ಮೈಸೂರು: ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ಚಿರತೆ ದಾಳಿಯಿಂದ (leopard attack) 11 ವರ್ಷದ ಬಾಲಕ ಬಲಿಯಾಗಿರುವ ಪ್ರಕರಣ ಜನರಲ್ಲಿ ಭೀತಿ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಮುಂದಾಗಿದ್ದು, ಅಗತ್ಯ ಕ್ರಮವನ್ನು ಕೈಗೊಂಡಿವೆ. ಕಬ್ಬಿನ ತೋಟಗಳಲ್ಲಿ ಚಿರತೆಗಳು ವಾಸಿಸುವ ಹಿನ್ನೆಲೆಯಲ್ಲಿ ೧೫ ದಿನಗಳೊಳಗೆ ಕಬ್ಬಿನ ಕಟಾವಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ತಿ.ನರಸೀಪುರ ತಾಲೂಕಿನಲ್ಲಿ ಗಡಿ ಪ್ರದೇಶಗಳೂ ಸೇರಿದಂತೆ ಎಲ್ಲ ಕಡೆ ಕಬ್ಬು ಕಟಾವನ್ನು ೧೫ ದಿನಗಳೊಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಕೃಷಿ ಇಲಾಖೆ, ಆಹಾರ ಮತ್ತು ಸರಬರಾಜು ಇಲಾಖೆ, ಬಣ್ಣಾರಿ ಅಮ್ಮನ್ ಕಾರ್ಖಾನೆ ಹಾಗೂ ತಹಸೀಲ್ದಾರ್‌ಗಳೊಂದಿಗೆ ಕಬ್ಬು ಬೆಳೆ ಕಟಾವು ಕುರಿತಂತೆ ಸೋಮವಾರ (ಜ.೨೨) ಅಧಿಕಾರಿಗಳ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು, ಕಬ್ಬು ಕಟಾವನ್ನು ಬೇಗ ಮುಗಿಸಲು ಸೂಚಿಸಿದ್ದರು.
ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ರಾಜೇಂದ್ರ ಸೂಚನೆ ನೀಡಿದ್ದು, ಚಿರತೆ ಸೆರೆ ಕಾರ್ಯಾಚರಣೆಗೆ ಚುರುಕು ಮುಟ್ಟಿಸಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಕಬ್ಬು ಕಟಾವು ಕಾರ್ಯದಲ್ಲಿ 19 ತಂಡಗಳು ತೊಡಗಿಕೊಂಡಿದ್ದು, ಪ್ರತಿ ತಂಡದಿಂದ 15 ಟನ್ ಕಬ್ಬು ಕಟಾವು ಮಾಡುವಂತೆ ಸೂಚನೆ ನೀಡಲಾಗಿದೆ. ಈ ತಂಡವನ್ನು 30ಕ್ಕೇರಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Leopard attack | ಉಡುಪಿ ಪರ್ಕಳ ಭಾಗದಲ್ಲೂ ಚಿರತೆ ದಾಳಿ: ಗದ್ದೆಯಲ್ಲಿ ಶವವಾಗಿ ಪತ್ತೆಯಾದ ಕೋಣ
ಶನಿವಾರ ತಡರಾತ್ರಿ ಚಿರತೆ ದಾಳಿ ಪ್ರಕರಣ
ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ಚಿರತೆಯೊಂದು ದಾಳಿ ನಡೆಸಿದ್ದು, ೧೧ ವರ್ಷದ ಜಯಂತ್‌ನನ್ನು ಎಳೆದುಕೊಂಡು ಹೋಗಿತ್ತು. ಜಯಂತ್ ಶವಕ್ಕಾಗಿ ಗ್ರಾಮಸ್ಥರು ರಾತ್ರಿಯಿಡಿ ಹುಡುಕಾಟ ನಡೆಸಿದ್ದರು. ಭಾನುವಾರ ಬೆಳಗ್ಗೆ ಜಯಂತ್ ಮೃತದೇಹ ಪತ್ತೆಯಾಗಿದೆ. ಬಾಲಕನ ರುಂಡವನ್ನು ಚಿರತೆ ಹೊತ್ತೊಯ್ದಿತ್ತು. ಇದು ಎಲ್ಲರನ್ನೂ ಆತಂಕಕ್ಕೆ ದೂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು, ಜಿಲ್ಲಾಧಿಕಾರಿಗಳು ಹೊರಳಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ತಿ.ನರಸೀಪುರ ತಾಲೂಕಲ್ಲಿ ನವೆಂಬರ್‌ನಿಂದ ನಡೆದಿರುವ ದಾಳಿ
ತಿ.ನರಸೀಪುರ ತಾಲೂಕಿನ ಕಳೆದ ನವೆಂಬರ್‌ನಿಂದ ನಿರಂತರವಾಗಿ ಚಿರತೆ ದಾಳಿ ನಡೆದಿದ್ದು, ನಾಲ್ವರು ಬಲಿಯಾದಂತಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಜನತೆ ತೀವ್ರ ಆತಂಕ ಹಾಗೂ ಭಯದಲ್ಲಿದ್ದಾರೆ. ಮೃತಪಟ್ಟವರ ವಿವರ ಇಂತಿದೆ. ೨೦೨೨ ನವೆಂಬರ್ 1: ಉಕ್ಕಲಗೆರೆ ಮಂಜುನಾಥ್, ೨೦೨೨ ಡಿಸೆಂಬರ್ 2: ಎಸ್.ಕೆಬ್ಬೇಹುಂಡಿ ಮೇಘನಾ, ೨೦೨೩ ಜನವರಿ 20: ಕನ್ನಾಯಕನಹಳ್ಳಿ ಸಿದ್ದಮ್ಮ, ೨೦೨೩ ಜನವರಿ 22: ಹೊರಳಹಳ್ಳಿ ಜಯಂತ್ ಅವರು ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಒಂಟಿ ಓಡಾಟ ಬೇಡ: ಅರಣ್ಯ ಇಲಾಖೆ ಪ್ರಕಟಣೆ
ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ ನಾಲ್ಕನೇ ಬಲಿಯಾಗಿರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಒಂಟಿಯಾಗಿ ಓಡಾಡಬಾರದು. ಸಂಜೆ 6 ಗಂಟೆಯೊಳಗೆ ಎಲ್ಲರೂ ಮನೆ ಸೇರಿಕೊಳ್ಳಬೇಕು. ಬಯಲು ಬಹಿರ್ದೆಸೆಗೆ ಹೋಗಬಾರದು. ಚಿರತೆಯ ಚಲನವಲನ ಕಂಡರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಬೇಕು ಎಂದು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಗ್ರಾಮಸ್ಥರಿಂದ ಪ್ರತಿಭಟನೆ
ಹೊರಳಹಳ್ಳಿಯ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಚಿರತೆ ದಾಳಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಭಾನುವಾರ ಪ್ರತಿಭಟನೆ ನಡೆಸಿದ್ದರು. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಚಿರತೆಗಳ ದಾಳಿ ಹೆಚ್ಚಾಗುತ್ತಿದ್ದು, ಮನುಷ್ಯರು, ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಲೇ ಇವೆ. ನಮಗೆ ಮನೆಯಿಂದ ಹೊರಗೆ ಕಾಲಿಡಲೂ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆ ಮೇಲೆ ಟಿಟಿಇ ಮತ್ತು ಇನ್ನೊಬ್ಬನಿಂದ ಅತ್ಯಾಚಾರ; ಎಚ್ಚರ ತಪ್ಪಿಸಿ ಕೃತ್ಯ
ಸೌಜನ್ಯಕ್ಕಾದರೂ ಉಸ್ತುವಾರಿ ಸಚಿವರು, ಅರಣ್ಯ ಇಲಾಖೆ ಸಚಿವರು ಭೇಟಿ ನೀಡಿಲ್ಲ. ಚಿರತೆ ದಾಳಿಯಿಂದ ದಿನನಿತ್ಯ ಸಾಯುತ್ತಿರುವ ಬಡ ಜೀವಗಳಿಗೆ ಬೆಲೆಯಿಲ್ಲವೇ ಎಂದೂ ಜನರು ಆಕ್ರೋಶ ಹೊರಹಾಕಿದ್ದರು. ತಾಲೂಕಿನ ಜನತೆ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ಸೃಷ್ಟಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಚಿರತೆ ಸೆರೆ ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕಿದೆ. ಇಲ್ಲದಿದ್ದರೆ ಜನತೆಯೇ ಅಧಿಕಾರಿಗಳು, ಸರ್ಕಾರ ಮತ್ತು ಆಡಳಿತದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದು ಎಚ್ಚರಿಸಿದ್ದರು.