Site icon Vistara News

Siddaramaiah : ಕೋಲಾರದಿಂದಲೇ ಸ್ಪರ್ಧಿಸಿ; ನಾಳೆ ಸಿದ್ದರಾಮಯ್ಯ ಮನೆಗೆ ದಲಿತ, ಒಕ್ಕಲಿಗ, ಮುಸ್ಲಿಂ ನಾಯಕರ ಮುತ್ತಿಗೆ

siddaramaiah kolara

#image_title

ಕೋಲಾರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸಲಹೆ ಮೇರೆಗೆ ಸಿದ್ಧರಾಮಯ್ಯ (Siddaramaiah) ಅವರು ಕೋಲಾರದಿಂದ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂಬ ಸುದ್ದಿಗಳಿಂದ ಬೇಸತ್ತಿರುವ ಅಲ್ಲಿನ ಹಲವು ಮುಖಂಡರು ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

ಕೋಲಾರದ ದಲಿತ, ಒಕ್ಕಲಿಗ ಹಾಗು ಮುಸ್ಲಿಂ ನಾಯಕರು ಸೇರಿ ಮಾರ್ಚ್‌ 21ರಂದು ಬೆಂಗಳೂರಲ್ಲಿರುವ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ. ಈ ಬಗ್ಗೆ ಕೋಲಾರದ ಆರಾದ್ಯ ಗ್ರ್ಯಾಂಡ್ ಹೊಟೆಲ್ ನಲ್ಲಿ ಕಾಂಗ್ರೆಸ್ ಒಕ್ಕಲಿಗ ಸಮಾಜದ ನಾಯಕರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ಸಭೆಯಲ್ಲಿ ಸಿದ್ದರಾಮಯ್ಯ ಅವರು ಕೋಲಾರದಿಂದಲೇ ಸ್ಪರ್ಧೆ ಮಾಡಲೇಬೇಕೆಂಬ ಕೋರಲು ಒಕ್ಕೂರಲ ನಿರ್ಧಾರ ಮಾಡಲಾಗಿದೆ. ಅದರ ಜತೆಗೆ ಸಿದ್ದರಾಮಯ್ಯ ಅವರಿಗೆ ಕೋಲಾರದಿಂದಲೇ ಟಿಕೆಟ್‌ ನೀಡಬೇಕು ಎಂದು ಹೈಕಮಾಂಡನ್ನು ಒತ್ತಾಯಿಸಲು ನಿರ್ಧರಿಸಲಾಯಿತು. ಈ ಹೋರಾಟಕ್ಕೆ ಒಕ್ಕಲಿಗ ಸಮಾಜದಿಂದ ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಒಕ್ಕಲಿಗರಲ್ಲದೆ, ಉಳಿದ ಸಮುದಾಯದ ನಾಯಕರ ಸಭೆಯೂ ನಡೆಯಿತು.

10000 ಜನರನ್ನು ಸೇರಿಸಿ ಮುತ್ತಿಗೆ

ಮಂಗಳವಾರ ಸಿದ್ದರಾಮಯ್ಯ ಅವರ ನಿವಾಸಕ್ಕೆ ಸುಮಾರು 10 ಸಾವಿರ ಜನರನ್ನು ಸೇರಿಸಿ ಮುತ್ತಿಗೆ ಹಾಕಲು ನಿರ್ಧಾರ ಮಾಡಲಾಗಿದೆ. ನಮ್ಮ ಶಕ್ತಿ ಪ್ರದರ್ಶನವನ್ನು ನೋಡಿ ರಾಹುಲ್‌ ಗಾಂಧಿಯವರೇ ಕೋಲಾರ ಟಿಕೆಟ್‌ ನೀಡಬೇಕು, ಆ ರೀತಿ ಮಾಡುತ್ತೇವೆ ಎಂದು ನಾಯಕರು ಹೇಳಿದರು.

ಅಲ್ಲಾ ಇಲ್ಲಾ, ಎರಡೂನಾ: ಗೊಂದಲದಲ್ಲಿ ಸಿದ್ದರಾಮಯ್ಯ

ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಗೊಂದಲಕ್ಕೆ ಒಳಗಾದವರು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು. ಕಳೆದ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಯಲ್ಲಿ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಬಾದಾಮಿಯಲ್ಲಿ ಸ್ಪರ್ಧಿಸುವುದಿಲ್ಲ. ಅದು ದೂರವಾಗುತ್ತದೆ. ಹತ್ತಿರದ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಅಂತಿಮವಾಗಿ ಮುಸ್ಲಿಂ ಮತ್ತು ಅಹಿಂದ ಮತಗಳು ಹೆಚ್ಚಿರುವ ಕೋಲಾರವನ್ನು ಆಯ್ಕೆ ಮಾಡಿದ್ದರು.

ಆದರೆ, ಕೋಲಾರದಲ್ಲಿ ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಮತ್ತು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಬಣಗಳ ನಡುವಿನ ಕಿತ್ತಾಟದಿಂದ ಸಿದ್ದರಾಮಯ್ಯ ಅವರಿಗೆ ಸೋಲಾಗುವ ಅಪಾಯವಿದೆ ಎಂಬ ವರದಿ ಹೈಕಮಾಂಡ್‌ ತಲುಪಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಬೇರೆ ಸುರಕ್ಷಿತ ಕ್ಷೇತ್ರವನ್ನು ನೋಡುವಂತೆ ಸ್ವತಃ ರಾಹುಲ್‌ ಗಾಂಧಿ ಅವರೇ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಅದರಲ್ಲೂ ಮುಖ್ಯವಾಗಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ಸಲಹೆಯನ್ನು ಸ್ವತಃ ರಾಹುಲ್‌ ಗಾಂಧಿ ಅವರೇ ನೀಡಿದ್ದನ್ನು ಸಿದ್ದರಾಮಯ್ಯ ಅವರ ಪುತ್ರ, ವರುಣಾ ಕ್ಷೇತ್ರದ ಹಾಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರೇ ಖಚಿತಪಡಿಸಿದ್ದಾರೆ.

ಈ ನಡುವೆ ಸಿದ್ದರಾಮಯ್ಯ ಅವರು ಗೊಂದಲದಲ್ಲಿ ಸಿಲುಕಿದ್ದಾರೆ. ಅವರನ್ನು ಕೋಲಾರದಿಂದಲೇ ಸ್ಪರ್ಧಿಸುವಂತೆ ಒತ್ತಡ ಹೆಚ್ಚಿದೆ. ಇದರ ನಡುವೆ, ಸಿದ್ದರಾಮಯ್ಯ ಅವರು ಕೋಲಾರ ಮತ್ತು ವರುಣಾ ಎರಡೂ ಕ್ಷೇತ್ರದಿಂದ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಾರಿ ಎರಡು ಕಡೆ ನಿಲ್ಲಲು ಅವಕಾಶ ಕೊಡುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : Tipu Sultan: ಉರಿಗೌಡ-ನಂಜೇಗೌಡರಿಗೆ ಸಿಕ್ಕಿತು ಆಧಾರ್‌ ಕಾರ್ಡ್‌: ಸಿದ್ದರಾಮಯ್ಯ ಆಪ್ತರಿಂದ ಬಿಡುಗಡೆ

Exit mobile version