ಬೆಳಗಾವಿ: ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದ ಜಮೀನಿನಲ್ಲಿ ಕ್ರಿಮಿನಾಶಕ ಸಿಂಪಡಣೆ ವೇಳೆ ವಿದ್ಯುತ್ ತಂತಿ ತಗುಲಿ (Electric Shock) ದಂಪತಿ ದಾರುಣವಾಗಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೃತಪಟ್ಟ ಬಿಜಗರಣಿ ಗ್ರಾಮದ ಅಮಿತ್ ದೇಸಾಯಿ ಹಾಗೂ ಲತಾ ದಂಪತಿ ಕುಟುಂಬಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಭೇಟಿ ನೀಡಿ ಸಾಂತ್ವನ ಹೇಳಿದರು.
ತಾಲೂಕಿನ ಬಿಜಗರಣಿ ಗ್ರಾಮದಲ್ಲಿ ಅಮಿತ್ ದೇಸಾಯಿ ಹಾಗೂ ಲತಾ ದೇಸಾಯಿ ನಿನ್ನೆ ಭಾನುವಾರ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೆ ಮೃತಪಟ್ಟಿದ್ದರು. ಅಳಿಯ ಮತ್ತು ಮಗಳನ್ನು ಕಳೆದುಕೊಂಡು ಆಘಾತಕ್ಕಗೊಳಗಾಗಿರುವ ತಾಯಿ ಚಂದ್ರಮಾಲಾ ದೇಸಾಯಿ ಅವರನ್ನು ಲಕ್ಷ್ಮೀ ಹೆಬ್ಬಾಳ್ಕರ್ ಸಂತೈಸಿದರು.
ಇದೇ ವೇಳೆ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಆರ್ಥಿಕ ಸಹಾಯ ನೀಡಿ, ಸರಕಾರದಿಂದಲೂ ಪರಿಹಾರ ಬಿಡುಗಡೆ ಮಾಡಿಸಿಕೊಡುವುದಾಗಿ ಭರವಸೆಯನ್ನು ನೀಡಿದರು.
ತಂದೆ ತಾಯಿ ಇಲ್ಲದೆ ಮಗು ಅನಾಥ
ಚಿಕ್ಕ ವಯಸ್ಸಿನಲ್ಲೇ ಪ್ರಾಣ ಕಳೆದುಕೊಂಡ ದಂಪತಿಗೆ ಅನನ್ಯ ಎಂಬ 2 ವರ್ಷದ ಹೆಣ್ಣು ಮಗು ಇದ್ದು, ಈಗ ಅನಾಥವಾಗಿದೆ. ಈ ಮಗುವನ್ನು ಕಂಡು ಮರುಗಿದ ಲಕ್ಷ್ಮೀ ಹೆಬ್ಬಾಳ್ಕರ್, “ಆ ಮಗುವಿನ ಮುಖ ನೋಡಿ ಕರುಳು ಕಿತ್ತು ಬಂದಂತಿದೆ, ವಿಧಿ ನಿಜಕ್ಕೂ ಕ್ರೂರಿ. ತಂದೆ ತಾಯಿಯನ್ನು ಕಳೆದುಕೊಂಡ ನೋವು ಯಾವ ಮಗುವಿಗೂ ಬಾರದಿರಲಿ,” ಎಂದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ತಹಸೀಲ್ದಾರ, ಉಪ ವಿಭಾಗಾಧಿಕಾರಿ, ಹೆಸ್ಕಾಂ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ, ಆರ್ ಐ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ