Site icon Vistara News

ಲೇಟ್‌ ಲತೀಫ್‌ ಅಧಿಕಾರಿಗಳ ವಿರುದ್ಧ ಗಾಂಧಿಗಿರಿ ಅಸ್ತ್ರ ಪ್ರಯೋಗ !

ಲೇಟ್‌ ಲತೀಫ್

ಬಾಗಲಕೋಟೆ: ಬೀಳಗಿ ಪಟ್ಟಣ ಪಂಚಾಯತಿಯಲ್ಲಿ ಎಂದಿನಂತೆ ತಡವಾಗಿ ಬರುತ್ತಿದ್ದ ಕೆಲ ಅಧಿಕಾರಿಗಳು ಶುಕ್ರವಾರ ವಿಚಿತ್ರ ಸನ್ನಿವೇಶ ಎದುರಿಸಿದರು. ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ಅಧಿಕಾರಿಗಳ ನಡೆಗೆ ಬೇಸತ್ತ ಸಾರ್ವಜನಿಕರು, ತಡವಾಗಿ ಬಂದವರಿಗೆ ಹೂವಿನ ಮಾಲೆ ಹಾಕಿ ಸ್ವಾಗತ ಮಾಡಿದರು. ಸಾರ್ವಜನಿಕರ ನಡೆ ಕಂಡು ಬೀಳಗಿ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಅಚ್ಚರಿಯ ಜತೆಗೆ ಮುಜುಗರವೂ ಆಯಿತು.

ಇದನ್ನೂ ಓದಿ | ಹೆರಿಗೆ, ಶಸ್ತ್ರಚಿಕಿತ್ಸೆ ವಿಭಾಗಗಳಲ್ಲಿ ಉತ್ತಮ ಕಾರ್ಯನಿರ್ವಹಣೆ; ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರಾಷ್ಟ್ರಮಟ್ಟದ ಲಕ್ಷ್ಯ ಪ್ರಶಸ್ತಿ

ನಿತ್ಯ ತಮ್ಮ ಕೆಲಸಗಳಿಗಾಗಿ ಕಾದು ಕಾದು ಬೇಸತ್ತ ಜನರು ಅಧಿಕಾರಿಗಳಿಗೆ ಪಾಠ ಕಲಿಸುವ ದೃಷ್ಟಿಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ತಡವಾಗಿ ಬಂದವರಿಗೆಲ್ಲ ಹಾರ ಹಾಕಿದರು. ಗಾಂಧಿಗಿರಿಗೆ ಅಚ್ಚರಿಗೊಂಡ ಅಧಿಕಾರಿಗಳಿಗೆ, ಇನ್ನು ಮುಂದಾದರೂ ತಡವಾಗಿ ಬರದಂತೆ ಕೋರಿದರು. ತಡವಾಗಿ ಬಂದವರಿಗೆ ಹಾರ ಹಾಕಿದರೆ, ಸರಿಯಾದ ಸಮಯಕ್ಕೆ ಕಚೇರಿಗೆ ಬಂದ ಅಧಿಕಾರಿಗಳಿಗೆ ಚಾಕೋಲೇಟ್‌ ನೀಡಿ ಅಭಿನಂದಿಸಿದರು.

ಪಟ್ಟಣ ಪಂಚಾಯತಿಯ ಒಳಗೆ ಹೋದ ಸ್ಥಳೀಯರು, ಹಾಜರಾತಿ ಪುಸ್ತಕ ಪರಿಶೀಲನೆ ಮಾಡಿದರು. ಒಟ್ಟು 21 ಸಿಬ್ಬಂದಿ ಪೈಕಿ 11 ಜನ ಮಾತ್ರ ಹಾಜರಿದ್ದರು. ಉಳಿದವರು ಕಾರಣ ತಿಳಿಸದೇ ಗೈರಾಗಿದ್ದರು. ಸಾರ್ವಜನಿಕರ ಕುಂದುಕೊರತೆಗಳಿಗಾಗಿ ಮೀಸಲಿರಿಸಿದ ರಿಜಿಸ್ಟರ್‌ನಲ್ಲಿ ತಮ್ಮ ಸಮಸ್ಯೆ ಕುರಿತು ದೂರು ದಾಖಲಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ | ಬಾಗಲಕೋಟೆಯಲ್ಲಿ ರಸ್ತೆ ಬದಿ ನಿಂತಿದ್ದವರಿಗೆ ವಾಹನ ಡಿಕ್ಕಿ, ನಾಲ್ವರ ಸಾವು

Exit mobile version