Site icon Vistara News

Leaf spot disease| ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಚಿಕಿತ್ಸಾ ಮಾರ್ಗ ಪತ್ತೆಗೆ ಕ್ರಮ: ಬೊಮ್ಮಾಯಿ

ಎಲೆ ಚುಕ್ಕಿ ರೋಗ

ಚಿಕ್ಕಮಗಳೂರು: ರಾಜ್ಯದ ವಾಣಿಜ್ಯ ಬೆಳೆಯಾದ ಅಡಿಕೆಗೆ ಬಡಿದಿರುವ ಎಲೆಚುಕ್ಕೆ ರೋಗದ ನಿವಾರಣೆ ಹಾಗೂ ಹರಡದಂತೆ ಕ್ರಮ ವಹಿಸಲು ಸರ್ಕಾರ ಸಂಪೂರ್ಣ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಮಂಗಳವಾರ ಚಿಕ್ಕಮಗಳೂರಿನ ಕಡೂರಿನಲ್ಲಿರುವ ಪೊಲೀಸ್ ತರಬೇತಿ ಕೇಂದ್ರ ಹೆಲಿಪ್ಯಾಡ್‌ಗೆ ಬಂದಿಳಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದ್ದು, ಈಗಾಗಲೇ ವಿಶ್ವವಿದ್ಯಾಲಯಗಳು, ಸಂಬಂಧಪಟ್ಟ ಇಲಾಖೆ, ಕೇಂದ್ರ ಸರ್ಕಾರದ ಸಂಸ್ಥೆಗಳು ಎಲೆಚುಕ್ಕೆ ರೋಗ ಪರಿಹರಿಸಲು ಕಾರ್ಯೋನ್ಮುಖವಾಗಿವೆ. ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಔಷಧ ಸಿಂಪಡಣೆಗೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಎಲೆ ಚುಕ್ಕೆ ರೋಗದ ಮೂಲ ಕಾರಣ ಹಾಗೂ ಔಷಧಿಯ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿ, ಚಿಕಿತ್ಸಾ ಮಾರ್ಗ ಕಂಡುಹಿಡಿದರೆ ಅದರಂತೆ ಸರ್ಕಾರ ಕ್ರಮಕೈಗೊಳ್ಳುವುದು. ಈ ರೋಗ ದೊಡ್ಡ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.

ಒಂದೂವರೆ ತಿಂಗಳೊಳಗೆ ಬೆಳೆ ಪರಿಹಾರ ನೀಡಿದೆ
ಬರುವ ದಿನಗಳಲ್ಲಿ ಮಲೆನಾಡು ಹಾಗೂ ಬಯಲು ಸೀಮೆಗಳಲ್ಲಿ ಈರುಳ್ಳಿ ಸೇರಿದಂತೆ ಹಲವು ಬೆಳೆಗಳ ನಾಶಕ್ಕೆ ಪರಿಹಾರ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಸರ್ಕಾರ ಈಗಾಗಲೇ ದುಪ್ಪಟ್ಟು ಪರಿಹಾರ ನೀಡುತ್ತಿದೆ. ಈಗಾಗಲೇ 99 ಕೋಟಿ ರೂ.ಗಳಷ್ಟು ಬೆಳೆ ಪರಿಹಾರವನ್ನು ವಿತರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಜಿಲ್ಲಾಡಳಿತ ಬೆಳೆ ನಾಶಕ್ಕೆ ಜಂಟಿ ಸರ್ವೇ ಮಾಡಿ ವರದಿ ನೀಡಿದರೆ, ಅದಕ್ಕೂ ಸರ್ಕಾರ ಬೆಳೆಪರಿಹಾರ ನೀಡಲಿದೆ. ಈ ಹಿಂದೆ ಬೆಳೆನಾಶವಾಗಿ ಒಂದು ವರ್ಷವಾದ ನಂತರ ಪರಿಹಾರ ದೊರೆಯುತ್ತಿತ್ತು. ಆದರೆ ಈಗ ಸ್ಪಂದನಾಶೀಲ ಸರ್ಕಾರವಿರುವುದರಿಂದ ರೈತರ ರಕ್ಷಣೆ ಧಾವಿಸಲಾಗಿದ್ದು, ಒಂದೂವರೆ ತಿಂಗಳೊಳಗೆ ಬೆಳೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | ಅಡಿಕೆ ಎಲೆ ಚುಕ್ಕಿ ರೋಗ | ಮಲೆನಾಡಿನ ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಲಿದೆ ತಜ್ಞರ ತಂಡ

Exit mobile version