ಚಿಕ್ಕಮಗಳೂರು: ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆ ಚುಕ್ಕಿ ರೋಗ ತಗುಲಿದ್ದು, ಇದರ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದ ನಾಲ್ಕೂ ಜಿಲ್ಲೆಗಳಿಗೆ ಈ ಮೊತ್ತವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹರಿಹರಪುರ ಹೆಲಿಪ್ಯಾಡ್‌ನಲ್ಲಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಸರ್ಕಾರದ ವತಿಯಿಂದ ಈಗಾಗಲೇ ವಿಶ್ವವಿದ್ಯಾಲಯದ ತಂಡವನ್ನು ಕಳುಹಿಸಿ ಅಧ್ಯಯನ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ತಜ್ಞರು ಕೂಡ ಚಿಕ್ಕಮಗಳೂರು ಬಂದು ಅಧ್ಯಯನ ಮಾಡಿದ್ದಾರೆ. ನಿರಂತರವಾಗಿ ಮಳೆ ಇರುವುದರಿಂದ ಹಾಗೂ ಗಾಳಿಯಿಂದ ಒಂದಕ್ಕೊಂದು ಎಂಬಂತೆ ಹರಡುತ್ತಿದೆ. ಅದಕ್ಕಾಗಿ ಫಂಗಸ್ ನಿವಾರಣೆಗೆ ಔಷಧಿ ಸಿಂಪಡನೆ ಮಾಡಲಾಗುವುದು. ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ವಿಜ್ಞಾನಿಗಳು ಶಿಫಾರಸು ಮಾಡುವ ಕ್ರಮಗಳನ್ನು ಕೂಡಲೇ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ | JDSನಲ್ಲಿ ಈಗಲೂ ದೇವೇಗೌಡ, ಮುಂದೆಯೂ ದೇವೇಗೌಡ; ಅದು ಹೆಬ್ಬೆಟ್ಟು ಪಕ್ಷ: HDK ಮಾತಿಗೆ ಆರ್. ಅಶೋಕ್ ತಿರುಗೇಟು
ಶಾಸಕ ಕುಮಾರಸ್ವಾಮಿ ಅವರ ಮೇಲೆ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ಈಗಾಗಲೇ ಮಾತನಾಡಿದ್ದೇನೆ. ಎಲ್ಲ ರೀತಿಯ ರಕ್ಷಣೆ ನೀಡಲು ಹಾಗೂ ತನಿಖೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಕೇಂದ್ರದ ಕದ ತಟ್ಟಿದ್ದ ಯಡಿಯೂರಪ್ಪ ನಿಯೋಗ
ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿಯ ರೈತರ ಜೀವನಾಡಿ ಅಡಿಕೆ ಬೆಳೆಯು ಎಲೆ ಚುಕ್ಕೆ ರೋಗದಿಂದ ನಲುಗಿರುವ ಕುರಿತು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ನಿಯೋಗವು ಕಳೆದ ಅಕ್ಟೋಬರ್ ೧೯ರಂದು ಕೇಂದ್ರ ಸರ್ಕಾರದ ಗಮನ ಸೆಳೆದಿತ್ತು.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಅರವರನ್ನು ಭೇಟಿಯಾಗಿದ್ದ ನಿಯೋಗವು ಇದರ ನಿಯಂತ್ರಣಕ್ಕೆ ಅಗತ್ಯವಾಗಿರುವ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿತ್ತು. ನಿಯೋಗದಲ್ಲಿ ಕರ್ನಾಟಕ ಅಡಕೆ ಕಾರ್ಯಪಡೆಯ ಅಧ್ಯಕ್ಷ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ , ಶಾಸಕ ಹರತಾಳು ಹಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಕೃಷ್ಣ ಭಟ್ ಇದ್ದರು.
ಇದನ್ನೂ ಓದಿ | Border Dispute | ಮಹಾ ಪುಂಡಾಟಿಕೆ ವಿರುದ್ಧ ಕರವೇ ಪ್ರತಿಭಟನೆ, ಎಂಇಎಸ್ ಬ್ಯಾನ್‌ಗೆ ಆಗ್ರಹ; ಶಿಂಧೆ, ಫಡ್ನವಿಸ್ ಪ್ರತಿಕೃತಿ ದಹನ
ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಎಲೆ ಚುಕ್ಕಿ ರೋಗ ಇಡೀ ತೋಟವನ್ನೇ ನಾಶ ಮಾಡುತ್ತಿರುವ ಮತ್ತು ರೋಗವು ವ್ಯಾಪಕವಾಗಿ ಹರಡುತ್ತಿರುವ ಕುರಿತು ನಿಯೋಗ ಕೃಷಿ ಸಚಿವರಿಗೆ ಮನದಟ್ಟು ಮಾಡಿಕೊಟ್ಟಿದೆ. ಈ ರೋಗದ ನಿಯಂತ್ರಣಕ್ಕೆ ಔಷಧಿ ಇನ್ನೂ ಲಭ್ಯವಾಗಿಲ್ಲ. ಇದಕ್ಕಾಗಿ ತುರ್ತಾಗಿ ಸಂಶೋಧನೆ ನಡೆಯಬೇಕಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರವು ನೆರವು ನೀಡಬೇಕೆಂದು ಕೋರಿತ್ತು.
ಕೇಂದ್ರದ ತೋಟಗಾರಿಕಾ ತಜ್ಞರ ತಂಡವನ್ನು ರಾಜ್ಯಕ್ಕೆ ಕಳುಹಿಸಲು ಕೃಷಿ ಸಚಿವರು ಒಪ್ಪಿಗೆ ನೀಡಿದ್ದು, ಅದರಂತೆ ಏಳು ಮಂದಿಯ ತಜ್ಞರ ತಂಡವನ್ನು ನೇಮಿಸಿ ಕಳುಹಿಸಿತ್ತು. ಈ ಸಮಿತಿ ಸದಸ್ಯರು ತಜ್ಞರ ಸಮಿತಿಯು ಜಿಲ್ಲೆಯ ತೀರ್ಥಹಳ್ಳಿಗೆ ಆಗಮಿಸಿ ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಕಲೆಹಾಕಿದ್ದವು.
ಈ ತಜ್ಞರ ತಂಡದೊಂದಿಗೆ ಸಭೆ ನಡೆಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಕೊರೊನಾಕ್ಕೆ ಲಸಿಕೆ ಕಂಡು ಹಿಡಿದಂತೆಯೇ ಅತಿ ಶೀಘ್ರವಾಗಿ ಈ ಎಲೆ ಚುಕ್ಕಿ ರೋಗದ ನಿಯಂತ್ರಣಕ್ಕೂ ಔಷಧಿ ಕಂಡು ಹಿಡಿಯಬೇಕೆಂದು ತಜ್ಞರ ತಂಡಕ್ಕೆ ಮನವಿ ಮಾಡಿದ್ದರು.
ಇದನ್ನೂ ಓದಿ | JDSನಲ್ಲಿ ಈಗಲೂ ದೇವೇಗೌಡ, ಮುಂದೆಯೂ ದೇವೇಗೌಡ; ಅದು ಹೆಬ್ಬೆಟ್ಟು ಪಕ್ಷ: HDK ಮಾತಿಗೆ ಆರ್. ಅಶೋಕ್ ತಿರುಗೇಟು
ರಾಜ್ಯದಲ್ಲಿ ಒಟ್ಟು 45,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹರಡಿದೆ. ಕೇಂದ್ರ ಸರ್ಕಾರ 50 ಲಕ್ಷ ರೂ. ಸಂಶೋಧನೆಗಾಗಿ ಬಿಡುಗಡೆ ಮಾಡಿದೆ. ಅಡಿಕೆ ಟಾಸ್ಕ್ ಫೋರ್ಸ್ ವತಿಯಿಂದ 3 ಕೋಟಿಯನ್ನು ಸಂಶೋಧನೆಗಾಗಿ ನೀಡಲಾಗುವುದು. ಈ ರೋಗಕ್ಕೆ ಕೂಡಲೇ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಮತ್ತು ದೀರ್ಘಕಾಲಿಕ ಪರಿಹಾರವನ್ನು ತಜ್ಞರು ಸಂಶೋಧಿಸಿ ಸೂಚಿಸಲಿದ್ದಾರೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದರು.
೫ ಜಿಲ್ಲೆಗಳಿಗೆ ಹಬ್ಬಿರುವ ಎಲೆಚುಕ್ಕೆ ರೋಗ
ರಾಜ್ಯದ 2.15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಈ ರೋಗವು ಅತಿ ಹೆಚ್ಚು ಅಡಕೆ ಬೆಳೆಯುವ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆವರಿಸಿದ್ದರೆ, ಉತ್ತರ ಕನ್ನಡದಲ್ಲಿಯೂ ಇತ್ತೀಚೆಗೆ ರೋಗ ಕಾಣಿಸಿಕೊಂಡಿದೆ.
ಇದನ್ನೂ ಓದಿ | ಕಾಫಿ ನಾಡಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ಪ್ರತಿಭಟನೆಯ ಬಿಸಿ: ಹಲವರು ಪೊಲೀಸ್ ವಶಕ್ಕೆ