Site icon Vistara News

leopard attack: ಮಗನ ಬಲಿ ಪಡೆದ ಚಿರತೆಯನ್ನು ಕೊಂದು ಬಿಡಿ; ಸಚಿವ ಎಸ್.ಟಿ.ಸೋಮಶೇಖರ್ ಮುಂದೆ ಗೋಳಾಡಿದ ಕುಟುಂಬಸ್ಥರು

ಮೈಸೂರು: ಇಲ್ಲಿನ ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಜ.21ರಂದು ಚಿರತೆ ದಾಳಿಯಿಂದ (leopard attack) 11 ವರ್ಷದ ಬಾಲಕ ಬಲಿಯಾಗಿರುವ ಪ್ರಕರಣ ಜನರಲ್ಲಿ ಭೀತಿ ಹುಟ್ಟಿಸಿದೆ. ಇತ್ತ ನಮ್ಮ ಮಗನನ್ನು ಬಲಿ ಪಡೆದಿರುವ ಚಿರತೆಯನ್ನು ಕೊಂದುಬಿಡಿ ಎಂದು ಸಚಿವ ಎಸ್.ಟಿ. ಸೋಮಶೇಖರ್ ಮುಂದೆ ಕುಟುಂಬಸ್ಥರು ಗೋಳಾಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಮಂಗಳವಾರ ಮೃತರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮೊದಲಿಗೆ ಕನ್ನನಾಯಕನಹಳ್ಳಿ ಗ್ರಾಮದ ಮೃತ ಸಿದ್ದಮ್ಮ ಮನೆಗೆ ಭೇಟಿದ ಬಳಿಕ ಹೊರಳಹಳ್ಳಿ ಗ್ರಾಮದ ಮೃತ ಬಾಲಕ ಜಯಂತ್ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಎರಡೂ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ ಮಾಡಿದರು. ಇದೇ ವೇಳೆ ಜಯಂತ್‌ ಪೋಷಕರು ನಮ್ಮ ಮಗನನ್ನು ಬಲಿ ಪಡೆದಿರುವ ಚಿರತೆಯನ್ನು ಕೊಂದು ಬಿಡಿ ಎಂದು ಆಕ್ರೋಶ ಹೊರಹಾಕಿದ್ದರು.

ಈ ಸಂದರ್ಭದಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿದ ಸಚಿವ ಎಸ್‌.ಟಿ ಸೋಮಶೇಖರ್‌, ಚಿರತೆ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು, ಜಿಲ್ಲಾಡಳಿತದೊಂದಿಗೆ ಸಭೆ ಕರೆಯಲಾಗಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತರಲಿದ್ದಾರೆ ಎಂದರು. ಕಬ್ಬು ಕಟಾವು, ರಸ್ತೆ ಬದಿಯ ಮರದ ರೆಂಬೆ ಕಟಾವು, ಗ್ರಾಮಕ್ಕೆ ಬಸ್ ಸೌಕರ್ಯ, ಬೀದಿದೀಪಗಳ ವ್ಯವಸ್ಥೆ ಕಲ್ಪಿಸುವುದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದರ ಕುರಿತು ಜಿಲ್ಲಾಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕಠಿಣ ನಿರ್ಧಾರ ಕೈಗೊಳ್ಳಲಿದ್ದಾರೆ.‌ ಮತ್ತೆ ಈ ರೀತಿಯ ಅನಾಹುತ ಮರುಕಳಿಸದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಮೃತರ ಕುಟುಂಬ ಸದಸ್ಯರಿಗೆ ಪರಿಹಾರ ಕಲ್ಪಿಸಲಾಗಿದೆ. ಚಿರತೆ ದಾಳಿ ತಡೆಗೆ ಜಿಲ್ಲಾಡಳಿತದ ಜತೆ ವಿಶೇಷ ಸಭೆ ನಡೆಸಿ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Republic day : ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ ಈ ಸಲದ ಗಣರಾಜ್ಯೋತ್ಸವ ಪಥಸಂಚಲನ!

ಇನ್ನು ರಾತ್ರಿ ವೇಳೆ ಬೀದಿದೀಪಗಳ ವ್ಯವಸ್ಥೆ, ಶಾಲೆಗೆ ತೆರಳಲು ಮಕ್ಕಳಿಗೆ ಬಸ್ ಸೌಕರ್ಯ ಕಲ್ಪಿಸಬೇಕು ಎಂಬುದು ಸೇರಿದಂತೆ ನಾನಾ ಸಮಸ್ಯೆಗಳನ್ನು ಗ್ರಾಮಸ್ಥರು ಬಿಚ್ಚಿಟ್ಟರು. ಇದೇ ವೇಳೆ ಗ್ರಾಮಸ್ಥರಿಗೆ ಧೈರ್ಯ ತುಂಬಿದ ಸಚಿವರು, ಚಿರತೆ ದಾಳಿ ತಡೆಗೆ ಶಾಶ್ವತ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಶಾಸಕರಾದ ಎಂ.ಅಶ್ವಿನ್ ಕುಮಾರ್, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೇರಿದಂತೆ ಅನೇಕ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version