Site icon Vistara News

ಅಡಕೆ ಎಲೆಚುಕ್ಕಿ ರೋಗ | ಕೇಂದ್ರದ ಗಮನ ಸೆಳೆದ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ನಿಯೋಗ

areca nut news

ಬೆಂಗಳೂರು: ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿಯ ರೈತರ ಜೀವನಾಡಿ ಅಡಿಕೆ ಬೆಳೆಯು ಎಲೆ ಚುಕ್ಕೆ ರೋಗದಿಂದ ನಲುಗಿರುವ ಕುರಿತು ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ನೇತೃತ್ವದವ ನಿಯೋಗವು ಕೇಂದ್ರ ಸರ್ಕಾರದ ಗಮನ ಸೆಳೆದಿದೆ.

ಬುಧವಾರದಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಅರವರನ್ನು ಭೇಟಿಯಾದ ನಿಯೋಗ ಇದರ ನಿಯಂತ್ರಣಕ್ಕೆ ಅಗತ್ಯವಾಗಿರುವ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದೆ.

ನಿಯೋಗದಲ್ಲಿ ಕರ್ನಾಟಕ ಅಡಕೆ ಕಾರ್ಯಪಡೆಯ ಅಧ್ಯಕ್ಷ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ , ಶಾಸಕ ಹರತಾಳು ಹಾಲಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಕೃಷ್ಣ ಭಟ್ ಇದ್ದರು.

ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಎಲೆ ಚುಕ್ಕಿ ರೋಗ ಇಡೀ ತೋಟವನ್ನೇ ನಾಶ ಮಾಡುತ್ತಿರುವ ಮತ್ತು ರೋಗವು ವ್ಯಾಪಕವಾಗಿ ಹರಡುತ್ತಿರುವ ಕುರಿತು ನಿಯೋಗ ಕೃಷಿ ಸಚಿವರಿಗೆ ಮನದಟ್ಟು ಮಾಡಿಕೊಟ್ಟಿದೆ. ಈ ರೋಗದ ನಿಯಂತ್ರಣಕ್ಕೆ ಔಷಧಿ ಇನ್ನೂ ಲಭ್ಯವಾಗಿಲ್ಲ. ಇದಕ್ಕಾಗಿ ತುರ್ತಾಗಿ ಸಂಶೋಧನೆ ನಡೆಯಬೇಕಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರವು ನೆರವು ನೀಡಬೇಕೆಂದು ಕೋರಿದೆ.

ಕೇಂದ್ರದ ತೋಟಗಾರಿಕಾ ತಜ್ಞರ ತಂಡವನ್ನು ರಾಜ್ಯಕ್ಕೆ ಕಳುಹಿಸಲು ಕೃಷಿ ಸಚಿವರು ಒಪ್ಪಿದ್ದಾರೆ. ಈ ರೋಗ ನಿಯಂತ್ರಣಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಅವರು ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಸಂತ್ರಸ್ತ ಅಡಕೆ ಬೆಳೆಗಾರರಿಗೂ ನೆರವು ನೀಡಲು ಈ ಸಂದರ್ಭದಲ್ಲಿ ನಿಯೋಗ ಮನವಿ ಮಾಡಿದೆ.

ರಾಜ್ಯದ 2.15 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಈ ರೋಗವು ಅತಿ ಹೆಚ್ಚು ಅಡಕೆ ಬೆಳೆಯುವ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆವರಿಸಿದ್ದರೆ, ಉತ್ತರ ಕನ್ನಡದಲ್ಲಿಯೂ ಇತ್ತೀಚೆಗೆ ರೋಗ ಕಾಣಿಸಿಕೊಂಡಿದೆ.

ಇದನ್ನೂ ಓದಿ| ಭೂತಾನ್‌ ಅಡಕೆ; ಕೇಂದ್ರಕ್ಕೆ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ನಿರ್ಧರಿಸಿದ ಅಡಕೆ ಕಾರ್ಯಪಡೆ

Exit mobile version