ಬೆಂಗಳೂರು: ಕೋರ್ಟ್‌ನಲ್ಲಿ ಇರುತ್ತಿದ್ದ ವಕೀಲರೆಲ್ಲರೂ (Lawyers Protest) ಸೋಮವಾರ (ಫೆ.13) ಬೀದಿಗಿಳಿದು ಪ್ರತಿಭಟನೆ ನಡೆಸಿದರು. ನಮಗೆ ರಕ್ಷಣೆ ಕೊಡಿ ಜತೆಗೆ ಕಾನೂನು ಒಂದನ್ನು ಜಾರಿಗೆ ತನ್ನಿ ಎಂದು ಒತ್ತಾಯಿಸಿದರು. ರಾಜ್ಯ ವಕೀಲ ಸಂಘ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ನೂರಾರು ವಕೀಲರು ಭಾಗಿಯಾದರು.
ವಕೀಲರ ರಕ್ಷಣೆಗಾಗಿ ಕಾನೂನು ಜಾರಿಗೆ ತರಲು ಆಗ್ರಹಿಸಿ ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಿಂದ ಹೊರಬಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಕೋರ್ಟ್ ಆವರಣದ ಮುಂಭಾಗ ಹಾಗೂ ಕೆ.ಆರ್.ಸರ್ಕಲ್ ಬಳಿ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿತ್ತು. ಸ್ಥಳದಲ್ಲಿ ಮೂವರು ಡಿಸಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತರು, ಕೆಎಸ್ಆರ್ಪಿ ತುಕಡಿಗಳು ಸೇರಿದಂತೆ ಐನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆ ವಹಿಸಿದ್ದರು.
ವಿಧಾನಸೌಧ ಮುತ್ತಿಗೆ ಹಾಕಲು ವಕೀಲರು ಯತ್ನಿಸುತ್ತಿದ್ದಂತೆ ಕೆ.ಆರ್. ಸರ್ಕಲ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರನ್ನು ತಡೆದರು. ಇದಕ್ಕೂ ಮೊದಲು ಮಾತನಾಡಿದ ವಕೀಲರು, ಇತ್ತೀಚಿನ ದಿನಗಳಲ್ಲಿ ಹಲ್ಲೆ, ಕೊಲೆ ಬೆದರಿಕೆ ದೌರ್ಜನ್ಯದಂತಹ ಪ್ರಕರಣಗಳು ನಡೆಯುತ್ತಿದೆ. ವೈದ್ಯರಿಗೆ ಹೇಗೆ ರಕ್ಷಣಾ ಕಾನೂನು ತರಲಾಗಿದೆಯೋ ಅದೇ ರೀತಿ ವಕೀಲರಿಗೂ ಪ್ರತ್ಯೇಕ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕೆಂದು ಒತ್ತಾಯಸಿದರು.
ಇದನ್ನೂ ಓದಿ: Delhi Mayor Election: ಮೇಯರ್ ಆಯ್ಕೆ ಕಗ್ಗಂಟು; ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದ ಸುಪ್ರೀಂ
ಈ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತ್ಯೇಕ ಕಾಯ್ದೆ ಜಾರಿಗೆ ತರುವ ಭರವಸೆ ನೀಡಿದ್ದರು. ಆದರೆ ಈವರೆಗೆ ಈಡೇರಿಲ್ಲ ಎಂದು ಆಕ್ರೋಶ ಹೊರಹಾಕಿದರು. ಕಾಯ್ದೆ ಜಾರಿಗೆ ಆಗ್ರಹಿಸಿ ವಕೀಲರ ಸಂಘ ಈ ಹಿಂದೆಯೂ ಪ್ರತಿಭಟನೆ ನಡೆದಿತ್ತು.