ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಕಲಾದಗಿಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಶನಿವಾರ (ಫೆ.೨೫) ತಮ್ಮ ೧೮ನೇ ಹಾಗೂ ಕೊನೆಯ ಗ್ರಾಮ ವಾಸ್ತವ್ಯ (Grama Vastavya) ಕಾರ್ಯಕ್ರಮವನ್ನು ನೆರವೇರಿಸಿದರು. ಮಧ್ಯಾಹ್ನ ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ ಕಾರ್ಯಕ್ರಮವನ್ನು ನೆರವೇರಿಸಿದ ಅವರು, ಬಳಿಕ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು. ರಾತ್ರಿ ಕಲಾದಗಿಯ ಗುರುಲಿಂಗೇಶ್ವರ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ನಡೆಸಿದರು. ಇದೇ ವೇಳೆ ಗ್ರಾಮಕ್ಕೆ ೧ ಕೋಟಿ ರೂಪಾಯಿ ಘೋಷಿಸಿ, ಅಗತ್ಯತೆ ಇರುವುದಕ್ಕೆ ಗ್ರಾಮಸ್ಥರ ಅಭಿಪ್ರಾಯದಂತೆ ವ್ಯಯಿಸಲು ಅಧಿಕಾರಿಗಳಿಗೆ ಸೂಚಿಸಿದರು. ಖಜ್ಜಿಡೋಣಿಯ ವಸತಿ ಶಾಲೆಯಲ್ಲಿ ವಾಸ್ತವ್ಯ ಹೂಡಿದರು. ಸಚಿವರಿಗೆ ಜಿಲ್ಲೆಯ ಅಧಿಕಾರಿಗಳು ಸಾಥ್ ನೀಡಿದರು. ಭಾನುವಾರ (ಫೆ. ೨೬) ಮುಂಜಾನೆ ಪತ್ರಿಕೆ ಓದಿ, ವಾಕಿಂಗ್ ಹೊರಟ ಸಚಿವರು, ದಲಿತರೊಬ್ಬರ ಮನೆಯಲ್ಲಿ ಉಪಾಹಾರ ಸೇವಿಸಿದರು.
ಕಲಾದಗಿ ಗ್ರಾಮಸ್ಥರ ಸಮಸ್ಯೆ ಆಲಿಸಿದ ಸಚಿವರು, ಆದಷ್ಟು ಶೀಘ್ರವಾಗಿ ಪರಿಹಾರ ಒದಗಿಸುವ ಭರವಸೆ ನೀಡಿದರು. ಇದೇ ವೇಳೆ ಗ್ರಾಮದ ಸುತ್ತ ಸಂಚಾರ ಮಾಡಿದ ಸಚಿವರು ಬಸ್ ನಿಲ್ದಾಣದಲ್ಲಿದ್ದ ಚಹಾ ಅಂಗಡಿಗೆ ಹೋಗಿ ಅಲ್ಲಿನ ಗ್ರಾಹಕರಿಗೆ ಚಹಾ ಕೊಟ್ಟರು. ಬಳಿಕ ತಾವೂ ಚಹಾ ಕುಡಿದು ಮಾಲೀಕ ಅಂಗಡಿ ಮಾಲೀಕ ಪಿಂಟು ಬೋಜಗಾರ ಎಂಬುವವರಿಗೆ ೫೦೦ ರೂಪಾಯಿ ಕೊಟ್ಟರು.
ನಾನು ೧೮ ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಎಲ್ಲ ಜಿಲ್ಲಾಧಿಕಾರಿಗಳಿಂದ ಸುಮಾರು ಎರಡೂವರೆ ಸಾವಿರ ವಾಸ್ತವ್ಯ ಮಾಡಲಾಗಿದೆ. ನಾ ಒಬ್ಬನೇ ಮಾಡುವುದಲ್ಲ, ಪ್ರತಿ ಅಧಿಕಾರಿ ಮಾಡಬೇಕೆಂಬ ದೃಷ್ಟಿಯಿಂದ ಸುಮಾರು ೪ ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಿದ್ದೇವೆ. ಜನಕ್ಕೆ ಸರ್ಕಾರ ನಮ್ಮದು ಎಂದು ಅನ್ನಿಸಬೇಕು. ಅಧಿಕಾರಿಗಳು ಹಳ್ಳಿ ಕಡೆ ಹೋಗಬೇಕು. ಹಳ್ಳಿಯ ಸಮಸ್ಯೆಗಳನ್ನು ಕೇಳಿ ಸ್ಥಳದಲ್ಲೇ ಪರಿಹಾರ ಕೊಡಬೇಕು. ಇದು ಗ್ರಾಮ ವಾಸ್ತವ್ಯದ ನಿಜವಾದ ಪರಿಕಲ್ಪನೆ ಎಂದು ಅಶೋಕ್ ಹೇಳಿದರು.
ಇದನ್ನೂ ಓದಿ: 7th pay commission: ರಾಜ್ಯ ಸರ್ಕಾರಿ ನೌಕರರ ಹೋರಾಟದ ನಡುವೆಯೇ ಕೇಂದ್ರ ಉದ್ಯೋಗಿಗಳಿಗೆ ಭರ್ಜರಿ ವೇತನ ಏರಿಕೆ ಶೀಘ್ರ
ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ನಾನು ಮಾಡಿದ್ದೇನೆ. ಸುಮಾರು ೬೦ ಲಕ್ಷ ಕುಟುಂಬಗಳಿಗೆ ಕಂದಾಯ ದಾಖಲೆಗಳನ್ನು ನೀಡಿದ್ದೇನೆ. ಇಡೀ ಕರ್ನಾಟಕದ ಜನ ಕಂದಾಯ ಇಲಾಖೆ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ. ಇಲಾಖೆಯಲ್ಲಿ ತೊಂದರೆ ಆಗುವ ಕಾಯ್ದೆಗಳಾದ ೭೯ ಎ, ಬಿಯನ್ನು ತೆಗೆದುಹಾಕಿದ್ದೇವೆ. ಇಂದು ಯಾರು ಬೇಕಾದರೂ ರೈತರಾಗಬಹುದು. ಒಟ್ಟಾರೆ ಗ್ರಾಮ ವಾಸ್ತವ್ಯ ನನಗೆ ತೃಪ್ತಿತಂದಿದೆ ಎಂದು ತಿಳಿಸಿದರು.
ಯಾವುದಾದರೂ ಸಮಸ್ಯೆಯನ್ನು ಪರಿಹರಿಸಬೇಕಿತ್ತು ಎಂದು ನಿಮಗೆ ಅನ್ನಿಸಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಾಡಬೇಕಾಗಿದ್ದು ಇನ್ನೂ ಬಹಳಷ್ಟಿದೆ. ಕಂದಾಯ ಇಲಾಖೆಯಲ್ಲಿ ಪೋಡಿ ಇದೆ, ಪೌತಿ ಖಾತೆ ಇದ್ದರೂ ಜಟಿಲವಾಗಿದೆ. ಈಗ ಪೌತಿ ಖಾತೆಯನ್ನೂ ಪ್ರಾರಂಭ ಮಾಡಿದ್ದೇವೆ. ಅಲ್ಲದೆ, ರೈತರು ತಮ್ಮ ಜಮೀನನ್ನು ತಾವೇ ಸರ್ವೇ ಮಾಡುವ ಆ್ಯಪ್ ಅನ್ನು ಕೂಡ ತಯಾರು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಜಗಲಿ ಕಟ್ಟೆಗೆ ನಾನು ಬಂದಿದ್ದೇನೆ. ಈ ಗ್ರಾಮಕ್ಕೆ ನಾನು ೧ ಕೋಟಿ ರೂಪಾಯಿ ಕೊಡುತ್ತಿದ್ದೇನೆ. ಆ ಹಣವನ್ನು ಏನು ಮಾಡಬೇಕು? ರಸ್ತೆ ಮಾಡಬೇಕಾ? ಸಮುದಾಯ ಭವನ ಮಾಡಬೇಕಾ? ಹಾಸ್ಟೆಲ್ ಮಾಡಬೇಕಾ? ದೇವಸ್ಥಾನಕ್ಕೆ ಕೊಡಬೇಕಾ? ಏನು ಅನ್ನೋದನ್ನು ತೀರ್ಮಾನ ಮಾಡೋ ಸಲುವಾಗಿ ಈ ಗ್ರಾಮ ಸಭೆಯನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.
ಕಾಂತಾರದ ವರಾಹ ಹಾಡಿಗೆ ಡ್ಯಾನ್ಸ್
ಕಲಾದಗಿ ಉತ್ಸವದಲ್ಲಿ ಕಾಂತಾರದ ವರಾಹ ಹಾಡು ಗಮನ ಸೆಳೆದಿದ್ದು, ಈ ಹಾಡಿಗೆ ಭರ್ಜರಿ ನೃತ್ಯ ಮಾಡಲಾಗಿದೆ. ವೇದಿಕೆ ಮುಂಭಾಗದಲ್ಲಿ ಕುಳಿತ ಸಚಿವ ಆರ್. ಅಶೋಕ್ ಹಾಗೂ ಮುರುಗೇಶ್ ನಿರಾಣಿ ಕೈ ಹಿಡಿದ ಪಂಜುರ್ಲಿ (ವರಾಹ ರೂಪದ ದೈವ) ನೃತ್ಯ ಮಾಡಿದರು. ಅಲ್ಲದೆ, ಸಚಿವರಿಬ್ಬರ ಕೈಹಿಡಿದು ಪಂಜುರ್ಲಿ ದೈವ ಆಶೀರ್ವದಿಸಿದರು.
ಬಳಿಕ ಖಜ್ಜಿಡೋಣಿ ಗ್ರಾಮಕ್ಕೆ ಆಗಮಿಸಿದ ಸಚಿವ ಆರ್.ಅಶೋಕ, ವಾಸ್ತವ್ಯ ಮಾಡುವ ವಸತಿ ಶಾಲೆಯ ಮಕ್ಕಳೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಭೋಜನ ಸವಿದರು. ಬಳಿಕ ಅಲ್ಲಿಯೇ ವಾಸ್ತವ್ಯ ಹೂಡಿದರು.
ಸಚಿವರ ವಾಕಿಂಗ್
ಖಜ್ಜಿಡೋಣಿ ಗ್ರಾಮದ ವಸತಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಸಚಿವ ಆರ್.ಅಶೋಕ್, ಮುಂಜಾನೆ ಎದ್ದವರೇ ವಾಕಿಂಗ್ ಹೊರಟರು. ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಸುಮಾರು ೨೦ ನಿಮಿಷಗಳ ಕಾಳ ವಾಕಿಂಗ್ ಮಾಡಿದರು. ಬಳಿಕ ಪತ್ರಿಕೆಗಳನ್ನು ಓದಿ, ಖಜ್ಜಿಡೋಣಿ ಶಾಲೆಯಲ್ಲಿ ಬೆಳಗ್ಗೆ ವಸತಿ ಶಾಲೆ ಮಕ್ಕಳಿಗೆ ತಿಂಡಿ ಬಡಿಸಿದರು.
ಮಕ್ಕಳ ತಟ್ಟೆಗೆ ಇಡ್ಲಿ ಸಾಂಬಾರ್ ಬಡಿಸಿದ ಸಚಿವ ಆರ್.ಅಶೋಕ್, ಬಳಿಕ ಮಕ್ಕಳೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಲ್ಪ ಉಪಾಹಾರವನ್ನೂ ಸೇವನೆ ಮಾಡಿದರು. ಸಚಿವ ಮುರುಗೇಶ ನಿರಾಣಿ, ಎಸಿ ಶ್ವೇತಾ ಬಿಡಿಕರ್ ಸಾಥ್ ನೀಡಿದರು. ಅಲ್ಲಿಂದ ಕಲಾದಗಿ ಗ್ರಾಮಕ್ಕೆ ತೆರಳಿದ ಸಚಿವರು ಭೇಟಿ ನೀಡಿದರು.
ದಲಿತರ ಮನೆಯಲ್ಲಿ ಉಪಾಹಾರ ಸೇವನೆ
ಕಂದಾಯ ಸಚಿವ ಆರ್. ಅಶೋಕ್ ಅವರು ಕಲಾದಗಿ ಗ್ರಾಮದ ಕಲ್ಲೊಳ್ಳೆಪ್ಪ ಮಾದರ ಎಂಬುವವರ ಮನೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದರು. ಬಿಸಿ ಬಿಸಿ ರೊಟ್ಟಿ, ಪಲ್ಯ, ಮೊಸರು ಚಟ್ನಿ, ಉಪ್ಪಿಟ್ಟು ಚುರುಮುರಿ, ಮೊಸರು ಅವಲಕ್ಕಿಯನ್ನು ಸೇವಿಸಿದರು. ಈ ವೇಳೆ ಕ್ಷೇತ್ರದ ಶಾಸಕ, ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಪರಿಷತ್ ಸದಸ್ಯ ಹನಮಂತ ನಿರಾಣಿ, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಜತೆಗಿದ್ದರು. ಉಪಾಹಾರದ ಬಳಿಕ ಕಲ್ಲೊಳ್ಳೆಪ್ಪ ಕುಟುಂಬದವರಿಂದ ಸಚಿವರಿಗೆ ಸನ್ಮಾನ ನೆರವೇರಿಸಲಾಯಿತು. ಇದೇ ವೇಳೆ ಕಲ್ಲೊಳ್ಳೆಪ್ಪ ನಾಗವ್ವ ದಂಪತಿ ಹಾಗೂ ಮಕ್ಕಳ ಜತೆ ಸಚಿವರು ಫೋಟೊ ತೆಗೆಸಿಕೊಂಡರು.
ಶಾಲೆಯಲ್ಲಿ ಸಚಿವ ಆರ್. ಅಶೋಕ್ ವಾಸ್ತವ್ಯದ ವಿಡಿಯೊ ಇಲ್ಲಿದೆ
ಬಡವರ ಮನೆ ಊಟದ ಸವಿ ಹೆಚ್ಚು- ಅಶೋಕ್
ಬಡವರ ಮನೆ ಊಟದ ಸವಿ ಹೆಚ್ಚು, ಇಲ್ಲಿ ಪ್ರೀತಿಯಿಂದ ನಮಗೆ ಊಟ-ಉಪಾಹಾರ ಕೊಟ್ಟಿದ್ದಾರೆ. ಇದೆಲ್ಲ ಗ್ರಾಮ ವಾಸ್ತವ್ಯದಿಂದ ಸಾಧ್ಯವಾಗಿದೆ. ಪ್ರತಿಯೊಬ್ಬ ರಾಜಕಾರಣಿಯೂ ಈ ರೀತಿ ಕಾರ್ಯಕ್ರಮ ಮಾಡಬೇಕು. ಜನರ ಬಳಿ ಹೋದಾಗಲೇ ಅವರ ಸಮಸ್ಯೆಗಳು ತಿಳಿಯಲು ಸಾಧ್ಯ ಎಂದು ಸಚಿವ ಅಶೋಕ್ ಹೇಳಿದರು.
ಇದನ್ನೂ ಓದಿ: Save Kappattagudda: ಕಪ್ಪತ್ತಗುಡ್ಡಕ್ಕೆ ಕಂಟಕ; ಪ್ರಧಾನಿಗೆ ಪತ್ರ ಬರೆದ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ
2 ಲಕ್ಷ ರೂಪಾಯಿ ವೈಯಕ್ತಿಕ ನೆರವು
ಉಪಾಹಾರ ಮಾಡಿದ ಕಲ್ಲೊಳ್ಳೆಪ್ಪ ಕುಟುಂಬಕ್ಕೆ ವೈಯಕ್ತಿವಾಗಿ ಎರಡು ಲಕ್ಷ ರೂಪಾಯಿ ನೀಡುವುದಾಗಿ ಸಚಿವ ಅಶೋಕ್ ಹೇಳಿದ್ದು, ನಂತರ ಅವರ ಮನೆಗೆ ಹಣ ಕಳಿಸಲಾಗುವುದು ಎಂದು ತಿಳಿಸಿದ್ದಾರೆ. ಕುಟುಂಬದ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಬಗ್ಗೆ ಖಾಸಗಿಯಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.