ಮೈಸೂರು: ಇಲ್ಲಿನ ತಿ.ನರಸೀಪುರದಲ್ಲಿ ಮುತ್ತತ್ತಿ ಗ್ರಾಮದಲ್ಲಿ ಚಿರತೆ ದಾಳಿ(Leopard Attack) ಮುಂದುವರಿದಿದೆ. ಮನೆಯ ಜಗುಲಿಯಲ್ಲಿ ಮಲಗಿದ್ದ ವೇಳೆ ಚಿರತೆಯೊಂದು ಎರಗಿದೆ. ಕರೋಹಟ್ಟಿ ಗ್ರಾಮದ ಮಹದೇವಯ್ಯ (55) ಎಂಬುವವರ ಮೇಲೆ ಚಿರತೆ ದಾಳಿ ನಡೆಸಿದೆ.
ಮಹದೇವಯ್ಯ ಜಗುಲಿಯ ಮೇಲೆ ಮಲಗಿದ್ದ ವೇಳೆ ಹಿಂದಿನಿಂದ ಬಂದ ಚಿರತೆ ದಾಳಿ ಮಾಡಿದೆ. ಕೊಂಚವೂ ವಿಚಲಿತರಾಗದೆ ಕೂಡಲೇ ತಮ್ಮ ಹೊದಿಕೆಯನ್ನು ಚಿರತೆ ಮೇಲೆ ಹಾಕಿದ್ದಾರೆ. ಈ ವೇಳೆ ಗಾಬರಿಯಾದ ಚಿರತೆ ಓಡಿ ಹೋಗಿದ್ದು, ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹದೇವಯ್ಯ ಮುತ್ತತ್ತಿ ಗ್ರಾಮಕ್ಕೆ ಮಗಳ ಮನೆಗೆ ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸದ್ಯ ಚಿರತೆ ದಾಳಿಗೆ ಒಳಗಾದವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇತ್ತ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚಿರತೆ ಸೆರೆಯಾದರೂ ನಿಲ್ಲದ ಭೀತಿ
ಇತ್ತೀಚೆಗೆ ಉಕ್ಕಲಗೆರೆ ಗ್ರಾಮದಲ್ಲಿ ಜನರ ನಿದ್ದೆಗೆಡಿಸಿದ್ದ ನರಹಂತಕ ಚಿರತೆ (Leopard Attack) ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿತ್ತು. ಡಿ.23ರ ಶುಕ್ರವಾರ ಮುಂಜಾನೆ ಕರುವನ್ನು ಬೇಟೆಯಾಡಲು ಬಂದ ಸುಮಾರು 7 ವರ್ಷದ ಗಂಡು ಚಿರತೆಯು ಬೋನಿನಲ್ಲಿ ಸೆರೆಯಾಗಿತ್ತು. ಡಿ.22ರಂದು ಮುತ್ತತ್ತಿ ಗ್ರಾಮದ ದಿಲೀಪ್ ಎಂಬುವರ ತೋಟದಲ್ಲಿ ಇರಿಸಿದ್ದ ಬೋನಿಗೆ 3 ವರ್ಷದ ಗಂಡು ಚಿರತೆ ಸೆರೆಯಾಗಿತ್ತು. ಆದರೆ ಈಗಲೂ ಚಿರತೆ ಹಾವಳಿ ಮುಂದುವರಿದಿದ್ದು, ಜನರು ಭಯಭೀತಗೊಂಡಿದ್ದಾರೆ.
ಚಿರತೆಗೆ ಬಲಿಯಾಗಿದ್ದ ವಿದ್ಯಾರ್ಥಿ
ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ ಎಂಬಾತ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದ. ಹೋಗುವಾಗಲೋ ಅಥವಾ ಬರುವಾಗಲೋ ಚಿರತೆ ಅವನ ಮೇಲೆ ದಾಳಿ ಮಾಡಿದ್ದು, ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದ.
ಜತೆಗೆ ಕೆಲವು ದಿನದ ಹಿಂದಷ್ಟೇ ಕಬ್ಬಿನ ಗದ್ದೆಗೆ ನೀರು ಬಿಡಲು ಹೋದ ವ್ಯಕ್ತಿ ಮೇಲೆ ಚಿರತೆ ಎರಗಿ ದಾಳಿ ನಡೆಸಿದ ಘಟನೆ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿತ್ತು. ಈ ಘಟನೆ ಬಳಿಕ ಎಲ್ಲೆಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತೋ ಅಲ್ಲೆಲ್ಲ ಅರಣ್ಯಾಧಿಕಾರಿಗಳು ಬೋನು ಇರಿಸಿದ್ದರು. ಉಕ್ಕಲಗೆರೆ, ಮುತ್ತತ್ತಿ ಸೇರಿ ಹಲವು ಗ್ರಾಮಗಳಲ್ಲಿ ಚಿರತೆ ಸೆರೆಯಾಗಿದ್ದವು. ಈಗ ಮತ್ತೆ ಮುತ್ತತ್ತಿ ಗ್ರಾಮದಲ್ಲಿ ಚಿರತೆ ಭೀತಿ ಹೆಚ್ಚಾಗಿದೆ.
ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಸಂಸತ್‌ನಂತೆಯೇ ಕರ್ನಾಟಕದಲ್ಲೂ ಅಧಿವೇಶನ ಮೊಟಕು?; ಮೀಸಲಾತಿ ಕುರಿತೂ ನಿರ್ಧಾರ: ಸೋಮವಾರ ಮಹತ್ವದ ಸಂಪುಟ ಸಭೆ