ಮೈಸೂರು/ಉಡುಪಿ: ರಾಜ್ಯದ ಹಲವೆಡೆ ಚಿರತೆ ಹಾವಳಿ ಹೆಚ್ಚಾಗುತ್ತಿದೆ. ಮೈಸೂರಿನ ತಿ.ನರಸೀಪುರ ತಾಲೂಕಿನಲ್ಲಿ ಚಿರತೆಯೊಂದು (Leopard Attack) ಬೋನಿಗೆ ಬಿದ್ದರೆ, ಉಡುಪಿಯಲ್ಲಿ ಬಾವಿಗೆ ಬಿದ್ದಿದೆ.
ಟಿ. ನರಸೀಪುರದಲ್ಲಿ ಬೋನಿಗೆ ಬಿತ್ತು: ಕೆಲವು ದಿನದ ಹಿಂದಷ್ಟೇ ಕಬ್ಬಿನ ಗದ್ದೆಗೆ ನೀರು ಬಿಡಲು ಹೋದ ವ್ಯಕ್ತಿ ಮೇಲೆ ಚಿರತೆ ಎರಗಿ ದಾಳಿ ನಡೆಸಿದ ಘಟನೆ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿತ್ತು. ಹೀಗಾಗಿ ಎಲ್ಲೆಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತೋ ಅಲ್ಲೆಲ್ಲ ಅರಣ್ಯಾಧಿಕಾರಿಗಳು ಬೋನು ಇರಿಸಿದ್ದರು.
ಇದೀಗ ಮುತ್ತತ್ತಿ ಗ್ರಾಮದ ದಿಲೀಪ್ ಎಂಬುವರ ತೋಟದಲ್ಲಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. 3 ವರ್ಷದ ಗಂಡು ಚಿರತೆ ಸೆರೆಯಾಗಿದ್ದು, ಮೂರ್ನಾಲ್ಕು ದಿನಗಳ ಹಿಂದೆ ಮುತ್ತತ್ತಿ ಗ್ರಾಮದಲ್ಲಿ ಶ್ವಾನದ ಮೇಲೆ ದಾಳಿ ಮಾಡಿತ್ತು.
ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತೋಟದಲ್ಲಿ ಬೋನು ಇಟ್ಟಿದ್ದರು. ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಬೇಟೆಗಾಗಿ ಬಂದು ಬಾವಿಗೆ ಬಿದ್ದ ಚಿರತೆ
ಉಡುಪಿಯ ಕಾರ್ಕಳದ ಬಜಗೋಳಿಯಲ್ಲಿ ಚಿರತೆಯೊಂದು ಬಾವಿಗೆ ಬಿದ್ದಿರುವ ಘಟನೆ ನಡೆದಿದೆ. ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಚಿರತೆ ಬಂದಿದ್ದು, ಈ ವೇಳೆ ಗ್ರಾಮದ ಶ್ರೀನಿವಾಸ ಆಚಾರ್ಯ ಎಂಬುವವರ ಮನೆಯ ಬಾವಿಗೆ ಬಿದ್ದಿದೆ. ವಿಷಯ ತಿಳಿಯುತ್ತಿದ್ದ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ಜಂಟಿ ಕಾರ್ಯಾಚರಣೆಯಲ್ಲಿ ಬಾವಿಗೆ ಬೋನು ಇಳಿಸಿ ಚಿರತೆಯನ್ನು ಮೇಲೆಕ್ಕೆ ಎತ್ತಿ ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ | BlackBuck | ಕಾಡಿನಿಂದ ನಾಡಿಗೆ ಬಂದಿದ್ದ ಕೃಷ್ಣ ಮೃಗವನ್ನು ಬೇಟೆಯಾಡಿದ ಬೀದಿನಾಯಿಗಳು