ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Election 2023) ಕಾವು ದಿನೇದಿನೆ ಜಾಸ್ತಿಯಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಇನ್ನಿಲ್ಲದ ಪ್ರಚಾರ ಕೈಗೊಳ್ಳುತ್ತಿವೆ. ಇದರ ಬೆನ್ನಲ್ಲೇ ಮೂರೂ ಪಕ್ಷಗಳ ನಾಯಕರ ಮಧ್ಯೆ ವಾಗ್ವಾದ, ಟೀಕೆ, ಪ್ರತ್ಯುತ್ತರ, ವ್ಯಂಗ್ಯ, ಕಾಲೆಳೆಯುವಿಕೆ ಶುರುವಾಗಿದೆ. ಪರಿಸ್ಥಿತಿ ಹೀಗಿರುವ ಮಧ್ಯೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪರ್ಧಿಸುವ ಕ್ಷೇತ್ರದ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆದ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮಾಡಿದ ಟೀಕೆಗೆ ರಾಜ್ಯಸಭೆ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ ತಿರುಗೇಟು ನೀಡಿದ್ದಾರೆ.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಲು ಇಷ್ಟವಿಲ್ಲ’ ಎಂದು ಸುರ್ಜೇವಾಲಾ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಲೆಹರ್ ಸಿಂಗ್, “ಸಿದ್ದರಾಮಯ್ಯನವರು ಬಾದಾಮಿ, ಚಾಮುಂಡೇಶ್ವರಿ ಹಾಗೂ ಕೋಲಾರದಿಂದ ಏಕೆ ಪಲಾಯನ ಮಾಡಿದರು ಎಂದು ವಿವರಿಸುವಿರಾ? ಕ್ಷೇತ್ರವೇ ಇರದ ಸಿದ್ದರಾಮಯ್ಯನವರು ನಿಮಗೆ ಮಾಸ್ ಲೀಡರ್. ಇನ್ನು ರಾಹುಲ್ ಗಾಂಧಿ ಅವರು ವಯನಾಡಿಗೆ ಓಡಿ ಹೋಗಿದ್ದೇಕೆ? ಅಷ್ಟಕ್ಕೂ, ನೀವು ಹರಿಯಾಣದಲ್ಲಿ ಸೋತ ಕ್ಷೇತ್ರದ ಹೆಸರು ಹೇಳುವಿರಾ? ಕಾಂಗ್ರೆಸ್ ಚುನಾವಣೆಗಳ ಮೇಲೆ ಚುನಾವಣೆಗಳಲ್ಲಿ ಸೋತಿದೆ. ಆದರೂ, ಅದು ಮೂರ್ಖರ ಸಾಮ್ರಾಜ್ಯದಲ್ಲಿಯೇ ಇರುತ್ತದೆ” ಎಂದು ಹೇಳಿದ್ದಾರೆ.
ಸುರ್ಜೇವಾಲಾ ಹೇಳಿದ್ದೇನು?
ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿದ ರಣದೀಪ್ ಸುರ್ಜೇವಾಲಾ, “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸುತ್ತಿಲ್ಲ. ಕರ್ನಾಟಕ ಸರ್ಕಾರದ ಸಚಿವರು ಕೂಡ ಕ್ಷೇತ್ರ ಬದಲಾವಣೆಯ ಲೆಕ್ಕದಲ್ಲಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ. ಯಾರೂ ಚುನಾವಣೆ ಸ್ಪರ್ಧಿಸಲು ಆಗುತ್ತಿಲ್ಲ. ಹಾಗಾಗಿಯೇ, ರೌಡಿ ಶೀಟರ್‌ಗಳು, ಸಿನಿಮಾ ನಟರನ್ನು ಅವರು ಚುನಾವಣೆಗೆ ಬಳಸುತ್ತಿದ್ದಾರೆ” ಎಂದು ಹೇಳಿದರು.
ಲೆಹರ್ ಸಿಂಗ್ ತಿರುಗೇಟು
“ಶೇ.40ರಷ್ಟು ಕಮಿಷನ್ ಮೂಲಕ ಕರ್ನಾಟಕವನ್ನು ಲೂಟಿ ಮಾಡಲಾಗಿದೆ. ಪಿಎಸ್‌ಐ, ಅಸಿಸ್ಟಂಟ್ ಪ್ರೊಫೆಸರ್, ಅಸಿಸ್ಟಂಟ್ ಎಂಜಿನಿಯರ್, ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಹಗರಣಗಳ ಮೂಲಕ ಯುವಕರ ಭವಿಷ್ಯವನ್ನು ಬಿಜೆಪಿ ಹಾಳು ಮಾಡಿದೆ. ಈಗ ಮೀಸಲಾತಿ ಹೆಸರಿನಲ್ಲಿ ಲಿಂಗಾಯತರು, ಒಕ್ಕಲಿಗರು, ಎಸ್‌ಸಿ, ಎಸ್‌ಟಿ ಸೇರಿ ಎಲ್ಲ ಸಮುದಾಯಗಳಿಗೆ ಬಿಜೆಪಿ ಅವಮಾನ ಮಾಡಿದೆ. ಇಷ್ಟಾದರೂ, ಹಲವು ವಿಷಯಗಳ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ” ಎಂದು ಟೀಕಿಸಿದರು.
ಇದನ್ನೂ ಓದಿ: BJP Karnataka: ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ ಸಚಿವ ಎಂ.ಟಿ.ಬಿ. ನಾಗರಾಜ್!