ಮಂಡ್ಯ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುತ್ತಿದ್ದ ಚಿರತೆಗಳು ಸಿಕ್ಕ ಸಿಕ್ಕ ಜಾನುವಾರುಗಳ ಮೇಲೆ ದಾಳಿ ನಡೆಸಿ (Leopard Attack) ಹೋಗುತ್ತಿದ್ದವು. ಇದೀಗ ನಾಗಮಂಗಲ ತಾಲೂಕಿನ ಹರಳಕೆರೆ ಗ್ರಾಮದಲ್ಲಿ ಚಿರತೆಗಳು ಕೊಟ್ಟಿಗೆಗೆ ನುಗ್ಗಿ 15 ಕುರಿ, ಮೇಕೆಗಳ ಮೇಲೆ ದಾಳಿ (Leopard Attack) ಮಾಡಿವೆ. ಗ್ರಾಮದ ಗೋಪಾಲ ಕೃಷ್ಣ ಎಂಬುವರ ತೋಟದ ಮನೆಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ.
ಕೊಟ್ಟಿಗೆಗೆ ನುಗ್ಗಿದ ಎರಡು ಚಿರತೆಗಳು ಐದು ಮೇಕೆ ಸೇರಿ 10 ಕುರಿಗಳ ಕತ್ತು ಸೀಳಿ ರಕ್ತ ಕುಡಿದಿವೆ. ಗ್ರಾಮದಲ್ಲಿ ಚಿರತೆಗಳ ಹಾವಳಿ ಇರುವ ಬಗ್ಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ.
15 ಮೇಕೆ ಮತ್ತು ಕುರಿಗಳ ಸಾವಿನಿಂದ ರೈತ ಗೋಪಾಲ ಕೃಷ್ಣ ಕಂಗಾಲಾಗಿದ್ದಾರೆ. ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದು, ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುಮಕೂರಲ್ಲಿ ಬೋನಿಗೆ ಬಿದ್ದ ಚಿರತೆ
ತುಮಕೂರು ಹೊರ ವಲಯದ ಕುಂದೂರಿನಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಕಳೆದ ಒಂದು ತಿಂಗಳಿಂದ ಗ್ರಾಮಸ್ಥರಿಗೆ ತಲೆನೋವಾಗಿದ್ದ ಚಿರತೆಯು ಸಿಕ್ಕ ಸಿಕ್ಕ ಕುರಿ, ಕೋಳಿ, ನಾಯಿಗಳನ್ನು ಬಲಿ ಪಡೆದಿತ್ತು. ಬುಧವಾರ ರಾತ್ರಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೆರೆಯಾಗಿದೆ.
ಇದನ್ನೂ ಓದಿ: Bengaluru News: ಸೊಳ್ಳೆ ಬತ್ತಿಯಿಂದ ಹಾರಿ ಹೋಯ್ತು ಪ್ರಾಣ; ಒಳ ಉಡುಪಿನಿಂದ ಪತ್ತೆಯಾಯ್ತು ಮೃತನ ಗುರುತು
ಈ ಹಿಂದೆ ಚಿಕ್ಕನಾಯಕನಹಳ್ಳಿ ತಾಲೂಕಿನ ಯಗಚಿಹಳ್ಳಿ ಗ್ರಾಮದ ತೋಟದ ಫಾರಂಗೆ ನುಗ್ಗಿದ ಚಿರತೆಯೊಂದು 200 ಕೋಳಿಗಳನ್ನು ತಿಂದು ಮುಗಿಸಿತ್ತು. ಮಹಾಲಕ್ಷ್ಮಿ ಗಿರೀಶ್ ಎಂಬುವರಿಗೆ ಸೇರಿದ ಕೋಳಿ ಫಾರಂಗೆ ಚಿರತೆ ನುಗ್ಗಿ 200 ಕೋಳಿಗಳ ಮಾರಣ ಹೋಮವಾಗಿತ್ತು.