ವಿಧಾನ ಪರಿಷತ್: ಇದ್ದಕ್ಕಿದ್ದಂತೆ ಗಡಿ ವಿವಾದವನ್ನು ಕೆದಕಿರುವ ಮಹಾರಾಷ್ಟ್ರದ ಕುರಿತು ವಿಧಾನ ಪರಿಷತ್‌ನಲ್ಲಿ ಚರ್ಚೆ ನಡೆದು, ಸರ್ವ ಪಕ್ಷಗಳೂ ಒಗ್ಗಟ್ಟಿನಿಂದ ಈ ವಿಚಾರವನ್ನು ವಿರೋಧಿಸುವ ಕುರಿತು ಒಮ್ಮತ ಮೂಡಿದೆ.
ಮಂಗಳವಾರ ಮದ್ಯಾಹ್ನ ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆಯೇ, ಗಡಿ ವಿಚಾರವಾಗಿ ನಿಳುವಳಿ ಸೂಚನೆಯನ್ನು ವಿಪಕ್ಷ ನಾಯಕ ಬಿ.ಕೆ. ಹರಿಪಸ್ರಾದ್ ಮಂಡಿಸಿದರು. ಕನ್ನಡ ಹಾಗೂ ಮರಾಠಿ ಮಾತನಾಡುವವರು ಭಾರತೀಯರು. ಈಗ ತ್ರಿಬಲ್ ಇಂಜಿನ್ ಸರ್ಕಾರ ಇದೆ. ಆದರೂ ಸಮಸ್ಯೆ ಆಗುತ್ತಿರುವುದು ನೋಡಿದರೆ, ಯಾವೋದು ರಾಜಕೀಯ ಕಾಣುತ್ತಾ ಇದೆ.
ಇಲ್ಲಿಂದ ಹೋಗುವ ಬಸ್‌ಗಳಿಗೆ ಮಸಿ ಬಳೆಯುತ್ತಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಾಮೇಳಾವ ನಡೆಸಲಾಗುತ್ತಿದೆ. ಇದರ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು ಹರಿಪಸ್ರಾದ್ ಕೋರಿದರು.
ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಮಾತನಾಡಿ, ಗಡಿ ವಿವಾದದ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು. ಮಹಾಜನ್ ವರದಿ ಅಂತಿಮವಾಗಿದೆ. ಇದರಿಂದ 65 ಹಳ್ಳಿಗಳು ರಾಜ್ಯಕ್ಕೆ ಸೇರುತ್ತವೆ. ಸರ್ಕಾರ ಗಡಿ ವಿಚಾರ ವಿವಾದ ಬಂದಾಗ ಎಚ್ಚೆತ್ತುಕೊಂಡಿಲ್ಲ. ತಂಟೆಗಳು ಆಗಾಗ ನಡೆಯುತ್ತವೆ, ಇದರಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಸಚಿವ ಎಸ್.ಟಿ ಸೋಮಶೇಖರ್, ನಿಳುವಳಿ ಸೂಚನೆ ಚರ್ಚೆಗೆ ಸರ್ಕಾರ ಸಿದ್ದವಾಗಿದೆ. ಆದರೆ ಇದು ಸೂಕ್ಷ್ಮ ವಿಚಾರ. ವಿಚಾರ ಕೋರ್ಟ್‌ನಲ್ಲಿದೆ. ಅದಕ್ಕೆ ದಕ್ಕೆಯಾಗದೆ ಇರುವ ರೀತಿಯಲ್ಲಿ ಚರ್ಚೆ ಮಾಡಿದರೆ ನಾವು ಸಿದ್ಧ. ನಿಮ್ಮ ವಿವೇಚನೆಗೆ ಬಿಟ್ಟಿದ್ದು ಎಂದರು.
ಇತಿಮಿತಿಯಲ್ಲೇ ಮಾತನಾಡುತ್ತೇವೆ ಎಂದು ಸದಸ್ಯರು ಹೇಳಿದ ನಂತರ ಚರ್ಚೆಗೆ ಅವಕಾಶ ನೀಡಲಾಯಿತು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರಕರಣ ವಿಚಾರಣೆಗೆ ಬಂದಿದೆ ಎಂದು ಮಹಾರಾಷ್ಟ್ರದ ಸಿಎಂ ಹೇಳಿದಾಗ ಗಂಭೀರವಾಗಿ ಪರಿಗಣಿಸಿ ಸಭೆ ನಡೆಸಿದೆವು. ಅವರ ಎಲ್ಲ ಹೇಳಿಕೆಗೆ ತೀಕ್ಷ್ಣ ಉತ್ತರ ನೀಡಿದ್ದೇವೆ. ಅವರ ಸಚಿವರು ಬರುತ್ತಾರೆ ಎಂದಾಗ, ಬರದಂತೆ ನೋಡಿಕೊಳ್ಳಿ ಎಂದು ಅಲ್ಲಿನ ಮುಖ್ಯ ಕಾರ್ಯದರ್ಶಿಗೆ ಹೇಳಿದೆವು.
ಕಾನೂನು ಸುವ್ಯವಸ್ಥೆಗೆ ಭಂಗ ಆಗುತ್ತದೆ ಎಂದು ತಿಳಿಸಿದೆವು. 144 ಸೆಕ್ಷನ್ ಹಾಕಿ ಬಂದ್ ಮಾಡಿದೆವು. ಎಂಇಎಸ್, ಶಿವಸೇನ ಇದರಿಂದ ಗಲಾಟೆ ಮಾಡಿದವು. ಎರಡೂ ಕಡೆ ಉದ್ವೇಗ ವಾತಾವರಣ ಇದ್ದಾಗ ಗೃಹಸಚಿವರು ಕರೆ ಮಾಡಿದರು. ನಮ್ಮ ಕಡೆಯಿಂದ ಯಾವುದೇ ಹೇಳಿಕೆ ನೀಡಿಲ್ಲ. ನಾವು ಸ್ಟೇಟ್‌ಮೆಂಟ್ ನೀಡಿಲ್ಲ ಎಂದು ತಿಳಿಸಿದೆವು.
ಇದನ್ನೂ ಓದಿ | ವಿಸ್ತಾರ Money Guide | ಮ್ಯೂಚುಯಲ್ ಫಂಡ್ ಹೂಡಿಕೆ ಹೇಗೆ? ಎಷ್ಟು ಹೂಡಿಕೆ ಮಾಡಬಹುದು?
ಆ ಸಭೆ ನಡೆದಿದ್ದೆ ಹತ್ತು ಹದಿನೈದು ನಿಮಿಷ. ಭಾರತದ ಗೃಹಸಚಿವರು ಕರೆದಾಗ ಹೋಗಲೇಬೇಕು. ಈ ಸಮಸ್ಯೆಗೆ ಸಂವಿಧಾನ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪರಿಹಾರ ಪಡೆಯಬೇಕು ೆಂದು ಹೇಳಿದರು. ಎರಡೂ ಕಡೆ ಶಾಂತಿ ಕಾಪಾಡಿ, ಯಾವುದೇ ಪ್ರವಾಸಿಗರಿಗೆ, ವ್ಯಾಪಾರಿಗಳಿಗೆ ತೊಂದರೆ ಆಗಬಾರದು ಎಂದು ಸ್ಪಷ್ಟವಾಗಿ ಹೇಳಿದರು.
ಯಾಔಉದೇ ಸಮಸ್ಯೆ ಆಗದಂತೆ ಕಾಪಾಡಲು ಮೂರು ಜನರ ಸಮಿತಿ ಮಾಡಲಾಗಿದೆ. ಆ ಕಡೆಯಿಂದಲೇ ಪ್ರಚೋದನೆ ಆಗುತ್ತಿದೆ ಎಂದು ಸಭೆಯಲ್ಲಿ ಹೇಳಿದ್ದೇವೆ. ಗಡಿ ಭಾಗದ ಆಚೆ ಇರುವ ಕನ್ನಡಿಗರ ರಕ್ಷಣೆ ಆಗಬೇಕಿದೆ ಎಂದುಮಾತನಾಡಿದ್ದೇವೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಬೊಮ್ಮಾಯಿ, ಈ ಹಿಂದೆ ಒಮ್ಮೆ ಶರದ್ ಪವಾರ್ ಬಂದಾಗ ಯಾರ ಮನೆಯಲ್ಲಿ ಇದ್ದರು ಗೊತ್ತಿದೆ. ಹಿಂದೆ ಅವರು ಇಲ್ಲಿಗೆ ಬಂದು ಭಾಷಣ ಮಾಡಿದ್ದರು. ಈಗ ಅದಕ್ಕೆಲ್ಲಾ ಅವಕಾಶ ನೀಡಿಲ್ಲ. ಮಹಾಮೇಳ ನಡೆಸುವುದಕ್ಕೆ ಬಿಟ್ಟಿಲ್ಲ ಸಚಿವರು, ಸಂಸದರು ಗಡಿ ಪ್ರವೇಶ ಮಾಡುವುದಕ್ಕೆ ಬಿಟ್ಟಿಲ್ಲ ಎಂದರು.
ಮಧ್ಯ ಪ್ರವೇಶ ಮಾಡಿದ ಸಿದ್ದರಾಮಯ್ಯ, ಒಂದು ರಾಜ್ಯದವರು ಇನ್ನೊಂದು ರಾಜ್ಯಕ್ಕೆ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ ಆದರೆ ಮಹಾರಾಷ್ಟ್ರದವರ ಉದ್ದೇಶ ಒಳ್ಳೆಯದಿಲ್ಲ ಎಂಬ ಕಾರಣಕ್ಕೆ ಅವರನ್ನು ತಡೆಯಬೇಕಾಗಿದೆ. ಇಲ್ಲಿ ಬಂದು ಎಂಇಎಸ್ ನವರೊಂದಿಗೆ ಸಭೆ ನಡೆಸಿ ಕಿತಾಪಕಿ ಮಾಡಲು ಬರುತ್ತೇವೆ ಎಂದರೆ ಅವರನ್ನು ಸುಮ್ಮನೆ ಒಳಗೆ ಬಿಡಲಾಗುತ್ತದಾ? ಮಹಾರಾಷ್ಟ್ರ ಸರ್ಕಾರ ಸರ್ವಪಕ್ಷ ಸಭೆ ಮಾಡಿದೆ, ರಾಜ್ಯದಲ್ಲೂ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆಯುವುದಾಗಿ ಹೇಳಿ ಕರೆಯಲಿಲ್ಲ, ಅಮಿತ್ ಶಾ ಅವರ ಭೇಟಿ ಮಾಡುವ ಮೊದಲು ರಾಜ್ಯದ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದರೆ ಇನ್ನಷ್ಟು ಶಕ್ತಿ ಬರುತ್ತಿತ್ತು, ಸರ್ಕಾರದ ಜೊತೆ ನಾವಿದ್ದೇವೆ ಎಂಬ ಧೈರ್ಯ ತುಂಬುತ್ತಿದ್ದೆವು ಎಂದರು.
ಇದಕ್ಕೆ ತಲೆದೂಗಿದ ಬೊಮ್ಮಾಯಿ, ನೀವು ಹೇಳುವುದು ಸರಿ. ಸರ್ವ ಪಕ್ಷ ಸಭೆ ಕರೆದಿದ್ದರೆ ನನಗೆ ಇನ್ನೂ ಹೆಚ್ಚು ಬಲ ಬರುತ್ತಿತ್ತು. ಒಂದು ದಿನ ಮೊದಲು ಸಭೆಗೆ ಬರುವಂತೆ ಅಮಿತ್ ಶಾ ಸೂಚಿಸಿದ್ದರಿಂದ ಕರೆಯಲು ಆಗಲಿಲ್ಲ. ಬುಧವಾರ ಸರ್ಕಾರದ ಉತ್ತರ ಕೊಡುವಾಗ ಈ ಕುರಿತು ನಿರ್ಣಯ ಪಾಸ್ ಮಾಡಿ ಕಳಿಸೋಣ ಎಂದರು. ಇದಕ್ಕೆ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದರು. ಗಡಿ ವಿಚಾರದಲ್ಲಿ ರಾಜಕೀಯ ಇಲ್ಲ. ಮಹಾರಾಷ್ಟ್ರಕ್ಕೆ ಒಂದಿಂಚೂ ಜಾಗ ಬಿಡುವುದಿಲ್ಲ ಎಂದು ನಾಯಕರು ಹೇಳಿದರು.
ಇದನ್ನೂ ಓದಿ | ಹಸುಗೂಸಿನೊಂದಿಗೆ ಚಳಿಗಾಲದ ಅಧಿವೇಶನಕ್ಕೆ ಬಂದ ಮಹಾರಾಷ್ಟ್ರ ಶಾಸಕಿ; ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಶಿಂಧೆ