Site icon Vistara News

Leopard Attack | ಕೋಲಾರ, ರಾಮನಗರದಲ್ಲಿ ಬೋನಿಗೆ ಬಿದ್ದ 2 ಚಿರತೆ; ಗದ್ದೆಯಲ್ಲಿ ಪತ್ತೆಯಾದ ಮರಿಗಳು

ಕೋಲಾರ/ರಾಮನಗರ/ಚಾಮರಾಜನಗರ:ರಾಜ್ಯದ ಹಲವೆಡೆ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು, ಒಂದೇ ದಿನ ಎರಡು ಚಿರತೆ ಸೆರೆ ಆಗಿವೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೆಂಪಾಪುರ ಗ್ರಾಮದಲ್ಲಿ ಚಿರತೆಯೊಂದು (Leopard Attack) ಬೋನಿಗೆ ಬಿದ್ದಿದೆ. ಕಳೆದ ಹಲವು ದಿನಗಳಿಂದ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಮೂರು ದಿನಗಳ ಹಿಂದೆ ಬೋನು ಇಟ್ಟಿದ್ದರು. ಬೋನಿಗೆ ಬಿದ್ದ ಚಿರತೆಯನ್ನು ಸ್ಥಳಾಂತರ ಮಾಡಲಾಗಿದೆ.

ರಾಮನಗರದ ಕನಕಪುರ ತಾಲೂಕಿನ ಮಹಿಮನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ ಸೆರೆಯಾಗಿದೆ. ಹಲವು ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯು ಕುರಿ, ಹಸು, ಮೇಕೆ ಮೇಲೆ ದಾಳಿ ಮಾಡಿತ್ತು. ಚಿರತೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದರು. ಉಯ್ಯಂಬಳ್ಳಿ ಹೋಬಳಿ ಮಹಿಮನಹಳ್ಳಿ, ಕಪನೀಗೌಡನ ದೊಡ್ಡಿ, ಯಡಮಾರನ ಹಳ್ಳಿ ಗ್ರಾಮಗಳಲ್ಲಿ ರೈತರ ನಿದ್ರೆಗೆಡಿಸಿದ್ದ ಚಿರತೆ ಸೆರೆಯಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆ
ಚಾಮರಾಜನಗರ ತಾಲೂಕಿನ ಕಟ್ನವಾಡಿ ಗ್ರಾಮದಲ್ಲಿ ಗುರು ಎಂಬುವರ ಜಮೀನಿನಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಕಬ್ಬು ಕಟಾವು ಮಾಡುವಾಗ ಚಿರತೆ ಮರಿಗಳು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ತಾಯಿ ಚಿರತೆ ವಾಪಸ್ ಬರುವ ನಿರೀಕ್ಷೆಯಿಂದ ಕ್ಯಾಮೆರಾ ಟ್ರ್ಯಾಪ್ ಅಳವಡಿಸಿದ್ದಾರೆ. ಮರಿಗಳನ್ನು ಹುಡುಕಿಕೊಂಡು ತಾಯಿ ಚಿರತೆ ಎರಡು-ಮೂರು ದಿನಗಳಲ್ಲಿ ಬರುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ | Elephant attack | ಚಿಕ್ಕಮಗಳೂರು, ಚಾಮರಾಜನಗರದಲ್ಲಿ ಕಾಡಾನೆ ದಾಳಿ, ಮೂವರಿಗೆ ಗಾಯ

Exit mobile version