಿ: ಮುಂಗಾರು ಮಳೆಗೆ ಉಡುಪಿ ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಕುಂದಾಪುರ ತಾಲೂಕು ತೆಕ್ಕಟ್ಟೆಯ ಮಲ್ಯಾಡಿ ಸಮೀಪ ಮಂಗಳವಾರ ರಾತ್ರಿ ಸ್ಕೂಟರ್‌ ಚಲಾಯಿಸುವಾಗ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ದಿವಾಕರ್ ಶೆಟ್ಟಿ ಮೃತ ದುರ್ದೈವಿ. ಅವರು ರಾತ್ರಿ ಹೋಟೆಲ್‌ನಿಂದ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಶವವನ್ನು ಮೇಲಕ್ಕೆತ್ತಲಾಗಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಕಮಲಶಿಲೆ ಶೇಷಾದ್ರಿ ಐತಾಳ್. ಅವರ ಶವಕ್ಕಾಗಿ ಹುಡುಕಾಟ

ಕುಬ್ಜಾ ನದಿಗೆ ಬಿದ್ದು ಸಾವು

ಕಮಲಶಿಲೆ ದೇವಳದ ಪಕ್ಕದಲ್ಲಿ ಹರಿಯುವ ಕುಬ್ಜಾ ನದಿಗೆ ಬಿದ್ದು, ಕಮಲಶಿಲೆ ಶೇಷಾದ್ರಿ ಐತಾಳ್ ( 75) ಎಂಬುವವರು ಮೃತಪಟ್ಟಿದ್ದಾರೆ. ಕಮಲಶಿಲೆ ಸಮೀಪದ ತಪ್ಪಲು ನಿವಾಸಿಯಾಗಿರುವ ಇವರು, ಅಲ್ಲಿನ ದೇವಳಕ್ಕೆ ಪೂಜೆಗೆ ಆಗಮಿಸಿದ್ದರು. ನದಿಗೆ ಬಿದ್ದ ಜಾಗದ ಸುಮಾರು ನೂರು ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಳಾಯಿಯಲ್ಲಿ ಕಡಿದು ಬಿದ್ದ ವಿದ್ಯುತ್ ತಂತಿ ಕೆಳಗೆ ಬಿದ್ದಿರುವುದು

ವಿದ್ಯುತ್ ತಂತಿ ತುಳಿದು ಯುವಕ ಸಾವು

ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಕುಳಾಯಿಯಲ್ಲಿ ಕಡಿದು ಬಿದ್ದ ವಿದ್ಯುತ್ ತಂತಿ ತುಳಿದು ಯುವಕನೊಬ್ಬ ಮೃತಪಟ್ಟಿದ್ದಾನೆ. ಕುಷ್ಟಗಿ ಮೂಲದ ಸಂತೋಷ್ (28) ಮೃತ ಯುವಕ. ರಾತ್ರಿ ವೇಳೆ ಬಿರುಗಾಳಿಗೆ ವಿದ್ಯುತ್ ತಂತಿ ಕಡಿದು ರಸ್ತೆಗೆ ಬಿದ್ದಿತ್ತು. ಬುಧವಾರ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ವಿದ್ಯುತ್ ತಂತಿ ತುಳಿದಿದ್ದರಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಡಿಗೆ ಮನೆಯಲ್ಲಿದ್ದು ಕೈಗಾರಿಕಾ ಸಂಕೀರ್ಣಕ್ಕೆ ಸಂತೋಷ್ ಕೆಲಸಕ್ಕೆ ತೆರಳುತ್ತಿದ್ದ ಎನ್ನಲಾಗಿದೆ.

ಮನೆ ಮೇಲೆ ಉರುಳಿದ ಮರಗಳು

ಮಂಗಳೂರು: ಮಂಗಳೂರು ಹೊರವಲಯದ ಸೋಮೇಶ್ವರ ಬಳಿ ಭಾರಿ ಗಾಳಿ, ಮಳೆಗೆ ಮನೆ ಮೇಲೆ ಮರಗಳು ಉರುಳಿವೆ. ಇದರಿಂದ ನಾಲ್ಕು ಮನೆಗಳು ಹಾಗೂ ವಾಹನಗಳಿಗೆ ಹಾನಿಯಾಗಿವೆ. ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪೆರಿಬೈಲ್, ಕುಂಪಲ ಬಾರ್ದೆ, ಅಂಚಿಕಟ್ಟೆ ಪ್ರದೇಶದಲ್ಲಿ ನಾಲ್ಕು ಮನೆಗಳಿಗೆ ಮರಗಳು ಉರುಳಿ ಬಿದ್ದು ಹಾನಿಯಾಗಿದೆ. ಒಂದು ಸ್ಕೂಟರ್ ಮರದಡಿ ಸಿಲುಕಿ ನುಜ್ಜುಗುಜ್ಜಾಗಿದೆ. ಪೆರಿಬೈಲ್ ಎಂಬಲ್ಲಿನ ಅಬ್ಬಾಸ್, ಕುಂಪಲ ಬಾರ್ದೆಯ ಯಮುನಾ ಬಂಗೇರ, ಸುನಿಲ್ ಹಾಗೂ ಅಂಚಿಕಟ್ಟೆಯ ಯು.ಎ ಹಸೈನಾರ್, ಯು.ಎ.ಖಾದರ್ ಎಂಬುವವರ ಮನೆಗಳಿಗೆ ಹಾನಿಯಾಗಿದೆ. ಯು.ಎ.ಖಾದರ್ ಅವರಿಗೆ ಸೇರಿದ ಸ್ಕೂಟರ್‌ಗೂ ಹಾನಿಯಾಗಿದೆ.

ಕಡಲ್ಕೊರೆತಕ್ಕೆ ಚುರುಮುರಿ ಅಂಗಡಿ ಸಮುದ್ರಪಾಲು; 80 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿ

ಉಳ್ಳಾಲ: ಉಳ್ಳಾಲ ಹಾಗೂ ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಉಳ್ಳಾಲ ಬೀಚ್ ಬಳಿ ಹಾಕಲಾಗಿದ್ದ ಚುರುಮುರಿ ಅಂಗಡಿಗಳು ಸಮುದ್ರಪಾಲಾಗಿವೆ. ಉಚ್ಚಿಲ ಭಾಗದಲ್ಲಿ ಸಮುದ್ರತೀರದ ಮನೆಗಳಿಗೆ ಅಪ್ಪಳಿಸಿವೆ. ಅಲ್ಲದೆ, ಇಲ್ಲಿ ಹಲವು ಮರಗಳನ್ನು ಸಮುದ್ರವು ಆಪೋಶನ ತಗೆದುಕೊಂಡಿದೆ. ಸಮುದ್ರತೀರದಲ್ಲಿ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಭಾರಿ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ.

boat fall in netravati river at harekala

ಉಳ್ಳಾಲ ಬೀಚ್, ಮೊಗವೀರಪಟ್ಣ, ಸುಭಾಷನಗರ, ಕೈಕೋ, ಕಿಲೆರಿಯಾನಗರ, ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ ತೀರಗಳಲ್ಲಿ ಸಮುದ್ರ ತೀರಕ್ಕೆ ಬೃಹತ್ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಬ್ರೇಕ್ ವಾಟರ್ ಹಾಕಿದ ನಂತರ ಮೊಗವೀರಪಟ್ಣ ತೀರದಲ್ಲಿ ಕಡಲ್ಕೊರೆತ ಕಡಿಮೆಯಾಗಿತ್ತು. ಆದರೆ, ಬುಧವಾರ ಭಾರಿ ವೇಗವಾಗಿ ಗಾಳಿ ಬೀಸುತ್ತಿದ್ದು, ಮೊಗವೀರಪಟ್ಣ, ಉಳ್ಳಾಲ ಬೀಚ್ ಸಮೀಪ ಅಲೆಗಳ ಅಬ್ಬರ ಹೆಚ್ಚಾಗಿದೆ. ಈ ಕಾರಣಕ್ಕೆ ಬೀಚ್ ಬದಿಯಲ್ಲಿದ್ದ ಚುರುಮುರಿ ಅಂಗಡಿಗಳು ಸಮುದ್ರಪಾಲಾಗಿವೆ. ಉಚ್ಚಿಲ , ಬಟ್ಟಂಪಾಡಿ ಸಮುದ್ರ ತೀರದಲ್ಲಿ 80 ಕಿ.ಮೀ ವೇಗದಲ್ಲಿ ಗಾಳಿ ಬೀಸಲಾರಂಭಿಸಿದ್ದು, ಸಮುದ್ರ ತೀರದಲ್ಲಿ ನಿಲ್ಲಲೂ ಕಷ್ಟಪಡಬೇಕಿದೆ.

ಇದನ್ನೂ ಓದಿ: Weather Report : ನಾಳೆ ಬೆಂಗಳೂರಲ್ಲಿ ವರುಣಾರ್ಭಟ; ದಕ್ಷಿಣ-ಉತ್ತರ ಒಳನಾಡು, ಕರಾವಳಿಯಲ್ಲಿ ಮಳೆ ಹಾವಳಿ

boat fall in netravati river at harekala

ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಕುಮಟಾ ರಾಷ್ಟ್ರೀಯ ಹೆದ್ದಾರಿ 66ರ ಬರ್ಗಿ ಗ್ರಾಮದ ಬಳಿ ಮಳೆಯ ಅಬ್ಬರಕ್ಕೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಕುಮಟಾದಿಂದ ಅಂಕೋಲಾ ಕಡೆ ಕಾರು ಹೊರಟಿತ್ತು. ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದ್ದರಿಂದ ಜತೆಗೆ ವೇಗವಾಗಿ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿದ್ದು, ಪಕ್ಕದ ಕಾಲುವೆಗೆ ಬಿದ್ದಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

boat fall in netravati river at harekala

ಭರ್ತಿಯತ್ತ ತುಂಗಾ ಜಲಾಶಯ

ಶಿವಮೊಗ್ಗ: ಮಲೆನಾಡಿನಲ್ಲಿ ಕಳೆದೆರಡು ದಿನಗಳಿಂದ ಮಳೆ ಚುರುಕುಗೊಂಡಿದ್ದು, ಎಲ್ಲ ಕಡೆ ವ್ಯಾಪಕವಾಗಿ ಸುರಿಯುತ್ತಿದೆ. ತುಂಗಾ ಜಲಾಶಯದಲ್ಲಿ ಪೂರ್ಣ ಮಟ್ಟಕ್ಕೆ ನೀರು ಸಂಗ್ರಹವಾಗಿದೆ. ಮಳೆ ಹೀಗೇ ಮುಂದುವರಿದಲ್ಲಿ ಯಾವುದೇ ಕ್ಷಣದಲ್ಲಿ ನೀರು ಬಿಡುವ ಸಾಧ್ಯತೆ ಇದೆ. ಒಟ್ಟಾರೆ ಸಾಮರ್ಥ್ಯ 588.24 ಮೀಟರ್‌ ಇದ್ದು, ಬುಧವಾರ (ಜುಲೈ 7) 587.54 ಮೀಟರ್‌ ಇದೆ. ಅಂದರೆ ಜಲಾಶಯ ತುಂಬಲು ಇನ್ನು ಭಾಗಶಃ ಮುಕ್ಕಾಲು ಮೀಟರ್‌ ನೀರು ಬಂದರೆ ಸಾಕು. ಹೀಗಾಗಿ ತುಂಗಾ ಮೇಲ್ದಂಡೆ ಯೋಜನೆ ವಿಭಾಗವು ಮುನ್ನೆಚ್ಚರಿಕೆ ನೀಡಿದ್ದು, ನದಿಪಾತ್ರದಲ್ಲಿ ಯಾವುದೇ ಚಟುವಟಿಕೆಯನ್ನು ಮಾಡದಂತೆ ಎಚ್ಚರಿಕೆ ನೀಡಿದೆ. ದನ-ಕರುಗಳನ್ನು, ಪ್ರಾಣಿಗಳನ್ನು ಮೇಯಲು ಬಿಡಬಾರದು, ಅಪಾಯದ ಸ್ಥಳದಲ್ಲಿದ್ದವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಮುಳುಗಿದ ಬೋಟ್‌; ಯುವಕನ ರಕ್ಷಣೆ

ಮಂಗಳೂರು: ನೇತ್ರಾವತಿ ನದಿಯಲ್ಲಿ ಮೀನುಗಾರಿಕೆಗೆ ಬೋಟ್‌ನಲ್ಲಿ ಹೋಗಿದ್ದ ಯುವಕನನ್ನು ರಕ್ಷಣೆ ಮಾಡಲಾಗಿದೆ. ನೀರಿನ ಹರಿವು ಜಾಸ್ತಿಯಾಗಿ ಬೋಟ್‌ ಮಗುಚಿದ್ದ ಹಿನ್ನೆಲೆಯಲ್ಲಿ ತೇಲಿಕೊಂಡು ಹೋಗುತ್ತಿದ್ದ ಯುವಕನನ್ನು ಸಿನಿಮೀಯವಾಗಿ ರಕ್ಷಿಸಲಾಗಿದೆ. ಸ್ಥಳೀಯ ಯುವಕರ ತಂಡವು ಸಮಯಪ್ರಜ್ಞೆ ಮೆರೆದು ಯುವಕನನ್ನು ರಕ್ಷಣೆ ಮಾಡಿದ್ದಾರೆ.

boat fall in netravati river at harekala

ಮಂಗಳೂರು ಹೊರವಲಯದ ಹರೇಕಳ- ಅಡ್ಯಾರ್ ಸೇತುವೆಯ ಕೆಳಭಾಗ ಈ ಘಟನೆ ನಡೆದಿದೆ. ರೆಡ್ ಅಲರ್ಟ್ ನಡುವೆಯೂ ಅಪಾಯ ಲೆಕ್ಕಿಸದೆ ಮೀನುಗಾರಿಕೆಗೆ ಹೋಗಿದ್ದ ಯುವಕನ ಜೀವ ಅಪಾಯಕ್ಕೆ ಸಿಲುಕಿತ್ತು. ಮೀನುಗಾರಿಕಾ ಬೋಟ್ ಮುಳುಗಡೆ ಆಗಿಯೇ ಬಿಟ್ಟಿತ್ತು. ನೀರು ಸಹ ವೇಗವಾಗಿ ಹರಿದುಕೊಂಡು ಹೋಗುತ್ತಿದ್ದರಿಂದ ಆತನಿಗೆ ಈಜಿ ದಡ ಸೇರಲು ಆಗುತ್ತಲೇ ಇರಲಿಲ್ಲ. ಹೀಗಾಗಿ ರಕ್ಷಣೆಗೆ ಕೂಗಿಕೊಳ್ಳುತ್ತಿದ್ದ.

ಇದನ್ನೂ ಓದಿ: Rain News : ಹೊಸನಗರದ ಮಾಣಿಯಲ್ಲಿ ಒಂದೇ ದಿನ 14 ಸೆಂ.ಮೀ. ಮಳೆ! ತುಂಬಿತು ತುಂಗಾ ಜಲಾಶಯ

ಇದನ್ನು ಗಮನಿಸಿದ ಸ್ಥಳದಲ್ಲಿದ್ದ ಯುವಕರ ತಂಡವು ಸೇತುವೆ ಮೇಲಿನಿಂದ ನದಿಗೆ ಹಗ್ಗ ಇಳಿಸಿದ್ದಾರೆ. ಆ ಹಗ್ಗವನ್ನು ಯುವಕನು ಹಿಡಿದುಕೊಂಡು ಮೇಲಕ್ಕೆ ಬಂದಿದ್ದಾನೆ. ದೋಣಿ ನೀರುಪಾಲಾಗಿದ್ದು, ರಕ್ಷಣೆಯ ವಿಡಿಯೊ ವೈರಲ್ ಆಗಿದೆ.

Exit mobile version