ದಾವಣಗೆರೆ/ರಾಮನಗರ/ಕಾರವಾರ: ದಾವಣಗೆರೆಯ ಚನ್ನಗಿರಿ ತಾಲೂಕಿನ ಬಸವಾಪುರ ಗ್ರಾಮದ ಕೆರೆ ಬಳಿ ಚಿರತೆಯೊಂದು (Leopard Attack) ಪ್ರತ್ಯಕ್ಷವಾಗಿದೆ. ಚಿರತೆ ಓಡಾಡುವ ದೃಶ್ಯವನ್ನು ಗ್ರಾಮದ ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಚನ್ನಗಿರಿ ತಾಲೂಕಿನ ಹಂಚಿನ ಸಿದ್ದಾಪುರ, ಗುರುರಾಜಪುರ, ಬಿಆರ್ ಟಿ ಕಾಲೋನಿ, ಮಾವಿನಕಟ್ಟೆ ಗ್ರಾಮಗಳ ರಸ್ತೆಗಳಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಚಿರತೆ ಸೆರೆ ಹಿಡಿಯಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಮನಗರದಲ್ಲಿ ಮತ್ತೆ ಚಿರತೆ ಭೀತಿ
ರಾಮನಗರದ ಮಾಗಡಿ ತಾಲೂಕಿನ ಬಂಟರಗುಪ್ಪೆಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಗ್ರಾಮದ ಬಳಿ ಚಿರತೆ ಪ್ರತ್ಯಕ್ಷವಾಗಿ ಗ್ರಾಮಸ್ಥರು ಆತಂಕದಲ್ಲಿಯೇ ದಿನದೂಡುವಂತಾಗಿದೆ. ಗ್ರಾಮದಿಂದ 200 ಮೀ. ಅಂತರದಲ್ಲಿರುವ ಬಂಡೆ ಮೇಲೆ ಕಾಣಿಸಿಕೊಂಡಿದೆ. ಬಂಟರಗುಪ್ಪೆ ಅರಣ್ಯ ಪ್ರದೇಶದಿಂದ ಗ್ರಾಮದ ಕಡೆ ಚಿರತೆ ಬಂದಿದ್ದು, ಶುಕ್ರವಾರ ಸಂಜೆ 6ರ ಸಮಯದಲ್ಲಿ ಕಾಣಿಸಿಕೊಂಡಿದೆ. ಚಿರತೆ ಕಂಡು ಭಯಭೀತರಾಗಿರುವ ಜನರು, ಅರಣ್ಯಾಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಎಷ್ಟೇ ಮನವಿ ಮಾಡಿದರೂ ಚಿರತೆ ಸೆರೆ ಹಿಡುಯುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಊರಿನ ಬಳಿ ಚಿರತೆ ಕಾಣಿಸಿಕೊಂಡ ಪರಿಣಾಮ ಗ್ರಾಮದಲ್ಲಿ ಅರಣ್ಯಾಧಿಕಾರಿಗಳು ಬೀಡುಬಿಟ್ಟಿದ್ದಾರೆ.
ಮಹಡಿ ಮೇಲೆ ಮಲಗಿದ್ದ ನಾಯಿಯನ್ನು ಹೊತ್ತೊಯ್ದಿದ ಚಿರತೆ
ಮನೆಯೊಂದರ ಮಹಡಿ ಮೇಲೆ ಮಲಗಿದ್ದ ನಾಯಿಯನ್ನು ಚಿರತೆಯೊಂದು ಹೊತ್ತೊಯ್ದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ. ತಾಲೂಕಿನ ಮಿರ್ಜಾನ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗರದಲ್ಲಿ ಇದೀಗ ಚಿರತೆ ಪ್ರತ್ಯಕ್ಷವಾಗಿದ್ದು, ನಾಯಿಯನ್ನು ಹೊತ್ತೊಯ್ದಿರುವ ದೃಶ್ಯಗಳು ಮನೆಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾಮನಗರದ ನಿವಾಸಿ ಅಗೊಸ್ತಿನೊ ಸಾಲೀಸ್ ರೊಡ್ರಿಗಿಸ್ ಎಂಬುವವರ ಮನೆಯ ಮಹಡಿಯ ಮೇಲೇರಿ ಅಲ್ಲಿ ಮಲಗಿದ್ದ ನಾಯಿಯನ್ನು ಚಿರತೆ ಕಚ್ಚಿಕೊಂಡು ಹೊತ್ತೊಯ್ದಿದೆ. ಸಿಸಿಕ್ಯಾಮೆರಾದಲ್ಲಿನ ಚಿರತೆ ಓಡಾಟದ ದೃಶ್ಯಗಳನ್ನು ಕಂಡು ಮನೆಯವರು ಆತಂಕಗೊಂಡಿದ್ದು, ಕೂಡಲೇ ಮಿರ್ಜಾನ ಉಪ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಿಮಿಸಿದ ಅಧಿಕಾರಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಚಿರತೆ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ಮಿರ್ಜಾನ ವಲಯದ ಅರಣ್ಯ ಪ್ರದೇಶದಲ್ಲಿ ಚಿರತೆ, ಹಂದಿಗಳ ಓಡಾಟ ಇದೆ. ಬಲಿಷ್ಠ ಚಿರತೆಗಳು ಕಾಡಿನಲ್ಲಿಯೇ ಬೇಟೆಯಾಡುತ್ತವೆ. ಆದರೆ, ವಯಸ್ಸಾದ ಚಿರತೆಗೆ ಬೇಟೆಯಾಡುವ ಶಕ್ತಿ ಕುಂಠಿತವಾಗಿರುತ್ತದೆ. ಆಗ ಅವು ನಾಡಿಗೆ ಬಂದು ನಾಯಿ, ಆಕಳನ್ನು ಬೇಟೆಯಾಡುತ್ತವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂತಹ ಚಿರತೆಗಳು ರಾತ್ರಿ 7ರ ಸಮಯ ಮನೆಯಿರುವ ಕಡೆ ಸಂಚರಿಸುತ್ತವೆ. ಆದರೆ ಮನುಷ್ಯನ ಮೇಲೆ ಎರಗುವ ಸಾಧ್ಯತೆ ಕಡಿಮೆ. ಇಂಥ ಚಿರತೆಯನ್ನು ಸೆರೆ ಹಿಡಿಯಲು ಬೋನ್ ಇಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹುಡುಗಿಯ ಜತೆ ಆಟವಾಡಿದ್ದಕ್ಕೆ ನಾಯಿಮರಿಯನ್ನೇ ಕೊಂದ ಪಾಪಿಗಳು; ವಿಡಿಯೊ ವೈರಲ್ ಬಳಿಕ ಬಿತ್ತು ಕೇಸ್
ಜನವಸತಿ ಪ್ರದೇಶದ ಬಳಿ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯ ನಿವಾಸಿಗಳಿಗೆ ಆತಂಕ ಉಂಟುಮಾಡಿದ್ದು, ಸಂಜೆ ವೇಳೆ ಮನೆಯಿಂದ ಹೊರಗೆ ಓಡಾಡಲು ಭಯಪಡುವಂತಾಗಿದೆ. ಹೀಗಾಗಿ ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.