ವಿಜಯಪುರ: ವಿರೋಧ ಪಕ್ಷ ನಾಯಕನ ಸ್ಥಾನವನ್ನು ಬಿಜೆಪಿಯವರು ಸೇಲ್‌ಗೆ ಇಟ್ಟಿದ್ದಾರಾ ನೋಡಿ. ಸಿಎಂ ಸ್ಥಾನವನ್ನು ಸೇಲ್‌ಗೆ ಇಟ್ಟ ಹಾಗೆ ಇದನ್ನೂ ಮಾರಾಟಕ್ಕೆ ಇಟ್ಟರಾ? ಈ ಸ್ಥಾನಕ್ಕೆ ನೂರಾರು ಕೋಟಿ ರೂಪಾಯಿಯನ್ನು ಫಿಕ್ಸ್ ಮಾಡಿದ್ದಾರಾ ಏನೋ? ಯಾರಿಗೆ ಗೊತ್ತು? ಎಂದು ಸಚಿವ ಎಂ.ಬಿ. ಪಾಟೀಲ್ (MB Patil) ವ್ಯಂಗ್ಯ ಮಾಡಿದ್ದಾರೆ.
ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲಿ ಬಿಜೆಪಿ ವಿಳಂಬ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ. ಪಾಟೀಲ್, ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ರೂಪಾಯಿ ಕೊಡಬೇಕು ಎಂದು ಅವರ ಕಡೆಯವರೇ ಹೇಳಿದ್ದರು. ಹೀಗಾಗಿ ವಿಪಕ್ಷ ನಾಯಕ ಸ್ಥಾನಕ್ಕೂ ನೂರಾರು ಕೋಟಿ ಫಿಕ್ಸ್ ಮಾಡಿದ್ದಾರಾ ಎಂಬುದು ಯಾರಿಗೆ ಗೊತ್ತು? ಎಂದು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಬಡವರ ಪರ ಇಲ್ಲ ಎಂಬ ಕೇಂದ್ರ ಪ್ರಲ್ಹಾದ್ ಜೋಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂ.ಬಿ. ಪಾಟೀಲ್, ಪ್ರಲ್ಹಾದ್ ಜೋಶಿ ಅವರಿಗೆ ಬಡವರ ಬಗ್ಗೆ ಏನು ಗೊತ್ತಿದೆ? ಅನ್ನ ಭಾಗ್ಯ ಶ್ರೀಮಂತರಿಗಾ? 200 ಯುನಿಟ್ ಶ್ರೀಮಂತರಿಗಾ? ಬಸ್ ಪಾಸ್ ಶ್ರೀಮಂತರಿಗಾ? ಯುವನಿಧಿ, ಗೃಹಲಕ್ಷ್ಮಿ ಯೋಜನೆಗಳು ಶ್ರೀಮಂತರಿಗಾ? ಜೋಶೀಯವರೇ ನಿಮ್ಮ ಘನತೆಗೆ ತಕ್ಕಂತೆ ಮಾತನಾಡಿ. ಸುಮ್ಮನೆ ಹೊಟ್ಟೆ ಉರಿ ಇಟ್ಟುಕೊಂಡು ಮಾತನಾಡಿದರೆ ಉಪಯೋಗ ಇಲ್ಲ ಎಂದು ಹೇಳಿದರು.
ಚಕ್ರತೀರ್ಥರ ಅನಾಹುತವನ್ನು ಸರಿ ಮಾಡ್ತೇವೆ
ಪಠ್ಯ ಪರಿಷ್ಕರಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ. ಪಾಟೀಲ್, ಚಿಂತಕ ರೋಹಿತ್ ಚಕ್ರತೀರ್ಥ ಮಾಡಿದ ಅನಾಹುತಗಳನ್ನು ನಾವು ಸರಿ ಮಾಡುತ್ತೇವೆ. ಪರಿಷ್ಕರಣೆಯಲ್ಲಿ ರಾಷ್ಟ್ರ ನಾಯಕರ ಪಠ್ಯ ಅಳವಡಿಕೆಯನ್ನು ಮಾಡುತ್ತೇವೆ. ಪಠ್ಯ ಪರಿಷ್ಕರಣೆ ಆಗಬೇಕು ಎನ್ನುವುದು ನನ್ನ ಆಶಯವೂ ಇದೆ. ಬಸವಾದಿ ಶರಣರು, ಡಾ. ಅಂಬೇಡ್ಕರ್, ನಾರಾಯಣಗುರು, ಕುವೆಂಪು, ವಿವೇಕಾನಂದರು, ಭಗತ್‌ಸಿಂಗ್, ಮಹಾತ್ಮ ಗಾಂಧಿ, ಸುಭಾಶ್ ಚಂದ್ರ ಬೋಸ್‌ರ ಪಠ್ಯಗಳಿಗೆ ಹೆಚ್ಚು ಒತ್ತು ಕೊಡುವ ಕೆಲಸವನ್ನು ಮಾಡುತ್ತೇವೆ. ಸಿದ್ದೇಶ್ವರ ಸ್ವಾಮೀಜಿಗಳು, ಸಿದ್ಧಗಂಗಾ ಸ್ವಾಮೀಜಿಗಳು, ಆದಿಚುಂಚನಗಿರಿ ಸ್ವಾಮೀಜಿ ಸೇರಿದಂತೆ ಅನೇಕ ಪುಣ್ಯ ಪುರುಷರ ಪಠ್ಯ ಅಳವಡಿಕೆ ಆಗಬೇಕು ಎನ್ನುವ ಆಶಯವಿದೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಮತ್ತು ಶಿಕ್ಷಣ ಸಚಿವರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: Jain muni Murder : ಜೈನಮುನಿ ಕೊಲೆಗೆ ಹಣಕಾಸು ವಿಚಾರ ಕಾರಣ; ಕೊಟ್ಟ ಹಣ ಕೇಳಿದ್ದಕ್ಕೆ ಕೊಂದ ಆಪ್ತ!
ನನ್ನ ಜಿಲ್ಲೆ ಮ್ಯಾನ್ಯುಫ್ಯಾಕ್ಚರಿಂಗ್ ಹಬ್ ಆಗಬೇಕು
ನನ್ನ ಇಲಾಖೆಯಲ್ಲಿ ನನ್ನ ಜಿಲ್ಲೆ ಮ್ಯಾನ್ಯುಫ್ಯಾಕ್ಚರಿಂಗ್ ಹಬ್ ಆಗಬೇಕು. ವಿಜಯಪುರ ವಿಮಾನ ನಿಲ್ದಾಣಕ್ಕೂ ಸಹ ನಾವು ಒತ್ತನ್ನು ನೀಡುತ್ತಲಿದ್ದೇವೆ. ಏರ್ಪೋರ್ಟ್‌ನಲ್ಲಿ ಸಹ ಬಹಳಷ್ಟು ನ್ಯೂನತೆಗಳಿವೆ. ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಾಡಬೇಕಾದ ಕೆಲಸವನ್ನು ಪಿಡಬ್ಲ್ಯೂಡಿಗೆ ಕೊಟ್ಟಿದ್ದಾರೆ. ಏಕೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದೇನೆ. ವಿಜಯಪುರ, ಶಿವಮೊಗ್ಗ ಮತ್ತು ರಾಯಚೂರು ವಿಮಾನ ನಿಲ್ದಾಣಗಳಲ್ಲಿಯೂ ಗೋಲ್ಮಾಲ್ ವಾಸನೆ ಬರುತ್ತಿದೆ. ಆದರೆ ಏರ್ಪೋರ್ಟ್ ಕೆಲಸ ನಿಲ್ಲಲ್ಲ, ಶುಕ್ರವಾರ 80 ಕೋಟಿ ರೂ. ಅನುದಾನ ಕೇಳಿದ್ದು, ಫೈಲ್ ಅನ್ನು ಮೂವ್ ಮಾಡಲಾಗಿದೆ. ಈ ವರ್ಷ ವಿಮಾನ ನಿಲ್ದಾಣ ಕಾಮಗಾರಿಯನ್ನು ಮುಗಿಸುತ್ತೇವೆ. ಇಲ್ಲಿ ಲೋಪದೋಷ ಮೇಲ್ನೋಟಕ್ಕೆ ಕಂಡುಬಂದಿದ್ದು, ಪರಿಶೀಲನೆ ನಡೆಸಲಾಗುವುದು ಎಂದು ಎಂ.ಬಿ. ಪಾಟೀಲ್ ಹೇಳಿದರು.