ಬೆಂಗಳೂರು: ರಾಜಧಾನಿಯ ಜನವಸತಿ ಪ್ರದೇಶಗಳಲ್ಲಿ ಪದೇಪದೆ ಚಿರತೆಗಳು (Leopard found) ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ಪ್ರತ್ಯೇಕ ಕ್ಷಿಪ್ರ ಚಿರತೆ ಕಾರ್ಯಪಡೆ (Leopard Taskforce) ರಚಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Forest Minister EShwar Khandre) ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಒಂದೇ ವಾರದಲ್ಲಿ ಎರಡು ಕಡೆ ಚಿರತೆಗಳ ಓಡಾಟ ಕಂಡುಬಂದಿದೆ. ಬೊಮ್ಮನಹಳ್ಳಿ ಬಳಿ ಒಂದು ಚಿರತೆಯನ್ನು ಸೆರೆಹಿಡಿಯಲಾಗಿದೆ. ಅದು ಕಾರ್ಯಾಚರಣೆಯ ವೇಳೆ ಗುಂಡೇಟಿನಿಂದ ಪ್ರಾಣವನ್ನೇ ಕಳೆದುಕೊಂಡಿತ್ತು. ಬಳಿಕ ಎಲೆಕ್ಟ್ರಾನಿಕ್ ಸಿಟಿ ಸಮೀಪ ಇನ್ನೊಂದು ಚಿರತೆ (Leopard Attack) ಕಂಡಿದೆ. ಹೀಗಾಗಿ ಚಿರತೆ ಕಾರ್ಯಪಡೆ ರಚನೆಗೆ ಸರ್ಕಾರ ಮುಂದಾಗಿದೆ.
ಈ ಬಾರಿ ಮಳೆಯ ಅಭಾವ ಇರುವ ಹಿನ್ನೆಲೆಯಲ್ಲಿ ಆಹಾರ ಹುಡುಕಿಕೊಂಡು ವನ್ಯ ಮೃಗಗಳು ಕಾಡಿನಿಂದ ನಾಡಿಗೆ ಹೆಚ್ಚಾಗಿ ಬರುತ್ತಿವೆ. ಅದರಲ್ಲೂ ಬೆಂಗಳೂರು ನಗರದ ಹೊರವಲಯದಲ್ಲಿ ಕಾಡು ಮತ್ತು ಬೆಟ್ಟಗುಡ್ಡ ಇರುವ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ. ಕೂಡಲೇ ಬೆಂಗಳೂರಿನಲ್ಲಿ ಒಂದು ಕ್ಷಿಪ್ರ ಚಿರತೆ ಕಾರ್ಯಪಡೆ ರಚಿಸಿ, ವನ್ಯಮೃಗಗಳು ನಾಡಿಗೆ ಬಂದರೆ ಕೂಡಲೇ ಸೆರೆ ಹಿಡಿದು ಕಾಡಿಗೆ ಅಥವಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ಕಾರ್ಯವನ್ನು ತ್ವರಿತವಾಗಿ ಮಾಡುವಂತೆ ಸೂಚನೆ ನೀಡಿದ್ದಾರೆ.
ಈಗಾಗಲೇ ಹಾಲಿ ಇದ್ದ 5 ಆನೆ ಕ್ಷಿಪ್ರಕಾರ್ಯಪಡೆಗಳ ಜೊತೆಗೆ ಬೆಂಗಳೂರು (ಬನ್ನೇರುಘಟ್ಟ) ಮತ್ತು ರಾಮನಗರದಲ್ಲಿ ತಲಾ ಒಂದರಂತೆ ಎರಡು ಕಾರ್ಯಪಡೆಯನ್ನು ಹೆಚ್ಚುವರಿಯಾಗಿ ರಚಿಸಲಾಗಿದೆ. ಅದೇ ರೀತಿ ಹೆಚ್ಚು ಕಾಡಿರುವ ಮತ್ತು ಚಿರತೆಗಳು, ಕರಡಿಗಳು ಇರುವ ಬೆಟ್ಟಗುಡ್ಡದ ಪ್ರದೇಶದಲ್ಲಿ ಕನಿಷ್ಠ 3 ಜಿಲ್ಲೆಗೆ ಒಂದರಂತೆ ಕ್ಷಿಪ್ರ ಕಾರ್ಯಪಡೆ ರಚಿಸಿ, ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಲು ಈಶ್ವರ ಖಂಡ್ರೆ ಅವರು ಸೂಚಿಸಿದ್ದಾರೆ.
ಚಿರತೆ ಕಾರ್ಯಪಡೆಯ ಸಿಬ್ಬಂದಿಗೆ ಸೂಕ್ತ ತರಬೇತಿ ಕೊಡಿಸುವಂತೆ ಮತ್ತು ಅಣಕು ಕಾರ್ಯಾಚರಣೆಗಳನ್ನೂ ನಡೆಸಿ ಸಿಬ್ಬಂದಿಯನ್ನು ಸಜ್ಜುಗೊಳಿಸುವಂತೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಬೆಂಗಳೂರು ನಗರ ಮತ್ತು ಪರಿಸರಕ್ಕೆ ಪ್ರತ್ಯೇಕವಾಗಿ ಒಂದು ಕಾರ್ಯಪಡೆಯನ್ನು ರೂಪಿಸಲಾಗುತ್ತದೆ ಅವರು ತಿಳಿಸಿದ್ದಾರೆ.
ಬೊಮ್ಮನಹಳ್ಳಿ ಕೂಡ್ಲು ಗೇಟ್ ಬಳಿ ಪತ್ತೆಯಾದ ಚಿರತೆ ಸಾವು
ಬೆಂಗಳೂರಿನ ಬೊಮ್ಮನಹಳ್ಳಿಯ ಕೂಡ್ಲು ಗೇಟ್ ಬಳಿಯ ಕೃಷ್ಣಾ ರೆಡ್ಡಿ ಬಡಾವಣೆಯಲ್ಲಿ ಕಳೆದ ವಾರ ಚಿರತೆಯೊಂದು ಕಂಡುಬಂದು ಆತಂಕ ಮೂಡಿಸಿತ್ತು. ದೊಡ್ಡ ಪಾಳು ಬಿಟ್ಟ ಕಟ್ಟಡದಲ್ಲಿ ಕೆಲವು ದಿನ ವಾಸವಿದ್ದ ಈ ಚಿರತೆಯನ್ನು ನ. 1ರಂದು ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯಲಾಗಿತ್ತು. ಆದರೆ, ಅದು ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಏಟಿಗೆ ಪ್ರಾಣ ಕಳೆದುಕೊಂಡಿದೆ.
ಇದನ್ನೂ ಓದಿ: Operation Leopard : ಬೆಂಗಳೂರಿನಲ್ಲಿ ಆತಂಕ ಮೂಡಿಸಿದ್ದ ಚಿರತೆ ಗುಂಡೇಟಿಗೆ ಬಲಿ
ಎಲೆಕ್ಟ್ರಾನಿಕ್ ಸಿಟಿ ಬಳಿಕ ಮತ್ತೊಂದು ಚಿರತೆ ಪತ್ತೆ
ಬೊಮ್ಮನಹಳ್ಳಿಯಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಅರಣ್ಯ ಸಿಬ್ಬಂದಿ ಗುಂಡಿಗೆ ಬಲಿಯಾದ ಬೆನ್ನಲ್ಲೇ ರಾಜಧಾನಿ ವ್ಯಾಪ್ತಿಯಲ್ಲಿ ಮತ್ತೊಂದು ಚಿರತೆ ಪತ್ಯಕ್ಷವಾಗಿದೆ. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಚಿಕ್ಕ ತೋಗೂರು ಬಳಿ ಚಿರತೆ ಪ್ರತ್ಯಕ್ಷವಾಗಿ ಆತಂಕ ಮೂಡಿಸಿದೆ
ಕೆ.ಆರ್. ಪುರಂ ಅರಣ್ಯ ವಲಯ ವ್ಯಾಪ್ತಿಗೆ ಒಳಪಡುವ ಚಿಕ್ಕತೋಗೂರು ಬಳಿಯ ನೈಸ್ ರಸ್ತೆ ಸಮೀಪ ಶನಿವಾರ ಸಂಜೆ ಚಿರತೆ ಪ್ರತ್ಯಕ್ಷವಾಗಿದೆ. ಬಾಲಕನೊಬ್ಬ ಮನೆಯಲ್ಲಿ ಕುಳಿತಿದ್ದಾಗ ಚಿರತೆ ಮನೆಯೊಳಗೆ ನುಗ್ಗಿದೆ. ತಕ್ಷಣ ಆತ ಜೋರಾಗಿ ಕೂಗಿಕೊಂಡಿದ್ದರಿಂದ ಚಿರತೆ ಅಲ್ಲಿಂದ ಓಡಿ ಹೋಗಿದೆ. ಚಿಕ್ಕತೋಗೂರು ಸುತ್ತಮುತ್ತ ನೈಸ್ ರಸ್ತೆ ಜಾಗದಲ್ಲಿ ಕಳೆದ ಎರಡು ದಿನಗಳಿಂದ ಆಗಾಗ ಚಿರತೆ ಓಡಾಡುತ್ತಿತ್ತು ಎನ್ನಲಾಗಿದೆ. ಅದು ರಾತ್ರಿ ಮೂರು ಗಂಟೆಯಲ್ಲಿ ಬೀದಿ ನಾಯಿಯೊಂದನ್ನು ಚಿರತೆ ಎಳೆದೊಯ್ದಿರುವುದು ಕಂಡುಬಂದಿದೆ.