ಮೈಸೂರು: ಇಲ್ಲಿನ ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ (Leopard Attack) ಹೆಚ್ಚಾಗಿದೆ. ಕಬ್ಬಿನ ಗದ್ದೆಗೆ ನೀರು ಹಾಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ನುಗ್ಗಳ್ಳಿಕೊಪ್ಪಲು ಗ್ರಾಮದ ಸತೀಶ್ (33) ಚಿರತೆ ದಾಳಿಗೆ ಒಳಗಾದವರು.
ಎಂದಿನಂತೆ ಗದ್ದೆಗೆ ಹೋಗಿದ್ದ ಸತೀಶ್ ಕೆಲಸದಲ್ಲಿ ತೊಡಗಿದ್ದರು. ಇದೇ ವೇಳೆ ಚಿರತೆ ಅಲ್ಲಿಯೇ ಇತ್ತು. ಆದರೆ, ಸತೀಶ್‌ಗೆ ಇದರ ಅರಿವು ಇರಲಿಲ್ಲ. ಚಿರತೆ ಬಳಿ ಸತೀಶ್ ಹೋಗುತ್ತಿದ್ದಂತೆ ಏಕಾಏಕಿ ಎರಗಿದೆ. ಇದರಿಂದ ಸತೀಶ್ ಗಲಿಬಿಲಿಗೊಂಡಾರಾದರೂ ಜೋರಾಗಿ ಕೂಗಾಡಿದ್ದಲ್ಲದೆ, ಚಿರತೆಯಿಂದ ಬಿಡಿಸಿಕೊಂಡಿದ್ದಾರೆ. ಸತೀಶ್ ಅವರ ಚೀರಾಟ ಕೇಳಿ ಅಕ್ಕಪಕ್ಕದಲ್ಲಿದ್ದವರು ಓಡಿ ಬಂದಿದ್ದು, ಗಾಬರಿಗೊಂಡ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ.
ಗಾಯಗೊಂಡಿದ್ದ ಸತೀಶ್ ಅವರನ್ನು ಗ್ರಾಮಸ್ಥರು ಮಂಡ್ಯ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಕಾರ್ಯವೈಖರಿಗೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ | Leopard Attack | ರಿಪ್ಪನ್‌ಪೇಟೆಯಲ್ಲಿ ಗರ್ಭಿಣಿ ಹಸುವನ್ನು ಬಲಿ ಪಡೆದ ಚಿರತೆ; ಭೀತಿಯಲ್ಲಿ ಗ್ರಾಮಸ್ಥರು