ಮೈಸೂರು: ಇಲ್ಲಿನ ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ 3ನೇ ಬಲಿಯಾಗಿದೆ. ಕನ್ನನಾಯಕನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ಗ್ರಾಮದ ಸಿದ್ದಮ್ಮ (60) ಚಿರತೆ ದಾಳಿಗೆ (Leopard attack) ಬಲಿಯಾಗಿದ್ದಾರೆ.
ಸಿದ್ದಮ್ಮ ಮನೆಯಾಚೆಯಿದ್ದ ಸೌದೆ ಎತ್ತಿಕೊಳ್ಳಲು ಹೋಗಿದ್ದು ಈ ವೇಳೆ ಚಿರತೆ ದಾಳಿ ಮಾಡಿ ಬಹುದೂರ ಎಳೆದೊಯ್ದಿದೆ. ಸಿದ್ದಮ್ಮಳ ಕಿರುಚಾಟ ಕೇಳಿ ಹೊರ ಬಂದಾಗ ಚಿರತೆ ಕಂಡು ಭಯಗೊಂಡಿದ್ದಾರೆ. ಈ ವೇಳೆ ಗ್ರಾಮಸ್ಥರು ಕಿರುಚಾಡಿದ ಬೆನ್ನಲ್ಲೇ ಸ್ಥಳದಲ್ಲೇ ಮಹಿಳೆಯ ದೇಹ ಬಿಟ್ಟು ಚಿರತೆ ಓಡಿ ಹೋಗಿದೆ.
ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ನಡೆದು ಗಂಟೆಗಳು ಕಳೆದರೂ ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಚಿರತೆ ಹಿಡಿಯುವಂತೆ ಮನವಿ ಮಾಡಿದ್ದರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ.
ವಿದ್ಯಾರ್ಥಿ, ವಿದ್ಯಾರ್ಥಿನಿ ಚಿರತೆಗೆ ಬಲಿ
ಡಿಸೆಂಬರ್ ೧ರಂದು ಸಂಜೆ ತಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ ಮೇಘನಾ (೨೨) ಅವರು ಊಟ ಮಾಡಿ ಬಟ್ಟಲು ತೊಳೆದು ನೀರನ್ನು ಚೆಲ್ಲಲೆಂದು ಹೊರಗೆ ಬಂದಾಗ ಚಿರತೆ ದಾಳಿ ಮಾಡಿ ಅವರ ಪ್ರಾಣವನ್ನೇ ಕಸಿದಿತ್ತು. ಇದೇ ವೇಳೆ, ಅಕ್ಟೋಬರ್ ೩೧ರಂದು ಇದೇ ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಕಳೆದ ಅಕ್ಟೋಬರ್ ೩೧ರಂದು ಎಂ.ಎಲ್.ಹುಂಡಿ ಗ್ರಾಮದ ಮಂಜುನಾಥ್ (20) ಎಂಬ ಕಾಲೇಜು ವಿದ್ಯಾರ್ಥಿಯನ್ನು ಚಿರತೆ ಬಲಿ ಪಡೆದಿತ್ತು. . ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದಾಳಿ ನಡೆದಿತ್ತು.
ಇದನ್ನೂ ಓದಿ | Rahul Gandhi | ರಾಹುಲ್ ಗಾಂಧಿಯನ್ನು ಆದಿ ಶಂಕರರಿಗೆ ಹೋಲಿಸಿದ ಫಾರೂಕ್ ಅಬ್ದುಲ್ಲಾ