ಬೆಂಗಳೂರು: ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡದ ಹಿನ್ನೆಲೆಯಲ್ಲಿ ಬಿಜೆಪಿಗೆ ಲೀಗಲ್ ನೋಟಿಸ್ ನೀಡಲಾಗಿದೆ. ಅಷ್ಟೇ ಅಲ್ಲದೇ ನೋಟಿಸ್ ತಲುಪಿದ ಹತ್ತು ದಿನಗಳ ಒಳಗಾಗಿ ವಿರೋಧ ಪಕ್ಷದ ನಾಯಕನನ್ನು (Karnataka Politics) ಆಯ್ಕೆ ಮಾಡಲು ಸೂಚಿಸುವಂತೆ ಹೈಕೋರ್ಟ್ ಹಿರಿಯ ವಕೀಲರೊಬ್ಬರು, ರಾಷ್ಟ್ರಪತಿ, ಸ್ಪೀಕರ್, ರಾಜ್ಯಪಾಲರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ನಡೆದು ನಾಲ್ಕು ತಿಂಗಳಾದರೂ ಇನ್ನೂ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಆಗದ ಹಿನ್ನೆಲೆಯಲ್ಲಿ ಹೈಕೋರ್ಟ್ ಹಿರಿಯ ವಕೀಲ ಅಮೃತೇಶ್ ಎಂಬುವವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ವಿರೋಧ ಪಕ್ಷದ ನಾಯಕನ ಆಯ್ಕೆಯಾಗದಿರುವುದು ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿ ಮಾಡುತ್ತಿದೆ. ನೋಟಿಸ್ ತಲುಪಿದ ಹತ್ತು ದಿನಗಳ ಒಳಗಾಗಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿರೋಧ ಪಕ್ಷದ ನಾಯಕನಿಗೆ ಅವರದೇ ಆದ ಕರ್ತವ್ಯಗಳಿವೆ. ಹೀಗಾಗಿ ಕೂಡಲೇ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಬಿಜೆಪಿ ಸೂಚಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸ್ಪೀಕರ್ ಯು.ಟಿ. ಖಾದರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸರ್ಕಾರದ ಮುಖ್ಯಕಾರ್ಯದರ್ಶಿಗೆ ಲೀಗಲ್ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ | BJP Politics : ಪಕ್ಷ ಸಂಘಟನೆ ಜತೆಗೆ ಅತೃಪ್ತಿ ಶಮನಕ್ಕೆ ಇಳಿದ ಬಿಎಸ್‌ವೈ; ಸಮಾಧಾನಗೊಂಡ್ರಾ ರೇಣುಕಾ, ಮುನೇನಕೊಪ್ಪ?
ವಿಪಕ್ಷ ನಾಯಕ ಸ್ಥಾನ ಪಡೆಯಲು ಬಿಜೆಪಿ ಅರ್ಹ ಸ್ಥಾನಗಳನ್ನು ಗೆದ್ದಿದೆ. ಆದರೆ, ನೇಮಕ ತಡ ಮಾಡುತ್ತಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಹತ್ತು ದಿನಗಳ ಒಳಗೆ ವಿಪಕ್ಷ ನಾಯಕ ನೇಮಕ ಮಾಡಬೇಕು. ಇಲ್ಲದಿದ್ದರೆ ಈ ಬಗ್ಗೆ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹಿರಿಯ ವಕೀಲ ಅಮೃತೇಶ್ ಎಚ್ಚರಿಕೆ ನೀಡಿದ್ದಾರೆ.