Site icon Vistara News

Leopard Attack | ಯುವಕನ ಪ್ರಾಣ ತೆಗೆದಿದ್ದ ನರಹಂತಕ ಚಿರತೆ ಕರು ತಿನ್ನಲು ಬಂದು ಬೋನಿಗೆ ಬಿತ್ತು

ಮೈಸೂರು: ಇಲ್ಲಿನ ತಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಜನರ ನಿದ್ದೆಗೆಡಿಸಿದ್ದ ನರಹಂತಕ ಚಿರತೆ (Leopard Attack) ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಶುಕ್ರವಾರ ಮುಂಜಾನೆ ಕರು ಬೇಟೆಯಾಡಲು ಬಂದ ಸುಮಾರು 7 ವರ್ಷದ ಗಂಡು ಚಿರತೆಯು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಚಿರತೆ ಸೆರೆ ಸಿಕ್ಕ ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ಮುಗಿಬಿದ್ದರು.

Leopard Attack

ವಿದ್ಯಾರ್ಥಿಯನ್ನು ಬಲಿ ಪಡೆದಿದ್ದ ಚಿರತೆ
ತಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದ ಬಳಿಯ ಶ್ರೀ ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ಎರಡು ಚಿರತೆಗಳು (Leopard in mysore) ಪ್ರತ್ಯಕ್ಷವಾಗಿತ್ತು. ಬಂಡೆಕಲ್ಲುಗಳ ಮೇಲೆ ಚಿರತೆ ಕುಳಿತಿರುವ ದೃಶ್ಯವನ್ನು ಗ್ರಾಮಸ್ಥರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.

Leopard Attack

ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ ಎಂಬಾತ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದ. ಹೋಗುವಾಗಲೋ ಅಥವಾ ಬರುವಾಗಲೋ ಚಿರತೆ ಅವನ ಮೇಲೆ ದಾಳಿ ಮಾಡಿದ್ದು, ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದ.

ಈ ಘಟನೆ ಬೆನ್ನಲ್ಲೆ ಚಿರತೆ ಪ್ರತ್ಯಕ್ಷದಿಂದ ಗ್ರಾಮಸ್ಥರಲ್ಲಿ‌ ಆತಂಕ ಹೆಚ್ಚಾಗಿ, ಚಿರತೆಗಳ ದಾಳಿ ಭೀತಿಯಿಂದ ಜಾನುವಾರುಗಳನ್ನು ಮೇಯಿಸಲು ಹೋಗಲು ಹಿಂದೇಟು ಹಾಕುತ್ತಿದ್ದರು. ಚಿರತೆಗಳನ್ನು ಸೆರೆ ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಡುವಂತೆ ಗ್ರಾಮಸ್ಥರ ಒತ್ತಾಯಿಸಿದ್ದರು.

ಜತೆಗೆ ಕೆಲವು ದಿನದ ಹಿಂದಷ್ಟೇ ಕಬ್ಬಿನ ಗದ್ದೆಗೆ ನೀರು ಬಿಡಲು ಹೋದ ವ್ಯಕ್ತಿ ಮೇಲೆ ಚಿರತೆ ಎರಗಿ ದಾಳಿ ನಡೆಸಿದ ಘಟನೆ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿತ್ತು. ಹೀಗಾಗಿ ಎಲ್ಲೆಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತೋ ಅಲ್ಲೆಲ್ಲ ಅರಣ್ಯಾಧಿಕಾರಿಗಳು ಬೋನು ಇರಿಸಿದ್ದರು. ಮೊನ್ನೆ ಮುತ್ತತ್ತಿ ಗ್ರಾಮದ ದಿಲೀಪ್ ಎಂಬುವರ ತೋಟದಲ್ಲಿ ಇರಿಸಿದ್ದ ಬೋನಿಗೆ 3 ವರ್ಷದ ಗಂಡು ಚಿರತೆ ಸೆರೆಯಾಗಿತ್ತು. ಮೂರ್ನಾಲ್ಕು ದಿನಗಳ ಹಿಂದೆ ಮುತ್ತತ್ತಿ ಗ್ರಾಮದಲ್ಲಿ ಶ್ವಾನದ ಮೇಲೆ ದಾಳಿ ಮಾಡಿತ್ತು. ಇದೀಗ ಉಕ್ಕಲಗೆರೆ ಗ್ರಾಮದಲ್ಲಿ ಜನರ ನಿದ್ದೆಗೆಡಿಸಿದ್ದ ನರಹಂತಕ ಚಿರತೆ ಸೆರೆಯಾಗಿದೆ.

ಇದನ್ನೂ ಓದಿ | Elephant attack | ನಿಲ್ಲದ ಕಾಡಾನೆ ಹಾವಳಿ; ಆಹಾರ ಅರಸಿ ನಾಡಿಗೆ ಬರುತ್ತಿರುವ ಗಜಪಡೆ

Exit mobile version