Site icon Vistara News

ಪೊಲೀಸರು ಹಾಕಿದ್ದ ಕೇಸ್‌ಗೆ ಹೈಕೋರ್ಟ್ ತಡೆಯಾಜ್ಞೆ; ಕಾಫಿನಾಡಿನಲ್ಲಿ ವಕೀಲರ ಸಂಭ್ರಮ

Lawyers celebrate

ಚಿಕ್ಕಮಗಳೂರು: ವಕೀಲನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವಕೀಲರ ಮೇಲೆ ಪೊಲೀಸರು ಹಾಕಿದ್ದ ಕೇಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಕಾಫಿನಾಡಿನಲ್ಲಿ (chikkamagaluru) ವಕೀಲರು ಸಂಭ್ರಮಾಚರಣೆ ನಡೆಸಿದ್ದಾರೆ. ವಕೀಲನ ಮೇಲೆ ಹಲ್ಲೆ ನಡೆಸಿದ ಪೊಲೀಸರ ಬಂಧನಕ್ಕೆ ಆಗ್ರಹಿಸಿ ವಕೀಲರು ಬೃಹತ್‌ ಪ್ರತಿಭಟನೆ ನಡೆಸಿದ್ದರು. ನಂತರ ಪೊಲೀಸರು ಕೂಡ ಪ್ರತಿಭಟನೆ ನಡೆಸಿ, ಐವರು ವಕೀಲರ ಮೇಲೆ ಪ್ರಕರಣ ದಾಖಲಿಸಿದ್ದರು. ಇದೀಗ ಈ ಪ್ರಕರಣಕ್ಕೆ ತಡೆಯಾಜ್ಞೆ ನೀಡಿರುವುದರಿಂದ ಚಿಕ್ಕಮಗಳೂರು ಕೋರ್ಟ್ ಮುಂದೆ ವಕೀಲರು ಸಂಭ್ರಮಿಸಿದ್ದಾರೆ.

ವಕೀಲನ ಪ್ರೀತಮ್‌ ಮೇಲೆ ಹಲ್ಲೆ ಸಂಬಂಧ 6 ಜನ ಪೊಲೀಸರ ಮೇಲೆ ವಕೀಲರು ದೂರು ನೀಡಿದ್ದರು. ನಂತರ ಎಫ್‌ಐಆರ್‌ ದಾಖಲಾಗಿತ್ತು. ಆದರೆ, ಸಿಬ್ಬಂದಿಯನ್ನು ಬಂಧಿಸಬಾರದು ಎಂದು ಪೊಲೀಸರು ಕೂಡ ಪ್ರತಿಭಟನೆ ನಡೆಸಿ, ಐವರು ವಕೀಲರ ಮೇಲೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಹೈಕೋರ್ಟ್‌, ವಕೀಲನ ವಿರುದ್ಧದ ಕೇಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮಂಗಳವಾರ ವಿಚಾರಣೆ ನಡೆಯಲಿದ್ದು, ಹೈಕೋರ್ಟ್ ತೀರ್ಪಿಗಾಗಿ ವಕೀಲರು ಕಾಯುತ್ತಿದ್ದಾರೆ.

ಇದನ್ನೂ ಓದಿ | PSI Exam: ಪಿಎಸ್‌ಐ ಪರೀಕ್ಷೆ ಮುಂದೂಡಿಕೆ, ಜ. 23ಕ್ಕೆ ಫಿಕ್ಸ್‌: ಗೃಹ ಸಚಿವರ ಘೋಷಣೆ

ಹೈಕೋರ್ಟ್‌ನಲ್ಲಿ ತೀರ್ಪು ಬಂದ ನಂತರ ಮುಂದಿನ ನಿರ್ಧಾರ ಮಾಡಲು ಚಿಕ್ಕಮಗಳೂರು ಬಾರ್ ಕೌನ್ಸಿಲ್ ಹಾಲ್‌ನಲ್ಲಿ ವಕೀಲರು ಸಭೆ ನಡೆಸಿದ್ದು, ತೀರ್ಪಿನ ಬಳಿಕ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚೆ ಮಾಡಿದ್ದಾರೆ.

ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿ.ಸಿ.ಗೆ ದೂರು

ವಕೀಲನ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ಗೆ ಕರ್ನಾಟಕ ಮಾನವ ಹಕ್ಕು ಸಮಿತಿ ಮನವಿ ಸಲ್ಲಿಸಿದೆ. ಜನಸ್ನೇಹಿ ಪೊಲೀಸರು ಮಾಡಿರುವ ಕೃತ್ಯ ಅಪರಾಧ, ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮಕ ಕೈಗೊಳ್ಳಬೇಕು ಎಂದು ಸಮಿತಿ ಆಗ್ರಹಿಸಿದೆ.

ಹಿರಿಯ ಅಧಿಕಾರಿಗಳ ವಿರುದ್ಧ ನಿವೃತ್ತ ಪೊಲೀಸ್‌ ಆಕ್ರೋಶ

ಪೊಲೀಸರಿಗೆ ತೊಂದರೆಯಾದರೆ ಇಡೀ ರಾಜ್ಯಾದ್ಯಂತ ಹೋರಾಟ ನಡೆಯಲಿದೆ. ಎಫ್.ಐ.‌ಆರ್ ಕಾಪಿ ಹರಿದು ಬಿಸಾಡಿದವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ, ಪೊಲೀಸರು ಕೂಡ ಸ್ವಾಭಿಮಾನ ಇರುವವರೇ, ಅನ್ಯಾಯ ಆಗಲು ಬಿಡಲ್ಲ. ಪೊಲೀಸರಿಗೆ ಅನ್ಯಾಯವಾದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ನಿವೃತ್ತ ಪೊಲೀಸ್‌ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಅಣ್ಣಯ್ಯ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | ಚಿಕ್ಕಮಗಳೂರು ಪೊಲೀಸ್-ವಕೀಲರ ಸಂಘರ್ಷ; ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿರುವ ಅಣ್ಣಯ್ಯ ಸುದ್ದಿಗೋಷ್ಠಿ ನಡೆಸಲು ಬಂದಾಗ ಅವರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರ ಜತೆ ನಿಲ್ಲದ ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಸುದ್ದಿಗೋಷ್ಠಿ ಮಾಡದಂತೆ ನನ್ನನ್ನ ತಡೆದಿದ್ದಾರೆ, ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version