Site icon Vistara News

Leopard attack | ಬೆಂಗಳೂರಲ್ಲಿ ಇನ್ನೂ ಸೆರೆಸಿಗದ ಚಿರತೆ; ಅರಣ್ಯ ಇಲಾಖೆ ಸಿಬ್ಬಂದಿ ಹೈ ಅಲರ್ಟ್‌, ಜನತೆಗೆ ಕಾಡಿದ ಜೀವಭಯ

leopard in kengeri forest gun ಕೆಂಗೇರಿ ಸುತ್ತಮುತ್ತ ಚಿರತೆ ದಾಳಿ ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವು ಪ್ರದೇಶದಲ್ಲಿ ಕಳೆದ ೨ ವಾರದಲ್ಲಿ ಚಿರತೆಗಳ ಹಾವಳಿ, ದಾಳಿ (Leopard attack) ಹೆಚ್ಚಾಗಿದ್ದು, ಜೀವ ಭಯವನ್ನು ಹುಟ್ಟುಹಾಕಿದೆ. ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಬೋನ್‌ಗಳನ್ನು ಇಟ್ಟು ಕಾರ್ಯಾಚರಣೆಗೆ ಮುಂದಾಗಲಾಗಿದೆ. ಅಲ್ಲದೆ, ಶುಕ್ರವಾರ ರಾತ್ರಿ ಇಡೀ ಅರಣ್ಯ ಇಲಾಖೆ ಸಿಬ್ಬಂದಿ ಬಂದೂಕು ಹಿಡಿದು ಓಡಾಡಿದ್ದಾರೆ. ಆದರೆ, ಎಲ್ಲಿಯೂ ಸಹ ಚಿರತೆ ಪತ್ತೆಯಾಗಿಲ್ಲ. ಇದು ನಾಗರಿಕರನ್ನು ಆತಂಕಕ್ಕೆ ದೂಡಿದೆ. ಚಿರತೆ ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ, ಮುಂಜಾನೆ ವಾಕಿಂಗ್‌ ಹೋಗುವ ಹಾಗೂ ಕೆಲಸಕ್ಕೆ ತೆರಳುವ ಜನರೆಲ್ಲರೂ ಜೀವವನ್ನು ಅಂಗೈಯಲ್ಲಿ ಹಿಡಿದು ಹೋಗುವಂತಾಗಿದೆ.

ಕಗ್ಗಲೀಪುರ ವಲಯದಲ್ಲಿ ಪಟಾಕಿ ಸಿಡಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ

ಒಟ್ಟು ನಾಲ್ಕು ಚಿರತೆಗಳು ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತ ಕಾಣಿಸಿಕೊಂಡಿದೆ ಎಂದು ಹೇಳಲಾಗಿರುವುದರಿಂದ ನಾಗರಿಕರ ಭಯವನ್ನು ಮತ್ತಷ್ಟು ಹೆಚ್ಚಳ ಮಾಡಿದೆ. ಕಾರಣ ಬೆಂಗಳೂರಿನ ಹೊರ ವಲಯದ ಅಲ್ಲಲ್ಲಿ ಅರಣ್ಯ ಪ್ರದೇಶಗಳು ಇದ್ದರೂ ಒಮ್ಮೆ ಚಿರತೆಯು ನಗರದ ಒಳಗೆ ಪ್ರವೇಶ ಮಾಡಿದರೆ, ಸುತ್ತಮುತ್ತಲೆಲ್ಲ ಕಡೆಗಳಲ್ಲಿ ಮನೆಗಳು, ಕಟ್ಟಡಗಳೇ ಇರುವುದರಿಂದ ದಾಳಿ ನಡೆದರೆ ಹೆಚ್ಚಿನ ಸಾವು-ನೋವುಗಳು ಸಂಭವಿಸುವ ಆತಂಕವು ಎಲ್ಲೆಡೆ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ ಒತ್ತಾಯಗಳು ಕೇಳಿಬಂದಿವೆ.

ಕೆಂಗೇರಿ ಬಳಿಯ ತುರಹಳ್ಳಿ ಫಾರೆಸ್ಟ್ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿರುವುದು, ಬನಶಂಕರಿ, ಕೆಂಗೇರಿ, ರಾಜರಾಜೇಶ್ವರಿ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಜನತೆಯನ್ನು ಭಯಭೀತಗೊಳಿಸಿದೆ. ಈಗಾಗಲೇ ಇಬ್ಬರು ಮಹಿಳೆಯರ ಮೇಲೆ‌ ದಾಳಿ ನಡೆಸಿ ಪರಾರಿಯಾಗಿರುವ ಚಿರತೆಯ ಹುಡುಕಾಟಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶತ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ | Leopard attack | ಹೊನ್ನಾವರದ ಹೊಸಾಕುಳಿಯ ಮನೆ ಅಂಗಳಕ್ಕೆ ಬಂದ ಚಿರತೆ, ನಾಯಿಯ ಅಬ್ಬರದ ಸದ್ದಿಗೆ ಎಸ್ಕೇಪ್!

ಸದ್ಯ ನಗರದ ಕೆಂಗೇರಿ-ಬನಶಂಕರಿ ಬಳಿ ಕಾಣಿಸಿಕೊಂಡಿರುವ ಚಿರತೆಯೊಂದು ತುರಹಳ್ಳಿ ಕಾಡಿನ ಕಡೆಗೆ ನುಗ್ಗಿದೆ. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ತಂತ್ರವನ್ನು ಹೆಣೆಯುತ್ತಿದ್ದಾರೆ. ಶುಕ್ರವಾರದಿಂದಲೇ ಸೆರೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದ ಅರಣ್ಯ ಅಧಿಕಾರಿಗಳು ಒಟ್ಟು ಮೂರು ಹಂತದಲ್ಲಿ ಕಾರ್ಯಾಚರಣೆಯನ್ನು ನಡೆಸಿದ್ದರು. ಮೊದಲಿಗೆ ಚಿರತೆ ಸಂಚರಿಸಿದ ಕೆಲವು ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸುವ ಮೂಲಕ ಅದರ ಪತ್ತೆಗೆ ಮುಂದಾಗಲಾಗಿತ್ತು. ಆದರೆ, ಪತ್ತೆಯಾಗಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಅಲ್ಲಲ್ಲಿ ಬೋನ್‌ಗಳನ್ನು ಇಟ್ಟು ಚಿರತೆಯ ಸೆರೆಗೆ ಪ್ರಯತ್ನ ಮಾಡಲಾಗಿದೆ. ಅಲ್ಲಿಯೂ ಯೋಜನೆ ಫಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಸ್ಥಳಗಳಲ್ಲಿ ರಾತ್ರಿ ಇಡೀ ಅರಣ್ಯ ಇಲಾಖೆ ಸಿಬ್ಬಂದಿ ಬಂದೂಕು ಹಿಡಿದು ಸಂಚರಿಸಿದ್ದಾರೆ. ಈ ಮಧ್ಯೆ ಡ್ರೋನ್‌ಗಳನ್ನೂ ಬಳಸಲಾಗಿದ್ದು, ಅದೂ ಸಹ ಯಾವುದೇ ಫಲ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಡ್ರೋನ್‌ ಕಾರ್ಯಾಚರಣೆಯನ್ನು ಮುಂದುವರಿಸಲು ತೀರ್ಮಾನವನ್ನು ಮಾಡಲಾಗಿತ್ತು.

ಓಂಕಾರ ಹಿಲ್ಸ್‌ ಸುತ್ತ ಹೆಚ್ಚಿದ ಕಾರ್ಯಾಚರಣೆ
ಓಂಕಾರ್ ಹಿಲ್ಸ್ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವ ಮಾಹಿತಿ ದೊರೆತಿದೆ. ಅಲ್ಲಿನ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಕಟ್ಟಡದ ಕಾಂಪೌಂಡ್​ ಮೇಲೆ ಚಿರತೆ ಹಾದು ಹೋಗಿರುವುದು ಗೊತ್ತಾಗಿದೆ. ಈ ದೃಶ್ಯಾವಳಿಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ಚಿರತೆ ಹೆಜ್ಜೆಯ ಜಾಡು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಅಲ್ಲದೆ, ಹೆಜ್ಜೆ ಗುರುತಿನ ಮೂಲಕ ಎಷ್ಟು ಚಿರತೆಗಳಿವೆ ಎಂಬುದರ ಪತ್ತೆಗೂ ಮುಂದಾಗಲಾಗುತ್ತಿದೆ.

ಸ್ಥಳೀಯರ ಸಹಕಾರ ಪಡೆದು ಸೆರೆಗೆ ತಂತ್ರ
ಅರಣ್ಯ ಅಧಿಕಾರಿಗಳು ಶನಿವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ತಯಾರಿ ಮಾಡಿಕೊಂಡಿದ್ದು, ಕೆಂಗೇರಿ ಬಳಿಯ ತುರಹಳ್ಳಿ ಅರಣ್ಯ ಬಳಿ ಹೆಚ್ಚಿನ ಜನರನ್ನು ನಿಯೋಜನೆ ಮಾಡಿದ್ದಾರೆ. ಅಲ್ಲದೆ, ಸ್ಥಳೀಯರ ಸಹಕಾರವನ್ನೂ ಪಡೆಯಲು ಮುಂದಾಗಿದ್ದು, ಎಲ್ಲರೂ ಅಲರ್ಟ್‌ ಆಗಿರುವಂತೆ ಕಂಡ ಕೂಡಲೇ ಮಾಹಿತಿ ನೀಡುವಂತೆ ಕೋರಿದ್ದಾರೆ.

ಇದನ್ನೂ ಓದಿ | Leopard attack | ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ

ಒಬ್ಬರೇ ಓಡಾಡದಂತೆ ಎಚ್ಚರಿಕೆ
ಕೋಡಿಪಾಳ್ಯ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೆಂಗೇರಿ ಬಳಿಯ ಕೋಡಿಪಾಳ್ಯ, ಗಾಣಕಲ್ಲು, ತುರಹಳ್ಳಿ ಸುತ್ತಮುತ್ತಲ ಜನರು ಒಬ್ಬೊಬ್ಬರೇ ಓಡಾಡದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ಕಾಡಿನ ಕಡೆಗೆ ಯಾರೂ ತೆರಳಕೂಡದು. ವಾಕಿಂಗ್ ಮಾಡುವಾಗ, ಓಡಾಡುವಾಗ ಗುಂಪಾಗಿ ಇರಲು ಸೂಚನೆ ನೀಡಲಾಗಿದ್ದು, ಎಲ್ಲಿಯಾದರೂ ಕಂಡುಬಂದಲ್ಲಿ ಕಗ್ಗಲೀಪುರ ವಲಯದ ಸಹಾಯವಾಣಿ 1926 ತಿಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮೈಕ್‌ ಹಿಡಿದು ಜನಜಾಗೃತಿ ಮೂಡಿಸುತ್ತಿದ್ದಾರೆ.

ಶಾಲೆಗೆ ಮಕ್ಕಳ ಕಳುಹಿಸಲು ಪೋಷಕರ ಹಿಂದೇಟು
ಬಿಬಿಎಂಪಿಯ ಕೊನೆಯ ವಾರ್ಡ್ ಆಗಿರುವ ಹೆಮ್ಮಿಗೆಪುರದಲ್ಲಿರು ಕೋಡಿಪಾಳ್ಯದಲ್ಲಿ ಬುಧವಾರ (ನ.೩೦) ಮಧ್ಯರಾತ್ರಿ ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿತ್ತು. ತುರಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಬರುವ ಗಾಣಕಲ್ಲು ಗ್ರಾಮದ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಶಾಲೆ ಪಕ್ಕದಲ್ಲೇ ಅರಣ್ಯ ವಲಯ ಇರುವುದರಿಂದ ಜನತೆ ಹೆದರಿದ್ದಾರೆ. ಕಾರಣ, ಈ ಗ್ರಾಮದ ಅಲ್ಲಲ್ಲಿ ಆಗಾಗ ನವಿಲುಗಳು, ಜಿಂಕೆಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಹಿಡಿಯಲು ಒಂದು ವೇಳೆ ಚಿರತೆ ಬಂದರೆ ಎಂಬ ಆತಂಕ ಸದ್ಯ ಎಲ್ಲರನ್ನೂ ಕಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಾಣಕಲ್ಲು ಗ್ರಾಮದ ಶಾಲೆ ಶಿಕ್ಷಕಿ ಪೂರ್ಣ ಭಟ್, ಶಾಲೆ ಕಾಡಂಚಿನಲ್ಲಿ ಇರುವುದರಿಂದ ನಮಗೂ ಭಯ ಇದೆ. ಆದರೆ, ಪ್ರಾಣಿಗಳಿಗೆ ಹೆದರುವ ಅಗತ್ಯವಿಲ್ಲ. ನಾವು ಅವುಗಳಿಗೆ ತೊಂದರೆ ಮಾಡಬಾರದು. ಆಗ ಅವುಗಳಿಂದಲೂ ಯಾವುದೇ ತೊಂದರೆ ಆಗದು ಎಂದು ಹೇಳಿದ್ದಾರೆ.

ಕೋಡಿಪಾಳ್ಯದ ರಸ್ತೆಯನ್ನು ಪ್ರತಿನಿತ್ಯ ಸಾವಿರಾರು ಜನರು ಬಳಸುತ್ತಿದ್ದಾರೆ. ಸುತ್ತಮುತ್ತಲಿನ ಹಲವಾರು ಪ್ರದೇಶಗಳಿಗೆ ಹೋಗಲು ಇದೇ ರಸ್ತೆ ಶಾರ್ಟ್‌ಕಟ್ ಆಗಿದೆ. ಇನ್ನು ಇಲ್ಲಿಯೇ ಬರುವ ಬಿಜಿಎಸ್ ಕಾಲೇಜಿನ ಹಿಂಭಾಗದ ಶೆಡ್‌ನಲ್ಲಿ ಹಲವಾರು ಕೂಲಿ ಕಾರ್ಮಿಕರ ಮಕ್ಕಳಿದ್ದು, ಅವರೆಲ್ಲರೂ ಇದೇ ರಸ್ತೆ ಮಾರ್ಗವಾಗಿ ಶಾಲೆಗೆ ನಡೆದು ಹೋಗಬೇಕು. ಆದರೆ, ಈಗ ಚಿರತೆ ಭಯದಿಂದ ಜಟ್ಟಿಗೆರೆಹಳ್ಳಿಯ ಸರ್ಕಾರಿ ಶಾಲೆಗೆ 8 ಮಕ್ಕಳು ಗೈರು ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಆದಷ್ಟು ಬೇಗ ಹಿಡಿಯುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿ ಎಂದು ಶಾಲೆಯ ಶಿಕ್ಷಕರೂ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Leopard attack | ಯುವತಿಯ ಬಲಿ ಪಡೆದ ಚಿರತೆಯನ್ನು ಗುಂಡಿಟ್ಟು ಸಾಯಿಸಲೂ ಪರ್ಮಿಷನ್‌ ಸಿಕ್ಕಿದೆ ಎಂದ ಅರಣ್ಯಾಧಿಕಾರಿ

ಗೋದಾಮುಗಳ ಬಳಿ ತಪಾಸಣೆ, ನಾಯಿ ಸಾಕಿದ್ದಕ್ಕೆ ಗರಂ
ತುರಹಳ್ಳಿ ಸುತ್ತಮುತ್ತ ಹಲವು ಗೋದಾಮುಗಳಿದ್ದು, ಅವುಗಳತ್ತ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಟ್ಟಿದ್ದಾರೆ. ಇವುಗಳ ಬಳಿ ನಾಯಿಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಗಸ್ತು ತಿರುಗಲಾಗಿದೆ. ಅಲ್ಲದೆ, ಎಲ್ಲಿಯಾದರೂ ಚಿರತೆ ಓಡಾಟ ಕಂಡುಬಂದರೆ ತಕ್ಷಣ ತಿಳಿಸುವಂತೆ ಗೋದಾಮುಗಳ ಸೆಕ್ಯುರಿಟಿ ಗಾರ್ಡ್‌ಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಗೋದಾಮುಗಳ ಬಳಿ ಹೆಚ್ಚಿನ ನಾಯಿಗಳು ಕಂಡುಬಂದಿದ್ದರಿಂದ ಗರಂ ಆದ ಅರಣ್ಯ ಇಲಾಖೆ ಅಧಿಕಾರಿಗಳು, ಇಷ್ಟೊಂದು ನಾಯಿಗಳನ್ನು ಏಕೆ ಸಾಕಿದ್ದಾರೆ. ನಾಯಿಗಳಿದ್ದರೆ ಚಿರತೆಗಳು ಬರುತ್ತವೆ ಎಂದು ಗುಡುಗಿದ್ದಾರೆ. ಅಲ್ಲದೆ, ಕೆಲವು ಗೋದಾಮುಗಳ ಪಕ್ಕದಲ್ಲಿ ಪ್ರಾಣಿಗಳ ಸೆರೆಗಾಗಿ ಉರುಳು ಹಾಕಲಾಗಿತ್ತು. ಇದನ್ನು ಗಮನಿಸಿದ ಸಿಬ್ಬಂದಿ, ಮತ್ತೆ ಎಂದೂ ಉರುಳು ಹಾಕಕೂಡದು. ಹಾಗೆ ಮಾಡಿದ್ದು ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.

ದೇವನಹಳ್ಳಿ ಏರ್ಪೋರ್ಟ್‌ ಬಳಿಯೂ ಹೆಚ್ಚಿದ ಆತಂಕ
ದೇವನಹಳ್ಳಿ ಏರ್ಪೋರ್ಟ್ ಮುಖ್ಯರಸ್ತೆ ಚಿಕ್ಕಜಾಲ ಸಮೀಪ ತರಬನಹಳ್ಳಿ ಸಮೀಪ ಚಿರತೆ ಓಡಾಟ ಹಿನ್ನೆಲೆಯಲ್ಲಿ ಅಲ್ಲಿನ ನಾಗರಿಕರು ಆತಂಕದಲ್ಲಿದ್ದಾರೆ. ಬೆಳಗ್ಗೆ ವಾಕಿಂಗ್‌ ಸಹಿತ ಹೊರಗಡೆ ಹೋಗಬೇಕೆಂದರೆ ಜೀವಭಯ ಕಾಡುತ್ತಿದೆ. ಆದಷ್ಟು ಬೇಗ ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯ ಮಾಡುತ್ತಿದ್ದಾರೆ. ಚಿರತೆ ಸೆರೆಗೆ ಅಲ್ಲಲ್ಲಿ ಬೋನನ್ನು ಇಡಲಾಗಿದ್ದರೂ ಇದುವರೆಗೂ ಚಿರತೆ ಬೋನಿಗೆ ಬಿದ್ದಿಲ್ಲ. ಈಗಾಗಲೇ ಐಟಿಸಿ ಕಾರ್ಖಾನೆ ಒಳಗಡೆ ಬೋನ್ ಅಳವಡಿಸಿ ಕಾರ್ಯಾಚರಣೆ ನಡೆಸುತ್ತಿದ್ದು, ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಾಗುತ್ತಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಐಟಿಸಿ‌ ಕಾರ್ಖಾನೆ ಆವರಣದಲ್ಲಿ ಚಿರತೆ ಓಡಾಟವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆದರೆ, ಕಾರ್ಮಿಕರಿಗೆ ರಜೆ ನೀಡದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ | Leopard Trapped | ಹೊನ್ನಾಳಿಯಲ್ಲಿ ಚಿರತೆ ಸೆರೆ, ತಿ. ನರಸೀಪುರದಲ್ಲಿ ಚಿರತೆ ಕಂಡಲ್ಲಿ ಶೂಟ್‌ ಮಾಡಲು ಆರ್ಡರ್

ದೊಡ್ಡಬಳ್ಳಾಪುರದಲ್ಲೂ ಆತಂಕ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ಚಿರತೆ ಸೆರೆಗೆ ಬೋನು ಇರಿಸಿದ್ದರೂ ಚಿರತೆ ಸೆರೆಯಾಗಿಲ್ಲ. ಬದಲಾಗಿ ಬೋನು ಇರಿಸಿರುವ ಜಾಗದ ಅಕ್ಕ‌ಪಕ್ಕದಲ್ಲಿರುವ ರಾಗಿ ಹೊಲದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಇದು ಗ್ರಾಮಸ್ಥರಲ್ಲಿ ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ. ಈಗ ರಾಗಿ ಕಟಾವಿಗೆ ಬಂದಿದ್ದು, ಕೃಷಿ ಚಟುವಟಿಕೆಗಾಗಿ ರೈತರು ಜಮೀನುಗಳತ್ತ ಹೋಗಲೂ ಹೆದರುವಂತಾಗಿದೆ.

ದೊಡ್ಡಬಳ್ಳಾಪುರದ ಚನ್ನಾಪುರದಲ್ಲಿ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದ್ದ ಹಿನ್ನೆಲೆಯಲ್ಲಿ ಆ ಪ್ರದೇಶದ ಸುತ್ತಮುತ್ತ ಬೋನ್‌ಗಳನ್ನು ಇಡಲಾಗಿದೆ. ಅಲ್ಲದೆ, ಈ ಪ್ರದೇಶಗಳ ಸುತ್ತಮುತ್ತ ಜಮೀನುಗಳು ಇರುವುದರಿಂದ ರೈತರು ಭಯಪಡುತ್ತಿದ್ದಾರೆ. ಶುಕ್ರವಾರ ಹೊಲಗಳಿಗೆ ತೆರಳಿದ್ದ ಎಲ್ಲರೂ ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ಹೋಗಿದ್ದಾರೆ.

ಇದನ್ನೂ ಓದಿ | Operation Leopard | ಬೆಂಗಳೂರು ಹೊರವಲಯದಲ್ಲೇ ಚಿರತೆ! ಅರಣ್ಯಾಧಿಕಾರಿಗಳ ಬಲೆಗೆ ಬೀಳುತ್ತಾ? ಬೆಂಗಳೂರು ಚಿರತೆ?

Exit mobile version